ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಐತಿಹಾಸಿಕ ಹಾಗೂ ಪುರಾತತ್ವ ಮಹತ್ವದ ಸನ್ನತಿಯನ್ನು ಅಂತಾರಾಷ್ಟ್ರೀಯ ಪಾರಂಪರಿಕ, ಸಾಂಸ್ಕೃತಿಕ ಮತ್ತು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಬಂಧಿಸಿದ 2026ನೇ ಸಾಲಿನ ವಿಧೇಯಕಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ದೊರಕಿರೋದರಿಂದ ಜಿಲ್ಲೆಯಲ್ಲಿರುವ ಪ್ರಾಚೀನ ಬೌದ್ಧ ನೆಲೆ ಪ್ರಗತಿಗೆ ಯೋಗಾಯೋಗ ಕೂಡಿಬಂದಂತಾಗಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಐತಿಹಾಸಿಕ ಹಾಗೂ ಪುರಾತತ್ವ ಮಹತ್ವದ ಸನ್ನತಿಯನ್ನು ಅಂತಾರಾಷ್ಟ್ರೀಯ ಪಾರಂಪರಿಕ, ಸಾಂಸ್ಕೃತಿಕ ಮತ್ತು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಬಂಧಿಸಿದ 2026ನೇ ಸಾಲಿನ ವಿಧೇಯಕಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ದೊರಕಿರೋದರಿಂದ ಜಿಲ್ಲೆಯಲ್ಲಿರುವ ಪ್ರಾಚೀನ ಬೌದ್ಧ ನೆಲೆ ಪ್ರಗತಿಗೆ ಯೋಗಾಯೋಗ ಕೂಡಿಬಂದಂತಾಗಿದೆ.ಸನ್ನತಿಯ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಪುರಾತತ್ವ ಮಹತ್ವವ ವಿಶ್ವಮಟ್ಟದಲ್ಲಿ ಪರಿಚಯಿಸುವುದರ ಜತೆಗೆ, ಈ ಪ್ರದೇಶದ ಸಮಗ್ರ ಅಭಿವೃದ್ಧಿ, ಪಾರಂಪರಿಕ ತಾಣಗಳ ಸಂರಕ್ಷಣೆ ಹಾಗೂ ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಈ ಪ್ರಾಧಿಕಾರದ ಪ್ರಮುಖ ಉದ್ದೇಶವಾಗಿದೆ. ಈ ಸಂಬಂಧ ಪ್ರತ್ಯೇಕ ಕಾಯ್ದೆ ರೂಪಿಸಿ ಪ್ರಾಧಿಕಾರಕ್ಕೆ ಕಾನೂನುಬದ್ಧ ಅಧಿಕಾರ ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆನೀಡಲಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. *ಅಶೋಕನ ಶಾಸನಗಳು, ಬೌದ್ಧ ಪರಂಪರೆಯ ನೆಲೆ ಸನ್ನತಿ: ಸನ್ನತಿಯು ಪ್ರಾಚೀನ ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿದ್ದು, ಐತಿಹಾಸಿಕ ಮತ್ತು ಪುರಾತತ್ವದ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿದೆ. ಇಲ್ಲಿ ದೊರೆತಿರುವ ಅಶೋಕನ ಶಾಸನಗಳು ಹಾಗೂ ಬೌದ್ಧ ಕಾಲಘಟ್ಟದ ಪುರಾತನ ಅವಶೇಷಗಳು ಈ ಪ್ರದೇಶದ ಐತಿಹಾಸಿಕ ಮಹತ್ವವನ್ನು ಸಾರುತ್ತವೆ.ಭಗವಾನ್ ಬುದ್ಧನ ತತ್ವಗಳು, ಬೋಧನೆಗಳು ಹಾಗೂ ಬೌದ್ಧ ಪರಂಪರೆ ಪರಿಚಯಿಸುವ ಸಾಂಸ್ಕೃತಿಕ ಕೇಂದ್ರವಾಗಿ ಸನ್ನತಿಯನ್ನು ಅಭಿವೃದ್ಧಿಪಡಿಸುವುದು ವಿಧೇಯಕದ ಪ್ರಮುಖ ಆಶಯವಾಗಿದೆ. ಪುರಾತನ ಸ್ಮಾರಕಗಳು ಮತ್ತು ಪಾರಂಪರಿಕ ತಾಣಗಳ ಸಂರಕ್ಷಣೆ, ಪುರಾತತ್ವ ಅಧ್ಯಯನ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ಹಾಗೂ ಅಂತಾರಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ರೂಪಿಸುವ ಉದ್ದೇಶವನ್ನು ಕಾಯ್ದೆಯಲ್ಲಿ ಒಳಗೊಳ್ಳಲಾಗಿದೆ.*ಪ್ರಾಧಿಕಾರದ ರಚನೆ ಮತ್ತು ಅಧಿಕಾರಗಳು: ಸನ್ನತಿ ಅಭಿವೃದ್ಧಿ ಪ್ರಾಧಿಕಾರ ಪ್ರತ್ಯೇಕ ಕಾನೂನುಬದ್ಧ ಸಂಸ್ಥೆಯಾಗಿ ರಚಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಸಹ-ಅಧ್ಯಕ್ಷರಾಗಿದ್ದಾರೆ. ಸಂಬಂಧಪಟ್ಟ ಇಲಾಖೆಗಳ ಸಚಿವ, ಶಾಸಕರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪ್ರಾಧಿಕಾರದ ಸದಸ್ಯರಾಗಿರುತ್ತಾರೆ. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಕನಿಷ್ಠ ಒಬ್ಬರನ್ನು ಒಳಗೊಂಡಂತೆ ಗರಿಷ್ಠ ಐವರು ನಾಮನಿರ್ದೇಶಿತ ಸದಸ್ಯರಿಗೂ ಅವಕಾಶವಿದೆ.ಸರ್ಕಾರದ ಉಪ ಕಾರ್ಯದರ್ಶಿ ಹುದ್ದೆಗಿಂತ ಕಡಿಮೆಯಿಲ್ಲದ ಶ್ರೇಣಿಯ ಅಧಿಕಾರಿಯನ್ನು ಪ್ರಾಧಿಕಾರದ ಆಯುಕ್ತರನ್ನಾಗಿ ನೇಮಕ ಮಾಡಲಾಗುತ್ತದೆ. ಆಯುಕ್ತರು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಹಾಗೂ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು, ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆಗಾಗಿ ಪ್ರತ್ಯೇಕ ನಿಯಂತ್ರಕರ ನೇಮಕಕ್ಕೂ ಅವಕಾಶವಿದೆ.ಸನ್ನತಿಯ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರವು ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರದ ಅನುಮೋದನೆ ಪಡೆಯಬೇಕು. ಅನುಮೋದಿತ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿದೆ. ರಸ್ತೆ, ಬೀದಿ ದೀಪ, ಸ್ವಚ್ಛತೆ, ಒಳಚರಂಡಿ, ಕುಡಿಯುವ ನೀರು, ವಿದ್ಯುತ್, ಸಾರ್ವಜನಿಕ ಸೌಲಭ್ಯಗಳು, ಮಾರುಕಟ್ಟೆ, ಗ್ರಂಥಾಲಯ, ಮನರಂಜನಾ ಕೇಂದ್ರ ಸೇರಿದಂತೆ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಕಲ್ಪಿಸಲಾಗಿದೆ.*ಪಾರಂಪರಿಕ ತಾಣಗಳ ಸಂರಕ್ಷಣೆಗೆ ಆದ್ಯತೆ: ಸನ್ನತಿಯ ಅಧಿಸೂಚಿತ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಪಾರಂಪರಿಕ ತಾಣಗಳ ನಿರ್ವಹಣೆ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಅಗತ್ಯವಿದ್ದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಭೂಸ್ವಾಧೀನ ಮಾಡಿಕೊಳ್ಳಲು ಕೂಡ ವಿಧೇಯಕದಲ್ಲಿ ಅವಕಾಶವಿದೆ. ಪ್ರಾಧಿಕಾರದ ಆಡಳಿತಾತ್ಮಕ ವೆಚ್ಚಗಳನ್ನು ಭರಿಸಲು ಪ್ರತ್ಯೇಕ ನಿಧಿ ಸ್ಥಾಪಿಸಲಾಗುತ್ತದೆ. ಪ್ರಾಧಿಕಾರವು ಸ್ವಾವಲಂಬಿಯಾಗುವವರೆಗೆ ಅದರ ಆಡಳಿತಾತ್ಮಕ ವೆಚ್ಚಗಳಿಗೆ ಸಮಾನವಾದ ವಾರ್ಷಿಕ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. *ವಿಧಾನಮಂಡಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ: 2025-26ನೇ ಸಾಲಿನ ರಾಜ್ಯ ಬಜೆಟ್ನ 230ನೇ ಪ್ಯಾರಾದಲ್ಲಿ ಮುಖ್ಯಮಂತ್ರಿಗಳು ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿ ಘೋಷಿಸಿದ್ದರು. ಅದರಂತೆ, 2025ರ ಜೂನ್ 27ರಂದು ಸರ್ಕಾರ ತಾತ್ವಿಕ ಅನುಮೋದನೆ ನೀಡಿತ್ತು. ಪ್ರತ್ಯೇಕ ಕಾಯ್ದೆ ರೂಪಿಸಿ ಪ್ರಾಧಿಕಾರ ರಚಿಸುವ ಷರತ್ತಿನ ಹಿನ್ನೆಲೆಯಲ್ಲಿ ಇದೀಗ 2026ನೇ ಸಾಲಿನ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ಸಿದ್ಧಪಡಿಸಲಾಗಿದೆ.ಪ್ರಾಚೀನ ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿರುವ ಸನ್ನತಿ, ಅಶೋಕನ ಶಾಸನಗಳು ಹಾಗೂ ಬೌದ್ಧ ಕಾಲಘಟ್ಟದ ಪುರಾತನ ಅವಶೇಷಗಳಿಂದಾಗಿ ವಿಶ್ವದ ಗಮನ ಸೆಳೆದಿದೆ. ಸನ್ನತಿಯ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಪುರಾತತ್ವ ಮಹತ್ವ ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಹಾಗೂ ಈ ಅಮೂಲ್ಯ ಪರಂಪರೆ ಮುಂದಿನ ಪೀಳಿಗೆಗೆ ಸಂರಕ್ಷಿಸಿ ಉಳಿಸುವುದು, ಭಗವಾನ್ ಬುದ್ಧನ ತತ್ವಗಳು, ಬೋಧನೆಗಳು ಮತ್ತು ಬೌದ್ಧ ಪರಂಪರೆ ಪರಿಚಯಿಸುವ ಸಾಂಸ್ಕೃತಿಕ ಕೇಂದ್ರವಾಗಿ ಸನ್ನತಿ ರೂಪಿಸುವುದರ ಜತೆಗೆ, ಪುರಾತನ ಸ್ಮಾರಕಗಳ ಸಂರಕ್ಷಣೆ, ಪುರಾತತ್ವ ಅಧ್ಯಯನ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದೇ ಪ್ರಾಧಿಕಾರದ ಪ್ರಮುಖ ಆಶಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.