ಸಾರಾಂಶ
ಈ ದೇಶಕ್ಕೆ ಒಳ್ಳೆಯ ಭವಿಷ್ಯ ಇರುವುದು ಕೊಡಲಿ, ಕುಡುಗೋಲಿನಿಂದ ಅಲ್ಲ, ಅದು ಪೆನ್ನಿನಿಂದ ಮಾತ್ರ ಸಾಧ್ಯ ಎಂದು ಜಿಪಂ ಮಾಜಿ ಅಧ್ಯಕ್ಷ ಹಾಗೂ ಬಂಜಾರಾ ಸಮಾಜದ ಹಿರಿಯ ಮುಖಂಡ ಹೂವಪ್ಪ ರಾಠೋಡ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಈ ದೇಶಕ್ಕೆ ಒಳ್ಳೆಯ ಭವಿಷ್ಯ ಇರುವುದು ಕೊಡಲಿ, ಕುಡುಗೋಲಿನಿಂದ ಅಲ್ಲ, ಅದು ಪೆನ್ನಿನಿಂದ ಮಾತ್ರ ಸಾಧ್ಯ ಎಂದು ಜಿಪಂ ಮಾಜಿ ಅಧ್ಯಕ್ಷ ಹಾಗೂ ಬಂಜಾರಾ ಸಮಾಜದ ಹಿರಿಯ ಮುಖಂಡ ಹೂವಪ್ಪ ರಾಠೋಡ ಅಭಿಪ್ರಾಯಪಟ್ಟರು.ನಗರದ ಸಿಗಿಕೇರಿ ಕ್ರಾಸ್ ನ ಎಸ್ಆರ್‌ಆರ್ ಎಜುಕೇರ್ ಅಕಾಡೆಮಿಯ ಧರ್ತಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಪಬ್ಲಿಕ್ ಶಾಲೆಯ 3ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದು ಬಹಳಷ್ಟು ತಾಯಂದಿರು ಮತ್ತೊಬ್ಬರ ಮನೆಯಲ್ಲಿ ಮುಸುರೆ ಕೆಲಸ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪಾಲಕರಿಗೆ ಯಾವ ತೊಂದರೆ ಇದ್ದರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಹಿಂಜರಿಯದೆ ಮುನ್ನುಗ್ಗಿದರೆ ಮನೆಗೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.ಸಾನ್ನಿಧ್ಯ ವಹಿಸಿದ್ದ ಶಿರೂರಿನ ಶಿವಯೋಗಿ ನಿಸರ್ಗ ಚಿಕಿತ್ಸೆ ಕೇಂದ್ರ ಹಾಗೂ ಚಿತ್ತರಗಿ ವಿಜಯ ಮಹಾಂತೇಶ್ವರ ತೀರ್ಥದ ಶ್ರೀ ಬಸವಲಿಂಗಪ್ಪ ಸ್ವಾಮೀಜಿ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆ ಕಟ್ಟುವುದೆಂದರೆ ದೇಶ ಕಟ್ಟಿದಂತೆ. ಅದನ್ನು ಈ ಎಸ್ಆರ್‌ಆರ್ ಎಜುಕೇರ್ ಸಂಸ್ಥೆ ಮಾಡುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡುವ ಅವರ ಬದ್ಧತೆ ಈ ಪುಟಾಣಿ ಮಕ್ಕಳು ಸಂವಿಧಾನ ಪೀಠಿಕೆ ಬೋಧನೆ ಶಾಲೆಯ ಗುಣಮಟ್ಟದ ಶಿಕ್ಷಣದ ಬಗ್ಗೆ ತಿಳಿಸುತ್ತದೆ ಎಂದರು.ಸಂಸ್ಥೆಯ ಅಧ್ಯಕ್ಷ ಎಸ್.ಆರ್. ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂತ ಸೇವಾಲಾಲರ ಜಯಂತಿ ಪ್ರಯುಕ್ತ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂವಿಧಾನ ಪೀಠಿಕೆ ಬೋಧಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಲವಳೇಶ್ವರ ಗುಡ್ಡದ ಸಿದ್ದೇಶ್ವರ ದೇವಸ್ಥಾನದ ಸಿದ್ದಪ್ಪ ಪೂಜಾರಿ ಸ್ವಾಮೀಜಿ ಸಾನ್ನಿಧ್ಯ, ಸೀಗಿಕೇರಿ ಗ್ರಾಪಂ ಅಧ್ಯಕ್ಷೆ ರತ್ನವ್ವ ಮಾಚಕನೂರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನೀಲವ್ವ ವಾಲಿಕಾರ, ಪಿಡಿಒ ಸುರೇಶ ನಾಯಕ್, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯ ಮಂಜುನಾಥ ಕಾಜೂರ, ಪಿಎಸ್ಐ ಸೀತಾರಾಮ ರಾಠೋಡ, ಕದಾಂಪೂರ ಪು.ಕೇ. ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ಪರಸಪ್ಪ ಹೊನ್ಯಾಳ, ಸಿಗಿಕೇರಿ ಗ್ರಾಪಂ ಸದಸ್ಯರಾದ ಸಿಂಧೂರ ಕಟ್ಟಿಮನಿ, ಮಲ್ಲಪ್ಪ ಪೂಜಾರಿ, ಬಂಜಾರ ಸಮಾಜದ ಮುಖಂಡರಾದ ರತ್ನಪ್ಪ ರಾಠೋಡ, ನಾನು ರಾಠೋಡ, ಅರ್ಜುನ ಚವ್ಹಾಣ, ಜಾತು ನಾಯಕ, ಶಿಗಿಕೇರಿಯ ಮುಖಂಡರಾದ ಪರಶುರಾಮ ಗಡದಿನ್ನಿ, ಗುರುಲಿಂಗಯ್ಯ ವಿರಕ್ತಮಠ, ಸಂಸ್ಥೆಯ ಕಾರ್ಯದರ್ಶಿ ರವಿ ಲಮಾಣಿ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶಾಲಾ ಶಿಕ್ಷಕರು ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.