ಎಲ್ಲೆಡೆ ಸ್ಮಾರ್ಟ್ ಟ್ರ್ಯಾಕಿಂಗ್‌ ವ್ಯವಸ್ಥೆ ಅಳವಡಿಕೆ

| Published : Feb 18 2025, 01:45 AM IST

ಸಾರಾಂಶ

ಜನಸಾಮಾನ್ಯರು, ವಾಹನಗಳ ಚಲನವಲನ, ಗಲಾಟೆ, ಜಗಳ, ಸಂಘರ್ಷಗಳು, ಹಲವು ರೀತಿಯ ಅಪರಾಧಗಳು, ಶಾಂತಿ ಕದಡುವ ಕ್ರಿಯೆಗಳ ಮೇಲೆ ನಿರಂತರ ಹದ್ದಿನ ಕಣ್ಣಿಡುವ ಉದ್ದೇಶದಿಂದ ಎಲ್ಲೆಡೆ ಸ್ಮಾರ್ಟ್ ಟ್ರ್ಯಾಕಿಂಗ್‌ ವ್ಯವಸ್ಥೆಯನ್ನು ಅಳವಡಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುಜನಸಾಮಾನ್ಯರು, ವಾಹನಗಳ ಚಲನವಲನ, ಗಲಾಟೆ, ಜಗಳ, ಸಂಘರ್ಷಗಳು, ಹಲವು ರೀತಿಯ ಅಪರಾಧಗಳು, ಶಾಂತಿ ಕದಡುವ ಕ್ರಿಯೆಗಳ ಮೇಲೆ ನಿರಂತರ ಹದ್ದಿನ ಕಣ್ಣಿಡುವ ಉದ್ದೇಶದಿಂದ ಎಲ್ಲೆಡೆ ಸ್ಮಾರ್ಟ್ ಟ್ರ್ಯಾಕಿಂಗ್‌ ವ್ಯವಸ್ಥೆಯನ್ನು ಅಳವಡಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ.ಜಿಲ್ಲಾ ಕೇಂದ್ರವಾದ ರಾಯಚೂರು ಸೇರಿ ಸಿಂಧನೂರು, ದೇವದುರ್ಗ, ಲಿಂಗಸುಗೂರು, ಮಸ್ಕಿ, ಸಿರವಾರ ಮತ್ತು ಮಾನ್ವಿ ತಾಲೂಕುಗಳ ನಗರ, ಪಟ್ಟಣ, ಗ್ರಾಮೀಣ ಭಾಗದ ಪ್ರಮುಖ ಸಾರ್ವಜನಿಕ ರಸ್ತೆ, ವೃತ್ತ, ಬಡಾವಣೆಗಳು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದರೊಂದಿಗೆ ಅದನ್ನು ನಿರ್ವಹಿಸಲು ಆಯ್ದ ಇಲಾಖೆ ಕಚೇರಿ, ಠಾಣೆಗಳಲ್ಲಿ ನಿಯಂತ್ರಣಾ ಘಟಕಗಳನ್ನು ಮಾಡಿ ಅಲ್ಲಿಂದ ನಿಗಾವಹಿಸಲಿದೆ.ಜಿಲ್ಲಾ ಕೇಂದ್ರವಾದ ರಾಯಚೂರು ನಗರದಲ್ಲಿ ಸ್ಮಾರ್ಟ್‌ ಟ್ಯಾಕಿಂಗ್‌ ವ್ಯವಸ್ಥೆಯನ್ನು ಅಳವಡಿಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 1 ಕೋಟಿ ರು. ಅನುದಾನವನ್ನು ಬಳಸುತ್ತಿದ್ದು, ಈ ಮೊತ್ತದಲ್ಲಿ ಈಗಾಗಲೇ ಆಯ್ದ ಸ್ಥಳಗಳಲ್ಲಿ ಸುಮಾರು 60ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಿನ ಗುಣಮಟ್ಟದ ಕ್ಯಾಮೆರಾಗಳನ್ನು ಹಾಕಲಾಗಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಿಯಂತ್ರಣ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಜೊತೆಗೆ ಸಿಂಧನೂರಿನಲ್ಲಿ 1 ಕೋಟಿ, ಲಿಂಗಸುಗೂರು, ದೇವದುರ್ಗದಲ್ಲಿ ತಲಾ ಹತ್ತು ಲಕ್ಷ ಸೇರಿ ಇತರೆ ತಾಲೂಕುಗಳಲ್ಲಿಯೂ ಸ್ಥಳೀಯ ಆಡಳಿತ ಮಂಡಳಿಗಳ ನೆರವಿನೊಂದಿಗೆ ಸಿಸಿ ಕ್ಯಾಮೆರಾಗಳನ್ನುಅನುಷ್ಠಾನ ಮಾಡಲಾಗುತ್ತಿದೆ.ಎಐ ನೆರವಿನಿಂದ ಪತ್ತೆ ಕಾರ್ಯ:

ಸ್ಮಾರ್ಟ್‌ ಟ್ರ್ಯಾಕಿಂಗ್‌ ವ್ಯವಸ್ಥೆಯಡಿ ಸಿಸಿ ಕ್ಯಾಮೆರಾಗಳಡಿ ವಾಹನಗಳ ಸಂಖ್ಯೆ, ನೋಂದಣಿ ಮಾಹಿತಿ, ಜನರ ಮುಖ ಗುರುತಿಸುವುದು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ನೆರವಿನಿಂದ ಪತ್ತೆಕಾರ್ಯವನ್ನು ನಡೆಸಲಾಗುತ್ತಿದೆ. ಅತೀ ಹೆಚ್ಚಿನ ಗುಣಮಟ್ಟದ ಸಿಸಿ ಕ್ಯಾಮೆರಾಗಳು, ಮೊಟೋರೈಸಿಡ್‌ ಲೈನ್ಸ್ ನ ಸ್ವಯಂ ಚಾಲಿತ ಬುಲೆಟ್ ಕ್ಯಾಮೆರಾಗಳನ್ನು ಬಳಸಲಾಗಿದೆ.

ಇವುಗಳಿಂದ ಹಗಲಿನಲ್ಲಿ ಸುಮಾರು 60 ರಿಂದ 120 ಕಿ.ಮೀ. ವೇಗದಲ್ಲಿ ಹೋಗುವ ವಾಹನಗಳ ನಂಬರ್‌ ಪ್ಲೇಟ್‌ಗಳನ್ನು ಟ್ರ್ಯಾಕ್‌ ಮಾಡಬಹುದಾಗಿದ್ದು, ಅದೇ ರೀತಿ ನೈಟ್‌ ವಿಜನ್ ಯಂತ್ರಜ್ಞಾನದಿಂದ ರಾತ್ರಿ ಸಮಯದಲ್ಲಿ ವಾಹನಗಳ ಹೆಡ್ ಲೈಟ್‌ಗಳ ನಡುವೆಯೂ ಸುಮಾರು 50 ರಿಂದ 80 ಕಿಮೀ ವೇಗದಲ್ಲಿ ಹೋಗುವ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ಸೇರಿ ಇತರೆ ದೊಡ್ಡ ದೊಡ್ಡ ವಾಹನಗಳ ನಂಬರ್‌ ಪ್ಲೇಟ್‌ಗಳನ್ನು ಪತ್ತೆ ಹೆಚ್ಚಬಹುದಾಗಿದೆ. ನಿಯಂತ್ರಣಾ ಘಟಕದಿಂದಲೇ ಬುಲೆಟ್ ಕ್ಯಾಮೆರಾಗಳ ನಿರ್ವಹಣೆಯನ್ನು ಸಹ ಮಾಡಬಹುದಾಗಿದ್ದ,. ಇಷ್ಟೇ ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಹಗಲು-ರಾತ್ರಿಯಲ್ಲಿ ಕಡಿಮೆ ಬೆಳಕಿನಲ್ಲಿ ಓಡಾಡುವ ಜನರನ್ನು ಟ್ರ್ಯಾಕ್‌ ಮಾಡಬಹುದಾಗಿದೆ. ಅಸಹಜ ಸನ್ನಿ ವೇಶ, ಅಪಘಾತ, ಅಹಿತಕರ ಘಟನೆಗಳ ಸಮಯದಲ್ಲಿ ಪೊಲೀಸ್ ತನಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಐ ತಂತ್ರಾಂಶವನ್ನು ರೂಪಿಸಲಾಗಿದೆ.

ಸಿಸಿಟಿಎನ್‌ಎಸ್‌ ತಂತ್ರಾಂಶ:

ಸ್ಮಾರ್ಟ್‌ ಟ್ರ್ಯಾಕಿಂಗ್‌ ವ್ಯವಸ್ಥೆಯ ಮತ್ತೊಂದು ವಿಶೇಷವೆಂದರೆ ಸಿಸಿಟಿಎನ್‌ಎಸ್ ತಂತ್ರಾಂಶವಾಗಿದೆ. ಕ್ರೈಮ್ ಕ್ರಿಮಿನಲ್ ಟ್ರ್ಯಾಕಿಂಗ್‌ ನೆಟ್ವರ್ಕಿಂಗ್‌ ಸಿಸ್ಟಮ್ (ಅಪರಾದ ಅಪರಾಧಿ ಗುರುತು ಜಾಲದ ವ್ಯವಸ್ಥೆ ) ನಲ್ಲಿ ಅಪರಾಧಿಗಳ ಸಮಗ್ರ ಮಾಹಿತಿಯನ್ನು ಅರಿಯಲಾಗುತ್ತಿದೆ. ಅಪರಾಧಿಗಳ ಎಲ್ಲ ರೀತಿಯ ಮಾಹಿತಿಯನ್ನೊಳಗೊಂಡಿರುವ ಈಗಾಗಲೇ ರೂಪಿಸಿದ ತಂತ್ರಾಂಶದಲ್ಲಿ ಸ್ಮಾರ್ಟ್ ಟ್ರ್ಯಾಕಿಂಗ್‌ ವ್ಯವಸ್ಥೆಯಿಂದ ಲಭ್ಯವಾದ ಮಾಹಿತಿಯನ್ನು ತುಲನೆ ಮಾಡಿ ಸುಲಭವಾಗಿ ಅಪರಾಧಿಯನ್ನು ಪತ್ತೆ ಹೆಚ್ಚಬಹುದಾಗಿದೆ.ಪೊಲೀಸರ ಕಾರ್ಯ ಇನ್ನಷ್ಟು ಸಲೀಸುರಾಯಚೂರು ಜಿಲ್ಲೆಯಾದ್ಯಂತ ಅನುಷ್ಠಾನಗೊಳ್ಳುತ್ತಿರುವ ಸ್ಮಾರ್ಟ್‌ ಟ್ರ್ಯಾಕಿಂಗ್ ವ್ಯವಸ್ಥೆಯಿಂದಾಗಿ ಪೊಲೀಸರ ಕೆಲಸ-ಕಾರ್ಯಗಳು ಇನ್ನಷ್ಟು ಸಲೀಸಾಗಲಿವೆ. ಎಲ್ಲೆಡೆ ಸಿಸಿ ಕ್ಯಾಮೆರಾಗಳ ಕಣ್ಗಾವಲಿರುವುದರಿಂದ ಅಪಘಾತಗಳು, ಕಳ್ಳತನ, ಅಹಿತರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸುವುದು, ಅಸಹಜ ಸನ್ನಿವೇಶಗಳನ್ನು ಬೇಧಿಸಲು ಸಾಕಷ್ಟು ಅನುಕೂಲವಾಗಲಿದೆ. ಸಂಚಾರ ನಿಯಮ ಉಲ್ಲಂಘಿಸುವವರು, ನಿರ್ಲಕ್ಷ್ಯ ಚಾಲನೆ ಮಾಡುವವರು, ಜನನಿಬೀಡ ಸ್ಥಳಗಳಲ್ಲಿ ಅನುಚಿತವಾಗಿ ವರ್ತಿಸುವವರು, ಕಳ್ಳ-ಕಾಕರ ಮೇಲೆ 24 ತಾಸು ನಿಗಾ ವಹಿಸುವುದರಿಂದ ಸದಾ ಎಚ್ಚರಿಕೆಯ ಗಂಟೆಯು ಹೊಡೆದುಕೊಳ್ಳುತ್ತಲೆಯೇ ಇರುತ್ತದೆ.ಜಿಲ್ಲಾ ಕೇಂದ್ರವಾಗಿರುವ ರಾಯಚೂರು ನಗರ, ಸಿಂಧನೂರು, ದೇವದುರ್ಗ ಸೇರಿದಂತೆ ವಿವಿಧೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದು, ಜನರು, ವಾಹನಗಳ ಚಲನ ವಲನದ ಮೇಲೆ ನಿಗಾ ವಹಿಸುವುದು. ನಂಬರ್‌ ಪ್ಲೇಟ್, ಮುಖಗಳ ಪತ್ತೆ ಕಾರ್ಯಕ್ಕಾಗಿ ನಿಯಂತ್ರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇಷ್ಟೇ ಅಲ್ಲದೇ ಸಿಸಿಟಿಎನ್ಎಸ್‌ ತಂತ್ರಾಂಶದ ಬಳಸುತ್ತಿದ್ದು, ಇದರಿಂದಾಗಿ ಸಮಾಜದಲ್ಲಿ ಅಶಾಂತಿ, ಅಪಘಾತ, ಕಳ್ಳತನ ಸೇರಿ ಇತರೆ ಅಹಿತಕರ ಘಟನೆಗಳ ಮೇಲೆ ಪೊಲೀಸ್ ಸದಾ ನಿಗಾ ವಹಿಸಲು ಅನುಕೂಲವಾಗಲಿದೆ.

- ಎಂ.ಪುಟ್ಟಮಾದಯ್ಯ, ಎಸ್ಪಿ,ರಾಯಚೂರು