ಸಾರಾಂಶ
‘ಸರ್ವರಿಗೂ ಉದ್ಯೋಗ’ ಶೀರ್ಷಿಕೆಯಡಿ ಆಯೋಜನೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ‘ಸರ್ವರಿಗೂ ಉದ್ಯೋಗ’ ಶೀರ್ಷಿಕೆಯಡಿ ಫೆ. 24 ರಂದು ನಗರದ ಎಟಿಎನ್ ಸಿಸಿ ಕಾಲೇಜಿನಲ್ಲಿ ಜಿಲಾ ಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ತಿಳಿಸಿದರು.
ಜಿಲ್ಲಾ ಮಟ್ಟದ ಉದ್ಯೋಗ ಮೇಳ (ಕೌಶಲ್ಯ ಮತ್ತು ರೋಜ್ಗಾರ್ ಮೇಳ) ಆಯೋಜಿಸುವ ಕುರಿತು ಜಿಪಂ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೌಶಲ್ಯಾವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಹಯೋಗದೊಂದಿಗೆ ಫೆ.24ರ ಬೆಳಿಗ್ಗೆ 9.30 ಕ್ಕೆ ನಗರದ ಎಟಿಎನ್‌ಸಿ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಮೇಳವನ್ನು ಉದ್ಘಾಟಿಸುವರು. ಶಿಷ್ಟಾಚಾರದಂತೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಸತ್ ಸದಸ್ಯರು, ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗುವುದು ಎಂದರು.
ಸುಮಾರು 50 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಭಾಗಿಯಾಗಲಿದ್ದು, ನೇರ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಗುತ್ತದೆ.ಉದ್ಯೋಗ ಮೇಳದಲ್ಲಿ ಯುವನಿಧಿ ನೊಂದಣಿ ಅಭಿಯಾನವನ್ನು ಸಹ ಕೈಗೊಳ್ಳಲಾಗುವುದು. ಅದಕ್ಕಾಗಿ ಪ್ರತ್ಯೇಕ ಮಳಿಗೆ ಸ್ಥಾಪಿಸಿ, ಇದುವರೆಗೆ ನೋಂದಣಿಯಾಗದ ಅರ್ಹ ಅಭ್ಯರ್ಥಿಗಳನ್ನು ಯುವನಿಧಿಗೆ ನೋಂದಣಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಜಿ.ಪಂ ಸಿಇಒ ಹೇಮಂತ್ ಎನ್. ಮಾತನಾಡಿ, ಉದ್ಯೋಗ ಮೇಳವನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ಆಯೋಜಿಸಬೇಕು. ಯಾವ ಕೊಠಡಿಯಲ್ಲಿ ಯಾವ ವಿದ್ಯಾರ್ಹತೆ ಪಡೆದವರಿಗೆ ಸಂದರ್ಶನವೆಂದು ಫಲಕ ಹಾಕಿರಬೇಕು. ಕುಡಿಯುವ ನೀರು ಇತರೆ ಮೂಲಭೂತ ಸೌಕರ್ಯ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಜಿಲ್ಲೆಯಾದ್ಯಂತ ಉತ್ತಮ ಪ್ರಚಾರ ಕೈಗೊಳ್ಳಬೇಕು ಎಂದರು.ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆಯ ಅಧಿಕಾರಿ ಸುರೇಶ್ ಮಾತನಾಡಿ, ನಿರುದ್ಯೋಗ ಯುವಕ-ಯುವತಿಯರು ಮತ್ತು ಉದ್ಯೋಗಕ್ಕೆ ತಕ್ಕ ವಿದ್ಯಾರ್ಹತೆ ಹೊಂದಿರುವ ಆಸಕ್ತರು https://forms.gle/se41pagcoriexpppg ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಈಗಾಗಲೇ ಲಿಂಕ್ಅನ್ನು ನೀಡಲಾಗಿದ್ದು, ಸ್ಪಾಟ್ ನೋಂದಣಿ ಸಹ ಮಾಡಿಸಬಹುದು. ಹೆಚ್ಚಿನ ಮಾಹಿತಿಗೆ ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ 08182-255294, 9019485688 ಸಂಪರ್ಕಿಸಬಹುದು ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ಸದಸ್ಯರು, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು, ವಿವಿಧ ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಕಾಲೇಜುಗಳ ಮುಖ್ಯಸ್ಥರು ಹಾಜರಿದ್ದರು.