ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಕಣ್ಣಿದ್ದು ಕುರುಡು, ಕಿವಿಯಿದ್ದು ಕಿವುಡು, ಬಾಯಿದ್ದು ಮೂಕ ಸರ್ಕಾರವಾಗಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಟೀಕಾ ಪ್ರಹಾರ ನಡೆಸಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಕಣ್ಣಿದ್ದು ಕುರುಡು, ಕಿವಿಯಿದ್ದು ಕಿವುಡು, ಬಾಯಿದ್ದು ಮೂಕ ಸರ್ಕಾರವಾಗಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಟೀಕಾ ಪ್ರಹಾರ ನಡೆಸಿದರು.ಅವರು ಸಿಂಧನೂರಿನ ಮಹಾತ್ಮಗಾಂಧಿ ವೃತ್ತದಲ್ಲಿ ಗುರುವಾರ ಮೂರನೇ ದಿನದ ಪಾದಯಾತ್ರೆಯ ಬಹಿರಂಗ ಸಭೆಯನ್ನುದ್ಧೇಶಿಸಿ ಮಾತನಾಡಿದರು. ಈ ಸರ್ಕಾರ ಕಳೆದ ಮೂರುವರೆ ವರ್ಷಗಳಿಂದ ಬರೀ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಹಗರಣಗಳಲ್ಲಿ ತೊಡಗಿದೆ. ರೈತರ ಸಂಕಷ್ಟದ ಬಗ್ಗೆ ಕಿಂಚಿತ್ತೂ ಆಲೋಚನೆ ಮಾಡುತ್ತಿಲ್ಲ. ರಾಜ್ಯದಲ್ಲಿ 3655 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 980 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಪರಿಹಾರ ಕಲ್ಪಿಸಿಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜೋಳದ ಬೆಳೆ ಬೆಳೆದ ರೈತರ ರು.148 ಕೋಟಿ ಬಾಕಿ ಹಣವನ್ನು ಪಾವತಿ ಮಾಡಿಲ್ಲ. ಇದು ರೈತ ವಿರೋಧಿ ಸರ್ಕಾರವಾಗಿದೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 4 ಬಾರಿ ಮುಖ್ಯಮಂತ್ರಿಯಾದಾಗ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿಯತ್ತ ರಾಜ್ಯ ವನ್ನು ಕೊಂಡೊಯ್ದರು. ಹೈನುಗಾರಿಕೆಗೆ ಆದ್ಯತೆ ನೀಡಿದ್ದರು. ಈ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಆಧುನೀಕರಣ ಮಾಡಿಸಿದರು. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ರೂ.14 ಕೋಟಿ ಹಣವನ್ನು ಬಜೆಟ್ನಲ್ಲಿ ತೆಗೆದಿರಿಸಿ ಡಿ.ಪಿ.ಆರ್. ಸಿದ್ಧಪಡಿಸಿದರು. ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಮಾನಾಂತರ ಜಲಾಶಯದ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಹೇಳಿದರು.ಮುಖ್ಯಮಂತ್ರಿಗಳು ರಿಯಲ್ ಎಸ್ಟೇಟ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಇವರು ಒಳ್ಳೆಯ ಆಡಳಿತಗಾರರಲ್ಲ. ಆದರೆ ಬಿಸಿನೆಸ್ ಮೆನ್ ಎಂದ ವಿಜಯೇಂದ್ರ ಯಾವ ಜಮೀನನ್ನು ವೀಕ್ಷಣೆ ಮಾಡಲಿಲ್ಲ. ಬರಗಾಲದ ಕುರಿತು ರೈತರೊಂದಿಗೆ ಚರ್ಚೆ ಮಾಡಲಿಲ್ಲ. ಬದಲಾಗಿ ಎ.ಸಿ., ಡಿ.ಸಿ.ಗಳೊಂದಿಗೆ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ವಿಡಿಯೋ ಕಾನ್ಫ್ರೆನ್ಸ್ ಮೂಲಕ ರಾಜ್ಯದಲ್ಲಿ 101 ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದ್ದಾರೆ. ಇನ್ನು ಅನೇಕ ತಾಲ್ಲೂಕುಗಳು ಬರಗಾಲ ಅನುಭವಿಸುತ್ತಿವೆ. ಅದರಲ್ಲಿ ಸಿಂಧನೂರು ತಾಲ್ಲೂಕು ಸಹ ಒಂದಾಗಿದೆ. ಈ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಹಿಂದೆ ಬಿ.ಜೆ.ಪಿ. ಸರ್ಕಾರ ಅಧಿಕಾರದಲ್ಲಿದ್ದಾಗ ತುಂಗಭದ್ರಾ ಜಲಾಶಯದಲ್ಲಿ 37 ರಿಂದ 40 ಟಿ.ಎಂ.ಸಿ. ನೀರಿದ್ದರೂ ಸಹ ಎಡದಂಡೆ ನಾಲೆಯ 2ನೇ ಬೆಳೆಗೆ ನೀರು ಒದಗಿಸಿತ್ತು. ಆದರೆ ಈಗ ಜಲಾಶಯದಲ್ಲಿ 80 ಟಿ.ಎಂ.ಸಿ. ನೀರಿದ್ದರೂ ಸಹ 2ನೇ ಬೆಳೆಗೆ ಸರ್ಕಾರ ಸಮರ್ಪಕವಾಗಿ ನೀರನ್ನು ಹರಿಸುತ್ತಿಲ್ಲ. ಕೆಳಭಾಗದ ರೈತರು ನೀರಿಗಾಗಿ ಪರದಾಡುತ್ತಿದ್ದಾರೆ. ಇದರಿಂದಾಗಿ ಸಿಂಧನೂರು ತಾಲ್ಲೂಕಿನಲ್ಲಿ ಶೇ.25 ರಷ್ಟು ಮಾತ್ರ ನಾಟಿಯಾಗಿದೆ. ಇನ್ನು ಶೇ.75 ರಷ್ಟು ನಾಟಿ ಮಾಡಿಲ್ಲ. ಇದರಿಂದ ರೈತರು ತೀವ್ರ ಕಂಗಾಲಾಗಿದ್ದಾರೆ. ಇವರಿಗೆ ಸರ್ಕಾರ ಯಾವುದೇ ರೀತಿಯ ಪರಿಹಾರವನ್ನು ನೀಡಿಲ್ಲ ಎಂದು ಆಪಾದಿಸಿದರು.ವಾಲ್ಮೀಕಿ ಹಗರಣದ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಪಾದಯಾತ್ರೆ ಶುರುವಾದ ಬೆನ್ನಲ್ಲೇ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟರು. ಇದು ಮೊದಲ ವಿಕೆಟ್ ಆಗಿದೆಯಷ್ಟೆ. ಇನ್ನು ಕೆ.ಪಿ.ಎಸ್.ಸಿ. ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನು ಅನೇಕ ಸಚಿವರು ಸಹ ರಾಜೀನಾಮೆ ನೀಡುವ ಕಾಲ ದೂರವಿಲ್ಲ. 2028ರ ಚುನಾವಣೆಯಲ್ಲಿ ಈ ಭ್ರಷ್ಟ ಸರ್ಕಾರವನ್ನು ರಾಜ್ಯದ ಜನತೆ ಕಿತ್ತೊಗೆಯಬೇಕು ಎಂದು ಕರತಾಡನಗಳ ಮಧ್ಯೆ ಹೇಳಿದರು.
ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರೈತರ ಕಣ್ಣೀರನ್ನು ಒರೆಸದೆ ತಮ್ಮ ಕುಮಾರಕೃಪ ಗೆಸ್ಟ್ ಹೌಸ್ನ್ನು ರಿಪೇರಿ ಮಾಡಿಸುವಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಇವರಿಗೆ ರಾಜ್ಯದ ರೈತರ ಹಿತ ಮುಖ್ಯವಲ್ಲ. ಬಿಡದಿ ಟೌನ್ಶಿಪ್, ರಿಯಲ್ ಎಸ್ಟೇಸ್ ವ್ಯಾಪಾರವೇ ಮುಖ್ಯವಾಗಿದೆ. ರೈತರ ಆತ್ಮಹತ್ಯೆ, ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರಿಗೆ ಪರಿಹಾರ ವಿತರಿಸಲು ಈ ಸರ್ಕಾರದಿಂದ ಆಗುತ್ತಿಲ್ಲ. ಮುಂದಿನ ದಿನಮಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ತಕ್ಕ ಪಾಠ ಕಲಿಸುವರು ಎಂದು ಕಿಡಿಕಾರಿದರು.ಮಾಜಿ ಸಚಿವ ಶಿವನಗೌಡ ನಾಯಕ ಮಾತನಾಡಿ ವಿಜಯೇಂದ್ರ ಅವರು ನಡೆಸುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಯಾಗಿದೆ. ಸರ್ಕಾರ ನಿದ್ದೆಗಣ್ಣಿನಿಂದ ಈಗ ಹೊರಬರುತ್ತಿದೆ. ಇನ್ನು 7 ದಿನಗಳ ಕಾಲ ನಡೆಯುವ ಪಾದಯಾತ್ರೆ ಅನೇಕ ಬದಲಾವಣೆಗಳಿಗೆ ಕಾರಣವಾಗಲಿದೆ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಪ್ರೊ.ಮಾ.ನಾಗರಾಜ ಮಾತನಾಡಿ, ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟರೆ ಸಾಲದು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ರೂ.187 ಕೋಟಿ ಹಣ ಜಮೆಯಾಗಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಬಳಕೆಯಾಗಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಮತ್ತೋರ್ವ ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಮಾತನಾಡಿ, ಈ ಪಾದಯಾತ್ರೆ ಹಾಗೂ ಬಹಿರಂಗ ಸಮಾವೇಶ ತಾಲೂಕಿನ ಗೌಡರಿಗೆ ಎದೆ ನಡುಗಿಸುವಂತಾಗಿದೆ. ಕಳೆದ ನಾಲ್ಕು ದಶಕಗಳಿಂದ ಸಿಂಧನೂರು ತಾಲ್ಲೂಕಿನಲ್ಲಿ ಕೆ.ಕರಿಯಪ್ಪನವರು ಬಡವ, ದೀನದಲಿತರ ಅಭಿವೃದ್ಧಿಗಾಗಿ ಕಂಕಣಬದ್ಧರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ತಾಲ್ಲೂಕಿನ ಶಾಸಕರನ್ನಾಗಿ ಜನತೆ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಸಿ.ಎಸ್.ಪಾಟೀಲ, ಶಾಸಕ ಸುನೀಲ್ ಕುಮಾರ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು.ಎಂ.ಎಲ್.ಸಿ ಹೇಮಲತಾ ನಾಯಕ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಮುಖಂಡರಾದ ಕೆ.ಕರಿಯಪ್ಪ, ಎಂ.ದೊಡ್ಡಬಸವರಾಜ, ಹರೀಶ್ ಪೂಂಜಾ, ಶರಣು ತಳ್ಳಿಕೇರಿ, ಶೈಲೇಂದ್ರ, ಬಂಗಾರು ಹನುಮಂತ, ಬಸವರಾಜ ಕ್ಯಾವಟರ್, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಯಂಕೋಬ ರಾಮತ್ನಾಳ, ನಗರ ಮಂಡಲ ಅಧ್ಯಕ್ಷ ಸಿದ್ರಾಮೇಶ ಮನ್ನಾಪುರ, ರಾಜೇಶ ಹಿರೇಮಠ, ಸಹನಾ ಹಿರೇಮಠ ಪಾಲ್ಗೊಂಡಿದ್ದರು.
ಸಂಚಾರ ತೀವ್ರ ವ್ಯತ್ಯಯ: ಪಾದಯಾತ್ರೆಯು ಸಂಜೆ 7 ಗಂಟೆಗೆ ನಗರದ ಗಾಂಧಿವೃತ್ತಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಪೊಲೀಸರು ರಾಯಚೂರು-ಗಂಗಾವತಿ ಮುಖ್ಯರಸ್ತೆಯ ಎಲ್ಲಾ ವಾಹನಗಳಿಗೆ ನಿರ್ಬಂಧಿಸಿದ್ದರು. ಇದರಿಂದ ಸುಮಾರು 3 ತಾಸುಗಳ ಕಾಲ ಸಾರ್ವಜನಿಕ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಯಿತು. ಕಾರ್ಯಕ್ರಮ ಮುಗಿದ ಬಳಿಕ ಅರ್ಧ ತಾಸಿನವರೆಗೆ ಎಡೆಬಿಡದೆ ವಾಹನ ಸಂಚರಿಸಿದವು.