ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಾಸಲು ಗ್ರಾಮದಲ್ಲಿ ಬಸವ ಜಯಂತಿ ಪ್ರಯುಕ್ತ ಬುಧವಾರ ಸಂಜೆ ರೈತರು ಗೋವುಗಳ ಮೆರವಣಿಗೆ ಮಾಡುವ ಮೂಲಕ ಭಕ್ತಿ ಮೆರೆದರು.ಭಕ್ತಿ ಭಂಡಾರಿ ಬಸವೇಶ್ವರ ಜನ್ಮದಿನದ ಪ್ರಯುಕ್ತ ಗ್ರಾಮದ ಶಿವಶರಣರು ಸೋಮೇಶ್ವರ ದೇವಾಲಯದ ಬಳಿ ಬಸವೇಶ್ವರಗುಡಿಗೆ ಆಗಮಿಸಿದರು. ಬಸವೇಶ್ವರರ ಭಾವಚಿತ್ರ ಇಟ್ಟು ಪುಷ್ಪಗಳಿಂದ ಅಲಂಕರಿಸಿರು. ಆರತಿ ಬೆಳಗಿ ಪೂಜಿಸಿದರು.
ರೈತರು ಗೋವುಗಳ ಮೈತೊಳೆದು ಕೊಂಬಿಗೆ ಎಣ್ಣೆ ಸವರಿದರು. ಕೊರಳಿಗೆ ಕರಿದಾರ, ಗೆಜ್ಜೆ ಕಟ್ಟಿದರು. ಬಣ್ಣ ಬಣ್ಣದ ಟೇಪುಗಳಿಂದ ಕೊಂಬುಗಳನ್ನು ಅಲಂಕರಿಸಿ ನೊಸಲಿಗೆ ಅರಿಷಿಣ, ಕುಂಕುಮ ತಿಲಕಇಟ್ಟು, ಹೂಮಾಲೆ ಹಾಕಿ ಶೃಂಗರಿಸಿದರು.ಗೋವುಗಳನ್ನು ಸಂಭ್ರಮದಿಂದ ಬಸವೇಶ್ವರಗುಡಿ ಬಳಿಗೆ ಕರೆತರಲಾಯಿತು. ಬಸವಣ್ಣ ಮೂರ್ತಿಗೆ ಹಣ್ಣು, ಕಾಯಿ ಅರ್ಪಿಸಿ ಪೂಜಿಸಿದರು. ಅರ್ಚಕರು ಗುಡಿಯಲ್ಲಿ ಬಸವಣ್ಣ ಮೂರ್ತಿಗೆ ಪೂಜಿಸಿ, ಗೋವುಗಳಿಗೆ ಸಾಮೂಹಿಕ ಪೂಜೆ ನೆರವೇರಿಸಿದರು. ಗೋವುಗಳಿಗೆ ತೀರ್ಥ ಪ್ರೋಕ್ಷಣೆ ಮಾಡಿ ಬಾಳೆಹಣ್ಣು ಪ್ರಸಾದವಾಗಿ ನೀಡಿದರು.
ನಂತರ ಗೋವುಗಳನ್ನು ಸಾಲಿನಲ್ಲಿ ರಂಗಸ್ಥಳ, ರಥಬೀದಿ, ಭೈರವರಾಜಗುಡಿ ಬೀದಿ ಮತ್ತಿತರ ಬೀದಿಗಳಲ್ಲಿ ಮಂಗಳವಾದ್ಯ, ತಮಟೆ ವಾದ್ಯದೊಂದಿಗೆ ಮೆರವಣಿಗೆ ಮಾಡಿದರು.ಅಂತಿಮವಾಗಿ ಸೋಮೇಶ್ವರ ದೇವಾಲಯದ ಬಳಿ ಮೆರವಣಿಗೆ ಸಾಗಿ ದೇವರಿಗೆ ಮಹಾಮಂಗಳಾರತಿ ಬೆಳಗಲಾಯಿತು. ಪೂಜಾ ಕಾರ್ಯಕ್ಕೂ ಮುನ್ನ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ರೈತಾಪಿ ಜನತೆ, ವೀರಶೈವ ಸಮುದಾಯದವರು ಬಸವಣ್ಣನ ಕುರಿತು ವಚನ ವಾಚಿಸಿದರು. ತೀರ್ಥ ಪ್ರಸಾದ ವಿನಿಯೋಗ ಮಾಡಿ, ಬಸವೇಶ್ವರ ಆದರ್ಶ ತತ್ವ ಕುರಿತು ವಿವಿಧ ಮುಖಂಡರು ಮಾತನಾಡಿದರು.
ಇಂದು ವಿಸಿ ನಾಲಾ ಕಚೇರಿ ಉದ್ಘಾಟನೆಮದ್ದೂರು: ಪಟ್ಟಣದ ಟಿಬಿ ಸರ್ಕಲ್‌ನ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಕಟ್ಟಡದಲ್ಲಿ ಜಲಸಂಪನ್ಮೂಲ ಇಲಾಖೆ ಕಾವೇರಿ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಎಂಜಿನಿಯರ್ ಅವರ ಕಚೇರಿ ನಂ-2 ವಿಶ್ವೇಶ್ವರಯ್ಯ ನಾಲಾ ವಿಭಾಗ ಕಚೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಶಾಸಕ ಕೆ.ಎಂ.ಉದಯ್, ವಿಧಾನ ಪರಿಷತ್ತಿನ ಶಾಸಕರಾದ ದಿನೇಶ್ ಗೂಳಿಗೌಡ, ಮಂಡ್ಯ ಶಾಸಕ ಪಿ.ರವಿಕುಮಾರ್ ಸೇರಿದಂತೆ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಆಗಮಿಸಲಿದ್ದಾರೆ.ಕಾಂಗ್ರೆಸ್ ಪಕ್ಷದ ಮುಖಂಡರು, ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರುಗಳು, ಮಹಿಳೆಯರು, ಯುವಕ-ಮಿತ್ರರು, ಅಭಿಮಾನಿಗಳ ಬಳಗದವರು ಭಾಗವಹಿಸುವಂತೆ ಮದ್ದೂರು ಮತ್ತು ಭಾರತೀನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ತಿಳಿಸಿದೆ.