ತಾಲೂಕಿನ ತೋಟಸಾಗರ ಗ್ರಾಮದ ರೈತ ಕರೇಗೌಡ ಅವರ ಕುಟುಂಬ ಅವರ ಮನೆ ಗೋವು ಲಕ್ಷ್ಮೀಗೆ ಸಡಗರ ಸಂಭ್ರಮದಿಂದ ಸೀಮಂತ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ತೋಟಸಾಗರ ಗ್ರಾಮದ ರೈತ ಕರೇಗೌಡ ಅವರ ಕುಟುಂಬ ಅವರ ಮನೆ ಗೋವು ಲಕ್ಷ್ಮೀಗೆ ಸಡಗರ ಸಂಭ್ರಮದಿಂದ ಸೀಮಂತ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಭಾರತ ದೇಶದ ಸಂಸ್ಕೃತಿ ಸಂಸ್ಕಾರದಲ್ಲಿ ಗೋವಿಗೆ ತನ್ನದೇ ಆದ ಪವಿತ್ರತೆ ಇದೆ. ಹೆಣ್ಣು ತನ್ನ ತಾಯ್ತನವನ್ನು ಅನುಭವಿಸುವುದಕ್ಕೋ ಮುಂಚೆ ಗಂಡನ ಮನೆಯಲ್ಲಿ ಸೀಮಂತ ಮಾಡಿ ತವರು ಮನೆಗೆ ಕಳುಹಿಸುವುದು ವಾಡಿಕೆ. ಕರೇಗೌಡ ಅವರ ಮನೆಯಲ್ಲಿ ಹೋಳಿಗೆಯ ಸಿಹಿ ಊಟಕ್ಕೆ ಸುಮಾರು 300ಕ್ಕೂ ಹೆಚ್ಚು ರೈತರು ಸಾಕ್ಷಿಯಾದರು. ಈ ವೇಳೆ ಗೌಡರ ಮನೆಗೆ ಆಗಮಸಿದ ಹೆಣ್ಣುಮಕ್ಕಳು ಆಗಮಿಸಿ ಗೋವು ಲಕ್ಷ್ಮಿಗೆ ವಿಶೇಷ ಪೂಜೆ ಆರತಿ, ಮಡಿಲು ತುಂಬುವ ಕೆಲಸವನ್ನು ಮಾಡಿದರು.ಈ ವೇಳೆ ಮಾತನಾಡಿದ ರೈತ ಕರೆಗೌಡ ನಮ್ಮ ಮನೆಯ ಹೆಣ್ಣು ಮಗುವಿನಂತೆ ನಾವು ನಮ್ಮ ಮನೆಯ ಗೋಮಾತೆ ಲಕ್ಷ್ಮೀಗೆ ವಿಶೇಷ ಮಡಿಲು ತುಂಬುವ ಕೆಲಸವನ್ನು ಮಾಡಿದ್ದೇವೆ. ಸುಮಾರು 10-12 ವರ್ಷಗಳಿಂದಲೂ ಸಹ ನಮ್ಮ ಮನೆಯಲ್ಲಿ ಯಾವುದೇ ಹಸು ಗರ್ಭ ಧರಿಸಿದರೂ ಇಂತಹ ವಿಶೇಷ ಶ್ರೀಮಂತ ಕಾರ್ಯಕ್ರಮ ಮಾಡುತ್ತಾ ಬಂದಿದ್ದು, ಇದು ನಮಗೆ ಹೆಚ್ಚಿನ ಖುಷಿ ನೀಡಿದೆ ಮತ್ತು ಗೋಮಾತೆ ನಮಗೆ ಸಕಲ ಸಂಪತ್ತು ಐಶ್ವರ್ಯವನ್ನು ನೀಡುತ್ತಾ ಬಂದಿದ್ದಾಳೆ. ಇಂದು ನಮ್ಮೂರಿನ ರೈತರು, ಸಂಬಂದಿಗಳು,ಸ್ನೇಹಿತರು, ಎಲ್ಲರೂ ಆಗಮಿಸಿ ತಾಯಿ ಲಕ್ಷ್ಮಿಗೆ ವಿಶೇಷ ಶ್ರೀಮಂತ ಕಾರ್ಯಕ್ರಮ ಮಾಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗಂಗಣ್ಣ ಕಾಳಮ್ಮ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ನೆಂಟರುಷ್ಟರು ಹಾಜರಿದ್ದರು.