ಉಡುಪಿ ಶ್ರೀ ಕೃಷ್ಣಮಠದಲ್ಲಿ ಪರ್ಯಾಯ ಪೀಠಾಧೀಶ, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವದ ಶ್ರೀ ಕೃಷ್ಣ ಜನ್ಮಾಷ್ಟಮಿ ಎರಡು ದಿನಗಳ ಕಾಲ ವೈಭವದಿಂದ ನಡೆಯಿತು.

ಉಡುಪಿಉಡುಪಿ ಶ್ರೀ ಕೃಷ್ಣಮಠದಲ್ಲಿ ಪರ್ಯಾಯ ಪೀಠಾಧೀಶ, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವದ ಶ್ರೀ ಕೃಷ್ಣ ಜನ್ಮಾಷ್ಟಮಿ ಎರಡು ದಿನಗಳ ಕಾಲ ವೈಭವದಿಂದ ನಡೆಯಿತು.

ಶುಕ್ರವಾರ ಕೃಷ್ಣಮಠದೊಳಗೆ ಕೃಷ್ಣನಿಗೆ ಅರ್ಘ್ಯಪ್ರದಾನ, ಚಕ್ಕುಲಿಉಂಡೆ ನೈವೇದ್ಯ, ಮಹಾಪೂಜಾದಿ ಧಾರ್ಮಿಕ ಕಾರ್ಯಕ್ರಮಗಳ‍ು ಸಂಪ್ರದಾಯಬದ್ಧವಾಗಿ ನಡೆಯಿತು. ಶನಿವಾರ ಕೃಷ್ಣಮಠದ ಹೊರಗೆ, ಭಕ್ತಜನರಿಂದ ತುಂಬಿ ತುಳುಕುತ್ತಿದ್ದ ರಥಬೀದಿಯಲ್ಲಿ ಕೃಷ್ಣನ ಲೀಲಾ ಪ್ರದರ್ಶನ - ಮೊಸರು ಕುಡಿಕೆ ಉತ್ಸವಗಳು ವೈಭವದಿಂದ ನಡೆದವು.ಮಧ್ಯಾಹ್ನ 3.20ಕ್ಕೆ ಪರ್ಯಾಯ ಶ್ರೀಗಳು ಕೃಷ್ಣನ ಮಣ್ಣಿನ ಮೂರುತಿಯನ್ನು ಹೂವುಗಳಿಂದ ಅಲಂಕೃತ ಚಿನ್ನದ ರಥಕ್ಕೆ ಆರೋಹಣಗೊಳಿಸಿ, ಮಂಗಳಾರತಿ ಬೆಳಗಿದರು. ರಥಬೀದಿಯಲ್ಲಿ ರಥೋತ್ಸವ ನಡೆಯಿತು. ಮಠದ ಬಿರುದಾವಳಿಗಳು, ಕೊಂಬುಕಹಳೆ, ಮಂಗಳವಾದ್ಯ - ಚಂಡೆಗಳು ರಥೋತ್ಸವದ ಕಳೆಯನ್ನು ಹೆಚ್ಚಿಸಿದವು.

ಪರ್ಯಾಯ ಶ್ರೀ ವೇವವರ್ಧನ ತೀರ್ಥರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಮಠದ ದಿವಾಣರಾದ ವಿದ್ವಾನ್ ಉದಯಕುಮಾರ್ ಸರಳ‍ತ್ತಾಯರು, ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರ್ ರಥಬೀದಿಯಲ್ಲಿ ಭಕ್ತರ ನಡುವೆ ಹೆಜ್ಜೆ ಹಾಕಿದರು.

ರಥವು ರಥಬೀದಿಯಲ್ಲಿರುವ ಎಲ್ಲಾ ಅಷ್ಟಮಠದ ಮುಂದೆ ನಿಂತು ಶ್ರೀ ಮಠಗಳಿಂದ ಪೂಜೆಯನ್ನು ಸ್ವೀಕರಿಸುತ್ತಾ ಸಾವಕಾಶವಾಗಿ ರಥಬೀದಿಯಲ್ಲಿ ಸಾಗಿ ಬಂತು. ರಥೋತ್ಸವದ ನಂತರ ಶ್ರೀಗಳ‍ು ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ಜಲಸ್ತಂಭನೆಗೊಳಿಸಿದರು.

ರಥಬೀದಿಯಲ್ಲಿ ಅಲ್ಲಲ್ಲಿ ನಿರ್ಮಿಸಲಾಗಿದ್ದ ಗೋಪುರ (ಗುಜ್ಜಿ)ಗಳ ಮೇಲೆ ಎತ್ತರದಲ್ಲಿ ಕಟ್ಟಲಾಗಿದ್ದ ಕಜ್ಜಾಯ, ಮೊಸರು, ಹಾಲು, ಓಕುಳಿ ನೀರಿದ್ದ ಮಡಕೆಗಳನ್ನು ಗೊಲ್ಲವೇಷಧಾರಿಗಳು ಹಾರಿ ಕೊಲುಗಳಿಂದ ಒಡೆದು ಕೃಷ್ಣನ ಬಾಲಲೀಲೆಗಳನ್ನು ಪ್ರದರ್ಶಿಸಿದರು.

ರಥಬೀದಿಯಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಪರ್ಯಾಯ ಶಿರೂರು ಶ್ರೀಗಳು ಕೃಷ್ಣನ ಪ್ರಸಾದ ವಿವಿಧ ಬಗೆಯ ಉಂಡೆ ಚಕ್ಕಲಿಗಳನ್ನು, ಹಣ್ಣುಗಳ‍ನ್ನು ಭಕ್ತಸಮೂಹದತ್ತ ತೂರಿದರು. ಭಕ್ತರು ಪ್ರಸಾದ ಪಡೆಯಲು ಪೈಪೋಟಿ ನಡೆಸುತ್ತಿದ್ದರು.

ರಥೋತ್ಸವ ಸಂದರ್ಭದಲ್ಲಿ ಹುಲಿವೇಷಧಾರಿಗಳು ತಂಡೋತಂಡವಾಗಿ ರಥಬೀದಿಯನ್ನು ಪ್ರವೇಶಿಸಿ ನರ್ತಿಸಿ ಜನರಿಗೆ ಮನೋರಂಜನೆ ನೀಡಿದರು. ರಥಬೀದಿಯಲ್ಲಿ ಕೆಮ್ಮಣ್ಣಿನ ವೇದಿಕೆಯಲ್ಲಿ ಮೈಸೂರಿನಿಂದ ಕರೆಸಲಾದ ಕುಸ್ತಿಪಟುಗಳ ಮಲ್ಲಯುದ್ಧ ವಿಶೇಷ ಆಕರ್ಷಣೆಯಾಗಿತ್ತು.

ಶ್ರೀಕೃಷ್ಣ - ಚಂದ್ರರಿಗೆ ಅರ್ಘ್ಯಶ್ರಾವಣಮಾಸದ ಅಷ್ಟಮಿಯ ದಿನ, ಶುಕ್ರವಾರ ಮಧ್ಯರಾತ್ರಿ ಚಂದ್ರೋದಯದ 12.12 ರ ಗಳಿಗೆಯಲ್ಲಿ ಪರ್ಯಾಯ ಶ್ರೀಗಳು, ಶ್ರೀಕೃಷ್ಣನಿಗೆ ಶಂಖದಿಂದ ಹಾಲು ಮತ್ತು ನೀರಿನ ಅರ್ಘ್ಯ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ಕೂಡ ಅರ್ಘ್ಯ ಪ್ರದಾನ ಮಾಡಿದರು.ನಂತರ ಅವತಾರ ಗಳಿಗೆಯನ್ನು ಸಂಯೋಜಿಸಿದ ಚಂದ್ರನಿಗೆ ತುಳಸಿಕಟ್ಟೆಯಲ್ಲಿ ಅರ್ಘ್ಯ ನೀಡಿದರು. ಬಳಿಕ ಶ್ರೀ ಮಠದ ದಿವಾಣರು, ಪಾರುಪತ್ಯೆಗಾರರು ಮತ್ತಿತರರ ಪ್ರಮುಖರು ಮತ್ತು ನೂರಾರು ಮಂದಿ ಭಕ್ತರು ಅರ್ಘ್ಯಪ್ರದಾನ ಮಾಡುವ ಮೂಲಕ, ಕೃಷ್ಣ ಜನ್ಮಾಷ್ಟಮಿಯ ಪ್ರದಾನ ಘಟ್ಟವನ್ನು ಸಂಪನ್ನಗೊಳಿಸಿದರು.