ಹನುಮ ಜಯಂತಿ ಅಂಗವಾಗಿ ವಿಜೃಂಭಣೆಯ ರಥೋತ್ಸವ

| Published : Apr 13 2025, 02:03 AM IST

ಸಾರಾಂಶ

ದೇಗುಲದ ಶ್ರೀ ಹೊಳೆ ಆಂಜನೇಯ ಸ್ವಾಮಿ ಮೂಲ ವಿಗ್ರಹದ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಶನಿವಾರ ಶ್ರೀ ಹನುಮ ಜಯಂತಿ ಅಂಗವಾಗಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಸ್ಥಳೀಯರು ಸೇರಿದಂತೆ ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.

ರಥೋತ್ಸವದ ಅಂಗವಾಗಿ ಮುಂಜಾನೆ ಪ್ರಧಾನ ಅರ್ಚಕ ಪ್ರದೀಪಚಾರ್ಯ ಹಾಗೂ ಸಹ ಅರ್ಚಕ ಸುರೇಶ ಆಚಾರ್ಯ ಅವರುಗಳ ನೇತೃತ್ವದಲ್ಲಿ ಶ್ರೀ ಆಂಜನೇಯ ಸ್ವಾಮಿ ಮೂಲ ವಿಗ್ರಹಕ್ಕೆ ಮಧು ಮತ್ತು ಪಂಚಾಮೃತ ಅಭಿಷೇಕದೊಂದಿಗೆ 108 ಲೀಟರ್ ಕ್ಷೀರಭಿಷೇಕ ನೆರವೇರಿಸಲಾಯಿತು.

ನಂತರ ದೇವರಿಗೆ ಪುಷ್ಪಲಂಕಾರ, ಸಂಕಲ್ಪ ಸೇವೆ ಮಹಾಮಂಗಳಾರತಿ ಯೊಂದಿಗೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ತರುವಾಯ ಸೀತಾ,ರಾಮ, ಲಕ್ಷ್ಮಣ ಸಮೇತ ಶ್ರೀ ಹನುಮಾನ್ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ಸಮೀರ ರಥದಲ್ಲಿ ಪ್ರತಿಷ್ಠಾಪನೆ ಮಾಡುವುದರೊಂದಿಗೆ ದೇಗುಲದ ಪ್ರಾಂಗಣದಲ್ಲಿ ರಥೋತ್ಸವ ನೆರವೇರಿಸಲಾಯಿತು.

ನೆರೆದಿದ್ದ ಭಕ್ತಾದಿಗಳು ಶ್ರೀರಾಮ ಮತ್ತು ಹನುಮನ ನಾಮಸ್ಮರಣೆಯೊಂದಿಗೆ ರಥವನ್ನು ಎಳೆದು ಧನ್ಯತಾ ಭಾವ ಮೆರೆದರು. ನಂತರ ದೇಗುಲದ ಶ್ರೀ ಹೊಳೆ ಆಂಜನೇಯ ಸ್ವಾಮಿ ಮೂಲ ವಿಗ್ರಹದ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ದೇಗುಲದ ವತಿಯಿಂದ ಅನ್ನ ಸಂತರ್ಪಣೆ ಜರುಗಿತು..

------------

12ಕೆಎಂಎನ್ ಡಿ15

ಮದ್ದೂರಿನ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀ ಹನುಮದ್ ಜಯಂತಿ ರಥೋತ್ಸವ ನೆರವೇರಿತು.