ಸಡಗರದ ‘ಶಿವಮೊಗ್ಗ ದಸರಾ’ಕ್ಕೆ ವೈಭವದ ತೆರೆ

| Published : Oct 13 2024, 01:02 AM IST

ಸಡಗರದ ‘ಶಿವಮೊಗ್ಗ ದಸರಾ’ಕ್ಕೆ ವೈಭವದ ತೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದ ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಜನ ಸಾಗರ ಮಧ್ಯೆ ಸಕ್ರೆಬೈಲು ಗಜಪಡೆ ಬೆಳ್ಳಿ ಅಂಬಾರಿ ಹೊತ್ತು ಸಾಗಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹತ್ತು ದಿನಗಳ ಕಾಲ ನಡೆಯುತ್ತಿದ್ದ ಸಡಗರದ ದಸರಾ, ವಿಜಯದಶಮಿ ದಿನವಾದ ಶನಿವಾರ ಅತ್ಯಾಕರ್ಷಕ ಜಂಬೂ ಸವಾರಿ ಮೆರವಣಿಗೆ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮದೊಂದಿಗೆ ತೆರೆಕಂಡಿತು.

ಶನಿವಾರ ನಗರದ ಅಲ್ಲಮಪ್ರಭು ಮೈದಾನ (ಪ್ರೀಡಂ ಪಾರ್ಕ್‌) ದಲ್ಲಿ ತಹಶೀಲ್ದಾರ್ ಗಿರೀಶ್‌ ಅಂಬು ಕಡಿಯುವ ಮೂಲಕ ಸಮಾರೋಪಗೊಳಿಸಿದರು. ಪರಸ್ಪರ ಬನ್ನಿ ಹಂಚಿಕೊಳ್ಳುವ ಮೂಲಕ ಜನರು ಶುಭಾಶಯ ವಿನಿಮಯ ಮಾಡಿಕೊಂಡರು. ಮದ್ದುಗಳು ಹಾಗೂ ಬಾಣ ಬಿರುಸುಗಳ ಚಿತ್ತಾರ ನೆರೆದಿದ್ದ ಜನರನ್ನು ಮಂತ್ರಮುಗ್ಧರನ್ನಾಗಿಸಿತು.

ಮೆರವಣಿಗೆಗೂ ಮುನ್ನ ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಶಾಸ ಎಸ್‌.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್.ಅರುಣ್‌, ಬಲ್ಕಿಶ್‌ ಬಾನು, ಡಾ. ಧನಂಜಯ ಸರ್ಜಿ ಸೇರಿದಂತೆ ಹಲವರು ಇದ್ದರು.

ಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತ ‘ಸಾಗರ’ ಆನೆಯು ರಾಜ ಗಾಂಭೀರ್ಯದಿಂದ ಮುನ್ನಡೆಯುತ್ತಾ ನೋಡುಗರ ಮನ ಸೆಳೆಯುತ್ತಿತ್ತು. ಜತೆಗೆ ‘ಬಾಬಣ್ಣ’ ಮತ್ತು ‘ಬಹದ್ದೂರ್‌’ ಆನೆಗಳು ಸಾಥ್ ನೀಡಿದವು. ಮೆರವಣಿಗೆಯಲ್ಲಿ ಮಂಗಳ ವಾದ್ಯ, ಸಮಾಳ ವಾದ್ಯ, ನಂದಿ ಧ್ವಜ ಕುಣಿತ, ವೀರಗಾಸೆ, ಚಂಡೆ ಮದ್ದಳೆ, ಗೊಂಬೆಗಳ ಕುಣಿತ, ರಾಜ್ಯ ಪ್ರಶಸ್ತಿ ವಿಜೇತ ಶೆಟ್ಟಿ ಗೊಂಬೆ ಬಳಗದಿಂದ ಕೀಲು ಕುದುರೆ, ದೊಡ್ಡ ಗೊಂಬೆಗಳ ಕುಣಿತ, ಹುಲಿ ವೇಷ ಕುಣಿತ, ರೋಡ್‌ ಆರ್ಕೇಸ್ಟ್ರಾ ಸೇರಿದಂತೆ ವಿವಿಧ ಕಲಾ ತಂಡಗಳು ಮೆರಗು ನೀಡಿದವು.

ಅಂಬುಛೇದನ ಕಾರ್ಯಕ್ರಮ ವೀಕ್ಷಿಸಲು ಅಲ್ಲಮ ಪ್ರಭು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ರಾವಣದಹನದ ನಂತರ ಅತ್ಯಾಕರ್ಷಕವಾಗಿ ಆಕಾಶದಲ್ಲಿ ಮೂಡಿ ಬಂದ ಪಟಾಕಿ ಸಿಡಿಮದ್ದುಗಳ ಚಿತ್ತಾರವನ್ನು ಜನರು ಕಣ್ತುಂಬಿ ಕೊಂಡರು.

ಬಿಗಿ ಬಂದೋಬಸ್ತ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಮಾರ್ಗದರ್ಶನದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿತ್ತು.

ಚಾಮುಂಡೇಶ್ವರಿ ದೇವಿಯ ಮೆರವಣಿಗೆಯು ಕೋಟೆ ರಸ್ತೆ, ಎಸ್‌ಪಿಎಂ ರಸ್ತೆ, ಗಾಂಧಿಬಜಾರ್ ಮುಖ್ಯರಸ್ತೆ, ಅಮೀರ್ ಅಹಮದ್‌ ವೃತ್ತ, ನೆಹರೂ ರಸ್ತೆ, ದುರ್ಗಿಗುಡಿ ರಸ್ತೆ, ಜೈಲ್‌ ರಸ್ತೆ ಮಾರ್ಗವಾಗಿ ಅಲ್ಲಮಪ್ರಭು ಮೈದಾನದಲ್ಲಿ ಬನ್ನಿ ಮುಡಿಯುವ ಮೂಲಕ ಮುಕ್ತಾಯಗೊಂಡಿತು.

ಗಮನ ಸೆಳೆದ ಬೊಂಬೆಗಳ ಪ್ರದರ್ಶನ

ನವರಾತ್ರಿಯ ದಸರಾ ಸಂದರ್ಭದಲ್ಲಿ ಆಯೋಜಿಸಿದ್ದ ಮನೆ ಮನೆಗಳಲ್ಲೂ ಗೊಂಬೆಗಳ ಪ್ರದರ್ಶನ ಗಮನ ಸೆಳೆಯಿತು.

ಶಿವಮೊಗ್ಗದ ಕುವೆಂಪು ನಗರದಲ್ಲಿರುವ ತಾಯಿ ಮಗಳ ಜೋಡಿಯ ಗೊಂಬೆಗಳ ಪ್ರದರ್ಶನದಲ್ಲಿ ಸುಮಾರು 300 ವರ್ಷಗಳ ಹಳೆಯ ಗೊಂಬೆಗಳ ಪ್ರದರ್ಶನಕ್ಕೆ ಇಡಲಾಯಿತು.

ತಾಯಿ ಸೀತಾಲಕ್ಷ್ಮೀ ಹಾಗೂ ಮಗಳು ಬೃಂದ ಜೋಡಿಯ ಗೊಂಬೆಗಳ ಪ್ರದರ್ಶನದಲ್ಲಿ ಶಿವಮೊಗ್ಗದ ಮೂಲೆ ಮೂಲೆಗಳಿಂದ ಮಹಿಳೆಯರು ಈ ಪ್ರದರ್ಶನಕ್ಕೆ ಧಾವಿದ್ದರು. ಕಳೆದ 30 ವರ್ಷಗಳಿಂದ ಇಲ್ಲಿ ಗೊಂಬೆಗಳನ್ನು ಇಡಲಾಗುತ್ತಿದ್ದು, 300 ವರ್ಷಗಳ ಪುರಾತನ ಪಟ್ಟದ ಬೊಂಬೆ ಇರುವುದು ವಿಶೇಷ.

ಅಷ್ಟಲಕ್ಷ್ಮಿಯರು ನವದುರ್ಗಿಯರು ಕೈಲಾಸಪರ್ವತ ದಶಾವತಾರ, ಮೈಸೂರು ಅರಮನೆಯ ದಸರಾ ದರ್ಬಾರ್ ಶ್ರೀನಿವಾಸ ಕಲ್ಯಾಣ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಮಹಿಷನ ಪ್ರತಿಮೆ ಹಾಗೂ ಚಾಮುಂಡೇಶ್ವರಿ ಬೆಟ್ಟ, ಸತಿ ಅನುಸೂಯೆ ಪೂರಿ ಜಗನ್ನಾಥ ದೇವಾಲಯ ಕೃಷ್ಣಾವತಾರ ದೊಡ್ಡದಾದ ದುರ್ಗಾ ಮಾತಾ ಪ್ರತಿಮೆ ಕನಕನ ಕಿಂಡಿ ಯಕ್ಷ ಸಂಭ್ರಮ ಹಾಗೂ ಅಶೋಕವನದಲ್ಲಿ ಸೀತೆ ಅಷ್ಟೇ ಅಲ್ಲದೆ ಆಧುನಿಕ ಜೀವನ ಶೈಲಿ ಹಳ್ಳಿ ಹಾಗೂ ಪಟ್ಟಣ ಕ್ರಿಕೆಟ್ ಮ್ಯಾಚ್ ಟೀಮ್ ಮಾರುಕಟ್ಟೆ ಮುಂತಾದ ವೈವಿದ್ಯತೆಯನ್ನು ಕಾಣಬಹುದಾಗಿತ್ತು.

ಶಾಸಕ ಚನ್ನಬಸಪ್ಪ ರಿಂದ ಭರ್ಜರಿ ಸ್ಟೆಪ್

ಪೌರ ಕಾರ್ಮಿಕರ ದಸರಾ ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅವರು ಭರ್ಜರಿ ಸ್ಟೆಪ್‌ ಹಾಕಿದರು. ಲಯಬದ್ಧವಾಗಿ ಹುಲಿ ಕುಣಿತದ ಸ್ಟೆಪ್ಸ್ ಗಳನ್ನು ಹಾಕಿದರು. ಶಾಸಕ ಹುಲಿಕುಣಿತ ದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ದಸರಾ ಮೆರವಣಿಗೆಯಲ್ಲಿ ಬೆಳ್ಳಿ ಅಂಬಾರಿ ಹೊರುವ ಆನೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿ ಇರುವ ವಾಸವಿ ಶಾಲೆಯಲ್ಲಿ ಇರುವ ಆನೆಗಳಿಗೆ ಬಣ್ಣಗಳಿಂದ ಚಿತ್ರ ಬರೆಯಲಾಯಿತು. ಅಂಬಾರಿ ಹೋರುವ ಸಾಗರ್ ಆನೆ ಮುಖಕ್ಕೆ ಗಂಡುಬೇರುಂಢ ಚಿತ್ರ ಬಿಡಿಸಲಾಗಿತ್ತು. 750 ಕೆಜಿ ತೂಕದ ಬೆಳ್ಳಿ ಅಂಬಾರಿ ಹೊತ್ತು ಸಾಗಲಿರುವ ಸಾಗರ್ ಆನೆಗೆ ಈ ಬಾರಿ ಬಾಬಣ್ಣ, ಬಹದ್ದೂರ್‌ ಆನೆಗಳು ಸಾಥ್‌ ನೀಡಿದ್ದವು.

ದೇವಾನುದೇವತೆಗಳ ಮೆರವಣಿಗೆ

ಅಂಬಾರಿ ಹೊತ್ತ ಆನೆಗಳ ಜೊತೆಗೆ ನಗರದ ವಿವಿಧೆಡೆ ದೇವಾನುದೇವತೆಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ. ವಿವಿದ ದೇಗುಲಗಳಿಂದ ಅಗಮಿಸಿರುವ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿವೆ. ನೂರಕ್ಕೂ ಹೆಚ್ಚು ದೇವರುಗಳು ಮೆರವಣಿಗೆಯಲ್ಲಿ ಸಾಗಿದವು.

ಮೆರವಣಿಗೆಯಲ್ಲಿ ತಹಶೀಲ್ದಾರ್‌ ನಡಿಗೆ

ಫ್ರೀಡಂ ಪಾರ್ಕ್‌ನಲ್ಲಿ ತಹಶೀಲ್ದಾರ್‌ ಗಿರೀಶ್‌ ಅವರು ಅಂಬು ಕಡಿದು, ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಹಿನ್ನೆಲೆ ಕೋಟೆ ದೇವಸ್ಥಾನದಲ್ಲಿ ತಹಶೀಲ್ದಾರ್‌ ಗಿರೀಶ್‌ ಅವರು ವಿಶೇಷ ಪೂಜೆ ಸಲ್ಲಿಸಿದರು. ಮೈಸೂರು ಪೇಟ, ಕೋಟು ತೊಟ್ಟು ಮೆರವಣಿಗೆಯಲ್ಲಿ ನಡೆದು ಸಾಗಿದರು.