ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಕಲ್ಪತರು ನಾಡಿನಲ್ಲಿ ಎರಡು ದಿನಗಳ ಕಾಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಪ್ರಯುಕ್ತ ನಡೆದ ಮೆರವಣಿಗೆಗೆ ಅದ್ದೂರಿ ಚಾಲನೆ ದೊರೆಯಿತು. ನಗರದ ಟೌನ್‌ಹಾಲ್ ವೃತ್ತದಲ್ಲಿ ಆನೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಮೆರವಣಿಗೆಯ ಸಾನ್ನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ನಮ್ಮ ದಿನನಿತ್ಯದ ಬೆಳವಣಿಗೆ ಪತ್ರಿಕೆಗಳನ್ನು ಓದುವ ಮೂಲಕ ಆರಂಭವಾಗುತ್ತದೆ. ಪತ್ರಕರ್ತರು ವಾಸ್ತವ ವಿಚಾರಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ನಾಡಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದರು.ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಕರ್ತರು ಭವಿಷ್ಯ, ಭೂತಕಾಲದ ಬಗ್ಗೆ ಹೆಚ್ಚು ಮಹತ್ವ ನೀಡದೆ ವರ್ತಮಾನದ ಬಗ್ಗೆ ಹೆಚ್ಚು ಗಮನ ಹರಿಸುವ ಮೂಲಕ ವಾಸ್ತವ ಸುದ್ದಿಗಳನ್ನು ಜನಮಾನಸಕ್ಕೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.ಪತ್ರಕರ್ತರು ಅನುಭವಿಸುತ್ತಿರುವ ಸಮಸ್ಯೆ, ಸೌಲಭ್ಯಗಳ ಕೊರತೆ ಬಗ್ಗೆ ಬೆಳಕು ಚೆಲ್ಲುವ ಕೆಲಸ ಈ ಸಮ್ಮೇಳನದ ವೇದಿಕೆ ಮೂಲಕ ಆಗಲಿ ಎಂದು ಶ್ರೀಗಳು ಆಶಿಸಿದರು. ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಪತ್ರಿಕೋದ್ಯಮವನ್ನು ತುರ್ತು ಸಾಹಿತ್ಯವೆಂದು ಗುರುತಿಸಲಾಗಿದೆ. ಮನುಷ್ಯನಿಗೆ ಸಾಹಿತ್ಯದ ಅಭಿರುಚಿ ದಿನಪತ್ರಿಕೆಗಳ ಅವಲೋಕನದಿಂದ ಬರುತ್ತದೆ ಎಂದರು.ನಗರದಲ್ಲಿ ನಡೆಯುತ್ತಿರುವುದು ಕೇವಲ ಪತ್ರಕರ್ತರ ಸಮ್ಮೇಳನವಲ್ಲ, ಇದೊಂದು ಸಾಂಸ್ಕೃತಿಕ ಹಬ್ಬವಾಗಿದೆ. ತುಮಕೂರಿನಲ್ಲಿ ಯಾವುದೇ ಕಾರ್ಯಕ್ರಮವಾದರೂ ರಾಜ್ಯದಲ್ಲಿ ಮಾದರಿ ಕಾರ್ಯಕ್ರಮವಾಗುತ್ತದೆ ಎಂದು ಅವರು ಹೇಳಿದರು.ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳಿಗೆ ಸಹಕಾರ ರೂಪ, ಮಾನವೀಯ ರೂಪ ಕೊಡುವ ಶಕ್ತಿ ಪತ್ರಿಕೋದ್ಯಮಕ್ಕಿದೆ. ನಮ್ಮ ವರ್ತಮಾನವನ್ನು ಗಟ್ಟಿಯಾಗಿ ರೂಪಿಸಿಕೊಂಡಾಗ ಪತ್ರಕರ್ತರ ಭವಿಷ್ಯ ಅರ್ಥಪೂರ್ಣವಾಗಿ ಮುಂದುವರೆಯುತ್ತದೆ ಎಂದರು. ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪತ್ರಕರ್ತರು ಅಕ್ಷರ ಲೋಕದ ಪ್ರತಿನಿಧಿಗಳು ಮಾತ್ರವಲ್ಲ, ಜನಪರ ಧ್ವನಿಯ ಪ್ರತಿನಿಧಿಗಳು ಹೌದು. ಸೃಷ್ಠಿಕರ್ತನಿಗಿಂತಲೂ ಪತ್ರಕರ್ತ ದೊಡ್ಡವನು ಎನ್ನುವುದು ನನ್ನ ಅನಿಸಿಕೆ ಎಂದರು.ಯಾವುದೇ ಲೋಪ ಇಲ್ಲದ ಹಾಗೆ ತೆರೆಯ ಹಿನ್ನೆಲೆಯಲ್ಲಿ ಇದ್ದುಕೊಂಡು ಸಮಾಜವನ್ನು ಸರಿದಾರಿಗೆ ತರುವ, ಆಡಳಿತ ಹಾಗೂ ಜನಪ್ರತಿನಿಧಿಗಳನ್ನು ಸುಧಾರಿಸುವಂತಹ ಕೆಲಸವನ್ನು ಪತ್ರಕರ್ತರು ಪ್ರತಿಕ್ಷಣ ಮಾಡುತ್ತಿದ್ದಾರೆ. ಇದು ಅತ್ಯಂತ ಜವಾಬ್ದಾರಿಯುತ ಕೆಲಸ ಎಂದು ತಿಳಿಸಿದರು. ಪಾವಗಡ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಜಪಾನಂದ ಜೀ ಮಾತನಾಡಿ, ತುಮಕೂರು ನಗರದಲ್ಲಿ ನಡೆಯುತ್ತಿರುವ ಪತ್ರಕರ್ತರ ರಾಜ್ಯ ಸಮ್ಮೇಳನ ಇಡೀ ದೇಶಕ್ಕೆ ಮಾದರಿಯಾಗಲಿ. ನಡೆದಾಡುವ ದೇವರು ಓಡಾಡಿದ ಈ ಪುಣ್ಯಭೂಮಿಯಲ್ಲಿ ಯಾವ ಕಾರ್ಯಕ್ರಮ ಮಾಡಿದರೂ ಮಾದರಿ ಕಾರ್ಯಕ್ರಮವಾಗಿ ಹೊರ ಹೊಮ್ಮುತ್ತದೆ ಎಂದರು. ನಂತರ ಟೌನ್‌ಹಾಲ್‌ನಿಂದ ಕೆ. ಲಕ್ಕಪ್ಪ ವೃತ್ತ, ಬನಶಂಕರಿ, ಸದಾಶಿವನಗರದ ಮೂಲಕ ಎಸ್‌ಎಸ್‌ಐಟಿ ಕಾಲೇಜು ಆವರಣದವರೆಗೆ ಸಾಗಿದ ಮೆರವಣಿಗೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಪತ್ರಕರ್ತರು, ಜಿಲ್ಲೆಯ ಪತ್ರಕರ್ತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.ಮೆರವಣಿಗೆಯಲ್ಲಿ ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಸಿಇಓ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ, ಕೆಯುಡಬ್ಲುಜೆ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ರಘುರಾಮ್, ಹಿರಿಯ ಪತ್ರಕರ್ತರಾದ ಎಸ್. ನಾಗಣ್ಣ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.