ಅದ್ಧೂರಿಯಿಂದ ಜರುಗಿದ ದುರ್ಗಾದೇವಿ ಜಾತ್ರೆ

| Published : May 22 2024, 12:47 AM IST

ಸಾರಾಂಶ

ಮುದಗಲ್ ಸಮೀಪದ ಹಡಗಲಿ ಗ್ರಾಮದ ದುರ್ಗಾದೇವಿ ಜಾತ್ರೆ ಅಂಗವಾಗಿ ಅಗ್ನಿಕೊಂಡ ಹಾಯುವ ಕಾರ್ಯಕ್ರಮ ಜರುಗಿತು.

ಮುದಗಲ್: ಪಟ್ಟಣ ಸಮೀಪದ ಹಡಗಲಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರೆ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಜಾತ್ರೆ ಅಂಗವಾಗಿ ಗ್ರಾಮದ ಹೊರವಲಯದಲ್ಲಿರುವ ಗರ್ಭಗುಡಿಗೆ ವಿಶೇಷ ಪೂಜೆ ಮತ್ತು ಪೂಜಾರಿ ಹೇಳಿಕೆ ಕಾರ್ಯಕ್ರಮ ನಡೆಯಿತು.ಜಾತ್ರೆ ಹಿನ್ನೆಲೆ ಗುಡಿಗೆ ಕಳಸಾರೋಹಣ ಮತ್ತು ವಿಶೇಷ ಪೂಜೆ ಜೊತೆಗೆ ಅಗ್ನಿಕೊಂಡ ತುಳಿಯುವ ಕಾರ್ಯಕ್ರಮ ಜರುಗಿದವು. ಹಡಗಲಿ ಸುತ್ತಮುತ್ತಲಿನ ಗ್ರಾಮಗಳಾದ ನಾಗಲಾಪುರ, ದೆಸಾಯಿ ಭೋಗಾಪುರ, ಹಡಗಲಿ ತಾಂಡಾ, ಕನ್ನಾಳ, ತಿಮ್ಮಾಪೂರ, ತಲೇಖಾನ್, ಯರದೊಡ್ಡಿ, ವೆಣ್ಯಪ್ಪನ ತಾಂಡಾ, ರಾಮಪ್ಪನತಾಂಡಾ, ಲಿಂಬೇಪ್ಪನ ತಾಂಡಾ ಸೇರಿ ಮುದಗಲ್ಲ ಪಟ್ಟಣ, ಆಂದ್ರಪ್ರದೇಶದ ಭಕ್ತರು ಬಂದು ದೇವಿಗೆ ಕಾಯಿ-ಕರ್ಪೂರ, ಹೂ-ಹಣ್ಣು, ಮುಡಿಪು, ಸಿಹಿ ಅಂಡುಗೆಯ ಪೂಜೆಮಾಡಿದರೆ ಇನ್ನು ಕೆಲವರು, ಉರಳು ಸೇವೆ, ಕುಂಭ ಮೇರವಣಿಗೆ ಮಾಡಿ ದೇವಿ ಕೃಪೆಗೆ ಪಾತ್ರರಾಗುವರು.

ಇದೇ ವೇಳೆ ಪೂಜಾರಿಗಳಿಂದ ಅಗ್ನಿಕೊಂಡ ಹಾಯುವ ಹಾಗೂ ಅಕ್ಕಿಪಾಯಸ ತಗೆಯುವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ನೋಡಲು ಸಾವಿರಾರು ಭಕ್ತರು ಆಗಮಿಸಿದ್ದರು.

ಜಾತ್ರೆಯಲ್ಲಿ ತಲೇಖಾನ ಗ್ರಾಪಂ ಅಧ್ಯಕ್ಷೆ ಉಮ್ಮವ್ವ, ಸದಸ್ಯರಾದ ದುರುಗಪ್ಪ ಕಟ್ಟಿಮನಿ, ಪಾಂಡುರಂಗ ನಾಯ್ಕ, ಮೌನೇಶ, ಕನಕಪ್ಪ, ಮಾನಸಿಂಗ್, ಮಲ್ಲಮ್ಮ ಶರಣಪ್ಪ ತುಗ್ಗಲಿ, ಹಡಗಲಿ ತಾಪಂ ಮಾಜಿ ಸದಸ್ಯೆ ಶಾರದಾ ದೇವಪ್ಪ ರಾಠೋಡ, ಪಿಕಾರ್ಡ ಬ್ಯಾಂಕ ಮಾಜಿ ನಿರ್ದೇಶಕ ಶಂಭುಲಿಂಗಪ್ಪ ವಿಟ್ಲಾಪುರ, ಉತ್ತರ ಕರ್ನಾಟಕ ಬಂಜಾರ ಸಂಘದ ಅಧ್ಯಕ್ಷ ಪಾಂಡುರಂಗ ಪಮ್ಮಾರ, ಗ್ರಾಪಂ ಮಾಜಿ ಸದಸ್ಯರಾದ ವೆಂಕನಗೌಡ ಪೊಲೀಸ ಪಾಟೀಲ್, ಪಿಕೇಪ್ಪ ನಾಯ್ಕ, ತಿಮ್ಮನಗೌಡ ದಳಪತಿ, ಸೇರಿ ತಾಂಡಾಗಳ ಬಂಜಾರ ಮುಖಂಡರುಗಳು ಇದ್ದರು.