ಕಾಫಿ ನಾಡಿನಲ್ಲಿ ಈದ್‌ ಮಿಲಾದ್‌ ಅದ್ಧೂರಿ ಮೆರವಣಿಗೆ

| Published : Sep 17 2024, 12:52 AM IST

ಸಾರಾಂಶ

ಚಿಕ್ಕಮಗಳೂರು, ಪ್ರವಾದಿ ಮಹಮ್ಮದ್‌ ಅವರ ಜನ್ಮ ದಿನಾಚರಣೆಯನ್ನು ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಕಾಫಿ ನಾಡಿನಲ್ಲಿ ಸೋಮವಾರ ಅದ್ಧೂರಿಯಾಗಿ ಆಚರಿಸಿದರು.

ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಬಾಂಧವರು । ಎಲ್ಲೆಡೆ ಸಡಗರ ಸಂಭ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರವಾದಿ ಮಹಮ್ಮದ್‌ ಅವರ ಜನ್ಮ ದಿನಾಚರಣೆಯನ್ನು ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಕಾಫಿ ನಾಡಿನಲ್ಲಿ ಸೋಮವಾರ ಅದ್ಧೂರಿಯಾಗಿ ಆಚರಿಸಿದರು.

ಈದ್‌ ಮಿಲಾದ್‌ ಹಿನ್ನಲೆಯಲ್ಲಿ ಚಿಕ್ಕಮಗಳೂರಿನ ಷರಿಫ್ ಗಲ್ಲಿ, ಗೌರಿ ಕಾಲುವೆ, ಉಪ್ಪಳ್ಳಿ ಬಡಾವಣೆಯಲ್ಲಿ ಬಣ್ಣ ಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಮೆರವಣಿಗೆ ಸಾಗುವ ಎಂ.ಜಿ. ರಸ್ತೆ, ಐ.ಜಿ. ರಸ್ತೆಗಳಲ್ಲಿ ಹಸಿರು ಬಟ್ಟಿಂಗ್ಸ್‌, ಬ್ಯಾನರ್‌ಗಳಿಂದ ರಾರಾಜಿಸುತ್ತಿದ್ದವು.

ಸೋಮವಾರ ಬೆಳಿಗ್ಗೆ ಉಪ್ಪಳ್ಳಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಇದೇ ವೇಳೆಯಲ್ಲಿ ಯುವಕರು, ಬೈಕ್‌ ಹಾಗೂ ಕಾರುಗಳಲ್ಲಿ ಹಸಿರು ಧ್ವಜದೊಂದಿಗೆ ಪ್ರಮುಖ ರಸ್ತೆಗಳಲ್ಲಿ ಗುಂಪು ಗುಂಪಾಗಿ ಸಾಗುತ್ತಿದ್ದರು. ಎಲ್ಲೆಡೆ ಹಬ್ಬದ ಸಡಗರ ಕಂಡು ಬಂದಿತು.

ಉಪ್ಪಳ್ಳಿ ಸೇರಿದಂತೆ ನಗರದ ವಿವಿಧ ಬಡಾವಣೆಗಳಿಂದ ಹಾಗೂ ಆಲ್ದೂರಿನಿಂದ ಇಲ್ಲಿನ ಅಂಡೇಛತ್ರಕ್ಕೆ ಆಗಮಿಸಿದ ಮುಸ್ಲಿಂ ಬಾಂಧವರು ಮಧ್ಯಾಹ್ನದ ವೇಳೆಗೆ ಮೆರವಣಿಗೆಯಲ್ಲಿ ಸಾಗಿದರು. ಸಾವಿರಾರು ಸಂಖ್ಯೆಯಲ್ಲಿದ್ದ ಸಮುದಾಯದವರು ಇಲ್ಲಿನ ಎಂ.ಜಿ. ರಸ್ತೆಯಿಂದ ಅಂಚೆ ಕಚೇರಿ ರಸ್ತೆ ಮೂಲಕ ತೊಗರಿಹಂಕಲ್‌ ವೃತ್ತಕ್ಕೆ ತೆರಳಿ ಅಲ್ಲಿಂದ ಐ.ಜಿ. ರಸ್ತೆಯ ಮೂಲಕ ಕೆ.ಎಂ. ರಸ್ತೆಯ ಮೂಲಕ ಹನುಮಂತಪ್ಪ ವೃತ್ತಕ್ಕೆ ತಲುಪಿದರು. ಬಳಿಕ ಎಂ.ಜಿ.ರಸ್ತೆಯಲ್ಲಿ ಸಾಗಿ ಅಂಡೇಛತ್ರ ತಲುಪಿದರು.

ವೈಭವದಿಂದ ನಡೆದ ಈ ಮೆರವಣಿಗೆ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ರಸ್ತೆಯ ಉದ್ದಕ್ಕೂ ನಿಂತಿದ್ದರು. ಮುಸ್ಲಿಂ ಸಮುದಾಯ ಮಹಿಳೆಯರು ಸೇರಿದಂತೆ ಬೇರೆ ಸಮುದಾಯದವರು ಈ ವೈಭವವನ್ನು ನೋಡಿದರು. ಮೆರವಣಿಗೆ ಶಾಂತಿಯುತವಾಗಿ ನಡೆಯಿತು.

ಮೆರವಣಿಗೆ ಸಾಗುವ ಮಾರ್ಗದಲ್ಲಿ ವಾಹನಗಳ ನಿಲುಗಡೆ ನಿಷೇಧ ಮಾಡಲಾಗಿತ್ತು. ಹಾಗಾಗಿ ಬೆಳಿಗ್ಗೆಯಿಂದಲೇ ಎಂ.ಜಿ. ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಲಾಗಿದ್ದು, ಈ ರಸ್ತೆ ಬಿಕೋ ಎನ್ನುತ್ತಿತ್ತು. ಭಾರೀ ವಾಹನಗಳ ಸಂಚಾರ ನಿಷೇಧಿಸಿ ಪರ್ಯಾಯ ರಸ್ತೆಯಲ್ಲಿ ಸಂಚಾರಿಸಲು ಅನುವು ಮಾಡ ಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

---- ಬಾಕ್ಸ್‌ -----

ಪ್ರೀತಿ - ಸಹಬಾಳ್ವೆಯೇ ಈದ್‌ ಮಿಲಾದ್ : ಮಹಮ್ಮದ್‌ ರಜ್ವಿ

ಚಿಕ್ಕಮಗಳೂರು: ಮಾನವರಲ್ಲಿ ಪ್ರೀತಿ ಹಾಗೂ ಸಹಭಾಳ್ವೆ ಮೂಡಿಸುವ ಹಬ್ಬ ಈದ್‌ ಮಿಲಾದ್ . ಜೀವನದಲ್ಲಿ ಸಾಮರಸ್ಯ ಚಿಂತನೆಗಳನ್ನು ಅಳವಡಿಸಿಕೊಂಡು ಮುನ್ನೆಡೆಯಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಶಾಹೀದ್ ಮಹಮ್ಮದ್ ರಜ್ವಿ ಹೇಳಿದರು.ನಗರದ ಕಲ್ಲುದೊಡ್ಡಿ ಶಾಂತಿನಗರದಲ್ಲಿ ಎಚ್.ಕೆ.ಜೆ.ಎಂ. ಮಸೀದಿಯಲ್ಲಿ ಆಯೋಜಿಸಿದ್ದ ಈದ್‌ ಮಿಲಾದ್, ಮಕ್ಕಳ ಸಾಂಸ್ಕೃ ತಿಕ ಗಾಯನ ಹಾಗೂ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಪ್ರವಾದಿ ಮುಹಮ್ಮದ್‌ರ 1499 ಜನ್ಮದಿನ ಅತ್ಯಂತ ಪವಿತ್ರವಾದದು. ಸರ್ವ ಧರ್ಮ ಒಂದೇ ಎಂಬ ಸಂದೇಶವನ್ನು ಸಮಾಜದಲ್ಲಿ ಸಾರಿ ಶಾಂತಿ, ನೆಮ್ಮದಿ ನೆಲೆಸಲು ಕಾರಣರಾದ ಸಂತರ ಜನ್ಮದಿನ ಆಚರಿಸುತ್ತಿರುವುದು ಬಹಳಷ್ಟು ಹೆಮ್ಮೆ ತಂದಿದೆ ಎಂದರು.

ಈಗಾಗಲೇ ವಕ್ಫ್ ಸಮಿತಿಯಿಂದ ಶಾಂತಿನಗರ, ಉಪ್ಪಳ್ಳಿ ಮಸೀದಿಗಳ ಅಭಿವೃದ್ಧಿ ದೃಷ್ಟಿಯಿಂದ ತಲಾ 20 ಲಕ್ಷ ರು.ಗಳನ್ನು ಶಾಸಕರು ಹಾಗೂ ವಕ್ಫ್ ರಾಜ್ಯಾಧ್ಯಕ್ಷರ ಸಹಕಾರದಿಂದ ಬಿಡುಗಡೆಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಮಸೀದಿಗಳ ಶ್ರೇಯೋಭಿವೃದ್ಧಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.ಮಸೀದಿ ಸಮಿತಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಮುನೀರ್ ಅಹ್ಮದ್ ಮಾತನಾಡಿ, ಮಕ್ಕಳಲ್ಲಿ ಸಾಂಸ್ಕೃತಿಕ ಚಟುವಟಿಕೆ ಮೂಡಿಸಲು ಕನ್ನಡ, ಉರ್ದು, ಮಳೆಯಾಳಿ ಭಾಷೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಕ್ಕಳು ಖುಷಿಯಿಂದ ಪಾಲ್ಗೊಂಡು ಮನರಂಜಿಸಿದರು ಎಂದರು.ಇದೇ ವೇಳೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಈ ಸಂದರ್ಭದಲ್ಲಿ ಧರ್ಮಗುರು ಎಪಿಎಸ್ ತಂಗಲ್, ನಗರಸಭಾ ಸದಸ್ಯ ಖಲಂದರ್, ಮಸೀದಿ ಸಮಿತಿ ಪ್ರಧಾನ ಕಾರ್ಯದರ್ಶಿ ಅಹ್ಮದ್ ಷರೀಫ್, ಮುಖಂಡರಾದ ಅನ್ಸರ್‌ ಆಲಿ, ಜಮೀರ್ ಅಹ್ಮದ್, ಖಲೀದ್ ಅಹ್ಮದ್, ತನ್ವೀರ್ ಅಹ್ಮದ್, ವಾಂಡಿ ರಜಾಕ್, ಸಿದ್ದಿಕಿ ಮತ್ತಿತರಿರದ್ದರು.

16 ಕೆಸಿಕೆಎಂ 5ಈದ್‌ ಮಿಲಾದ್ ಹಿನ್ನಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಸೋಮವಾರ ನಡೆದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಪಾಲ್ಗೊಂಡಿದ್ದರು.