ಹಿಂದೂ ಮಹಾಗಣಪತಿಗಳಿಗೆ ಅದ್ಧೂರಿ ವಿದಾಯ

| Published : Sep 17 2025, 01:06 AM IST

ಸಾರಾಂಶ

ನವನಗರದ ಪಂಚಾಕ್ಷರಿನಗರ ಹಾಗೂ ಪುನೀತ ರಾಜಕುಮಾರ ಸರ್ಕಲ್‌ನಲ್ಲಿ ಎರಡು ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಇನ್ನು ಅಶೋಕನಗರದಲ್ಲಿ ಒಂದು ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಸತತ 21 ದಿನಗಳಿಂದ ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಯಿತು. ಪ್ರತಿನಿತ್ಯ ಅನ್ನ ಸಂತರ್ಪಣೆ, ವಿಶೇಷ ಅಲಂಕಾರ ಪೂಜೆ, ಹೋಮ ಹವನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.

ಹುಬ್ಬಳ್ಳಿ: ನಗರದಲ್ಲಿ ಪ್ರತಿಷ್ಠಾಪಿಸಿದ್ದ ಮೂರು ಹಿಂದು ಮಹಾಗಣಪತಿಗಳ ಮೂರ್ತಿಗಳನ್ನು 21ನೆಯ ದಿನವಾದ ಮಂಗಳವಾರ ಸಹಸ್ರಾರು ಭಕ್ತರ ಸಡಗರ, ಸಂಭ್ರಮದಿಂದ ಭವ್ಯ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.

ಮದ್ದೂರು ಘಟನೆಯಿಂದಾಗಿ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಭಕ್ತಗಣದ ಜಯಘೋಷ ಮುಗಿಲುಮುಟ್ಟಿತ್ತು. ಯುವ ಸಮೂಹ ಕುಣಿದು ಕುಪ್ಪಳಿಸಿತು.

ನವನಗರದ ಪಂಚಾಕ್ಷರಿನಗರ ಹಾಗೂ ಪುನೀತ ರಾಜಕುಮಾರ ಸರ್ಕಲ್‌ನಲ್ಲಿ ಎರಡು ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಇನ್ನು ಅಶೋಕನಗರದಲ್ಲಿ ಒಂದು ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು.

ಸತತ 21 ದಿನಗಳಿಂದ ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಯಿತು. ಪ್ರತಿನಿತ್ಯ ಅನ್ನ ಸಂತರ್ಪಣೆ, ವಿಶೇಷ ಅಲಂಕಾರ ಪೂಜೆ, ಹೋಮ ಹವನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಗಣೇಶನ ದರ್ಶನಕ್ಕೆ ನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದರು.

ಮಂಗಳವಾರ ನಡೆದ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ನವನಗರದ ಮೂರ್ತಿಗಳ ಮೆರವಣಿಗೆ ಕರ್ನಾಟಕ ಸರ್ಕಲ್‌, ಕ್ಯಾನ್ಸರ್‌ ಹಾಸ್ಪಿಟಲ್‌, ಭೈರಿದೇವರಕೊಪ್ಪ, ಉಣಕಲ್‌, ವಿದ್ಯಾನಗರದ ಮುಖ್ಯ ರಸ್ತೆಯ ಮಾರ್ಗವಾಗಿ ಸಂಚರಿಸಿತು. ನಂತರ ಹೊಸೂರಿನ ಮಹಾನಗರ ಪಾಲಿಕೆಯ ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು.

ಅಶೋಕನಗರದ ವೃತ್ತದಲ್ಲಿ ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿಯನ್ನು ಮೆರವಣಿಗೆಯ ಮೂಲಕ ದೇಶಪಾಂಡೆ ನಗರದ, ಕಾಟನ್‌ ಮಾರ್ಕೆಟ್‌, ಹೊಸೂರು ವೃತ್ತದ ಮಾರ್ಗವಾಗಿ ತಂದು ಹೊಸೂರು ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು. ಅದಕ್ಕೂ ಮುನ್ನ ಗಣೇಶ ಮೂರ್ತಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಗಣೇಶನಿಗೆ ಹಾಕಲಾದ ಅಲಂಕಾರಿಕ ವಸ್ತುಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು.

ಕುಣಿದು ಕುಪ್ಪಳಿಸಿದರು: ಗಣೇಶನ ವಿಸರ್ಜನೆಯ ಅಂಗವಾಗಿ ಸಂಜೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಇಡಲಾಗಿದ್ದ ಗಣೇಶನಿಗೆ ಹೂವಿನ ಹಾರ ಹಾಗೂ ಅಲಂಕಾರಿಕ ವಸ್ತುಗಳಿಂದ ಸಿಂಗಾರ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಜನರು ಡಿಜೆ ಮ್ಯೂಸಿಕ್‌ಗೆ ನರ್ತಿಸಿದರು. ಬೋಲೋ ಶ್ರೀ ಗಜಾನನ ಮಹಾರಾಜ್‌ ಕೀ...ಬಪ್ಪರೆ..ಬಪ್ಪಾ ಗಣಪತಿ ಬಪ್ಪಾ ಸೇರಿದಂತೆ ವಿವಿಧ ಜಯಘೋಷಗಳು ಮೊಳಗಿದವು.

ಬಿಗಿ ಬಂದೋಬಸ್ತ್‌: ಮೂರು ಗಣೇಶನ ಮೆರವಣಿಗೆಗೆ ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು. ಪೊಲೀಸ್‌ ವ್ಯಾನ್‌, ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತು ಮೆರವಣಿಗೆ ವೀಕ್ಷಿಸುತ್ತಿದ್ದ ಪೊಲೀಸರು, ಸರ್ಫಗಾವಲು ನಿಯೋಜಿಸಲಾಗಿತ್ತು. ಸಿವಿಲ್‌ ಡ್ರೆಸ್‌ನಲ್ಲಿದ್ದ ಕೆಲ ಪೊಲೀಸರು ಮೊಬೈಲ್‌ ಮೂಲಕ ವಿಡಿಯೋ ಕೂಡ ಮಾಡುತ್ತಿದ್ದರು. ಇನ್ನು ನವನಗರದ ಮಸೀದಿ ಬಳಿ ಮೆರವಣಿಗೆ ಬರುತ್ತಿದ್ದಂತೆ, "ನೀನೇ ಅಲ್ಲಾ, ನೀನೇ ಶಾಮಾ.. ನೀನೇ ಎಲ್ಲ... " ಎಂಬ ಕೋಮುಸೌಹಾರ್ದತೆಯ ಹಾಡು ಹಚ್ಚುವ ಮೂಲಕ ಗಣೇಶ ಮಂಡಳಿ ಸೌಹಾರ್ದತೆಯನ್ನು ಪ್ರತಿಬಿಂಬಿಸಿದ್ದು ವಿಶೇಷ.

ಗಣೇಶ ಪ್ರತಿಷ್ಠಾಪನೆಯ ಮಂಡಳಿಯ ಮುಖಂಡರಾದ ವಿಜಯಕುಮಾರ ಅಪ್ಪಾಜಿ, ಸುನೀಲಕುಮಾರ ರೇವಣಕರ, ವಿನೋದ ಪಾಟೀಲ, ಮಲ್ಲಯ್ಯಜ್ಜ ಹಿರೇಮಠ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಹಿರಿಯರು ಉಪಸ್ಥಿತರಿದ್ದರು.