ರಾಜ ಬೀದಿಯಲ್ಲಿ ನಗರ ದೇವತೆಗಳ ಅದ್ಧೂರಿ ಉತ್ಸವ

| Published : May 04 2024, 12:36 AM IST

ಸಾರಾಂಶ

ಉರಿ ಬಿಸಿಲು ಲೆಕ್ಕಿಸದೆ ಭಾವಪರವಶರಾದ ದುರ್ಗದ ಜನಅಕ್ಕ ತಂಗಿಯರ ಉತ್ಸವ ಕಣ್ತುಂಬಿಕೊಂಡ ಮಹಿಳೆಯರು

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಕೋಟೆ ನಾಡು ಚಿತ್ರದುರ್ಗದಲ್ಲಿ ತೀಡುತ್ತಿರುವ ಬಿಸಿ ಗಾಳಿ ನಡುವೆ ನಗರ ಶಕ್ತಿ ದೇವತೆಗಳ ಉತ್ಸವ ಶುಕ್ರವಾರ ಅದ್ಧೂರಿಯಾಗಿ ನೆರವೇರಿತು.ಉರಿ ಬಿಸಿಲು ಲೆಕ್ಕಿಸದೆ ರಸ್ತೆ ಇಕ್ಕೆಲಗಳಲ್ಲಿ ನಿಂತ ದುರ್ಗದ ಮಂದಿ ಭಾವಪರವಶರಾದರು. ಮಹಿಳೆಯರು ಅಕ್ಕ ತಂಗಿಯರ ಉತ್ಸವ ಕಣ್ತುಂಬಿಕೊಂಡು ಮನದಲ್ಲಿಯೇ ಭಕ್ತಿ ಸಮರ್ಪಣೆ ಮಾಡಿದರು.

ಕೋಟೆ ರಸ್ತೆಯಲ್ಲಿರುವ ಪಾದಗುಡಿಯಿಂದ ಹೊರಟ ಏಕನಾಥೇಶ್ವರಿ ಅಮ್ಮನವರ ಉತ್ಸವ ಆನೆಬಾಗಿಲು, ಬುರುಜಿನಹಟ್ಟಿ, ಹೊಳಲ್ಕೆರೆ ರಸ್ತೆ, ಎಸ್‌ಬಿಎಂ ರಸ್ತೆ, ಧರ್ಮಶಾಲಾ ರಸ್ತೆ, ದೊಡ್ಡಪೇಟೆ, ಜೋಗಿಮಟ್ಟಿ ರಸ್ತೆ, ಕರುವಿನಕಟ್ಟೆ ವೃತ್ತದ ಮೂಲಕ ಸಾಗಿತು. ಮಲ್ಲಿಗೆ, ಕನಕಾಂಬರ, ಸುಗಂಧರಾಜ, ಗುಲಾಬಿ, ಸೇವಂತಿಗೆ, ದ್ರಾಕ್ಷಿ, ಬಾದಾಮಿ, ದೊಡ್ಡ ದೊಡ್ಡ ಗಾತ್ರದ ಹಾರಗಳಿಂದ ಅಲಂಕರಿಸಲಾಗಿದ್ದ ಏಕನಾಥೇಶ್ವರಿ ಅಮ್ಮ ಎತ್ತಿನಗಾಡಿಯಲ್ಲಿ ವಿರಾಜಮಾನಳಾಗಿದ್ದಳು. ಮೆರವಣಿಗೆಯನ್ನು ರಸ್ತೆಯ ಎರಡು ಬದಿಗಳಲ್ಲಿ ನಿಂತಿದ್ದ ಭಕ್ತರು ವೀಕ್ಷಿಸಿ ಸಂಭ್ರಮಿಸಿದರು. ಅಶ್ವವಾಹನರೂಢ ದೇವತೆಗಳ ಉತ್ಸವ ಮೂರ್ತಿಗಳನ್ನು ಜೋಡೆತ್ತು ಗಾಡಿಯಲ್ಲಿ ಪ್ರತಿಷ್ಠಾಪಿಸಲಾಗಿತ್ತು. ರಾತ್ರಿ ಹತ್ತರ ಸುಮಾರಿಗೆ ಏಕನಾಥೇಶ್ವರಿ ಮರಳಿ ಪಾದಗುಡಿ ತಲುಪಿದಳು.

ಅಲ್ಲಲ್ಲಿ ಮನೆಯ ಮುಂದೆ ಮಹಿಳೆಯರು ನೀರು ಹಾಕಿ ರಂಗೋಲಿ ಬಿಡಿಸಿ ಏಕನಾಥೇಶ್ವರಿ ಅಮ್ಮನಿಗೆ ಭಕ್ತಿ ಸಮರ್ಪಿಸಿದರು. ಡೊಳ್ಳು, ತಮಟೆ, ಉರುಮೆ ಸದ್ದಿಗೆ ಮೆರವಣಿಗೆಯಲ್ಲಿ ಸೇರಿದ್ದ ನೂರಾರು ಯುವಕರು ಕುಣಿದು ಕುಪ್ಪಳಿಸಿದರು. ಏಕನಾಥೇಶ್ವರಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ, ನಿರ್ದೇಶಕ ರಾಮಜ್ಜ, ಮಲ್ಲಿಕಾರ್ಜುನ್, ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಓಂಕಾರ್, ಶಾರದ ಬ್ರಾಸ್ ಬ್ಯಾಂಡ್‍ನ ಗುರುಮೂರ್ತಿ ಹಾಗೂ ಉತ್ಸವ ಸಮಿತಿಯ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಬರಗೇರಮ್ಮ ಮೆರವಣಿಗೆ ನಗರದ ಮತ್ತೋರ್ವ ದೇವತೆ ಬರಗೇರಮ್ಮನವರ ಮೆರವಣಿಗೆ ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಬೃಹದಾಕಾರವಾದ ಹೂವಿನ ಹಾರ, ಬಾದಾಮಿ, ದ್ರಾಕ್ಷಿ, ಚೆರ್ರಿ ಫ್ರೂಟ್, ಖರ್ಜೂರಗಳಿಂದ ಸಿಂಗಾರಗೊಂಡಿದ್ದ ಬರಗೇರಮ್ಮನಿಗೆ ರಸ್ತೆಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಉರಿ ಬಿಸಿಲಿಗೆ ಕಾದು ಕೆಂಡದಂತಾಗಿದ್ದ ರಸ್ತೆಗೆ ಟ್ರಾಕ್ಟರ್ ಮೂಲಕ ನೀರು ಹರಿಸಲಾಯಿತು.ಉರುಮೆ, ಡೊಳ್ಳು, ಸೋಮನ ಕುಣಿತ, ನಂದಿಕೋಲು, ಚಂಡೆ ವಾದ್ಯ ಇವುಗಳ ಸದ್ದಿಗೆ ಮೆರವಣಿಗೆಯಲ್ಲಿದ್ದ ಸಹಸ್ರಾರು ಯುವಕರು ಕುಣಿದು ಮೆರವಣಿಗೆಯ ಖುಷಿಯನ್ನು ಸಂಭ್ರಮಿಸಿದರು.

ಎಸ್.ಎನ್.ರವಿಕುಮಾರ್, ಓಂಕಾರ್ ಇನ್ನು ಅನೇಕ ಪ್ರಮುಖರು ಮೆರವಣಿಗೆಯಲ್ಲಿದ್ದರು. ಕೋಟೆ ರಸ್ತೆಯ ಪಾದದ ಗುಡಿ ಮುಂಭಾಗದಲ್ಲಿ ಏಕನಾಥೇಶ್ವರಿ ಹಾಗೂ ಬರಗೇರಮ್ಮ ದೇವಿಯ ಮೂಲ ಸನ್ನಿಧಾನದ ಮುಂಭಾಗದಲ್ಲಿ ದೇವಿಯ ಸಿಡಿ ಮಹೋತ್ಸವವೂ ಈ ಬಾರಿ ಮೇ 4ರಂದು ಸಂಜೆ 6ಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ. ಈ ಮಹೋತ್ಸವದ ಹಿಂದಿನ ದಿನ ಅಂದರೆ ಶುಕ್ರವಾರವೇ ರಾಜಬೀದಿಗಳಲ್ಲಿ ಮೆರವಣಿಗೆ ನಡೆಯುವ ವಾಡಿಕೆ ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು, ಅದರಂತೆ ಈ ಬಾರಿಯೂ ಹಿಂದಿನ ವಷಕ್ಕಿಂತಲೂ ಕಳೆಗಟ್ಟಿತ್ತು. ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ ಮಗುವಿನೊಂದಿಗೆ ಮೆರವಣಿಗೆಯಲ್ಲಿ ಕೆಲಕಾಲ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.