ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಹಾಲರುವೆ ಉತ್ಸವಕ್ಕೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಾನಿಧ್ಯದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಿತು.ಹಾಲರುವೆ ಉತ್ಸವ:ಸಾಂಪ್ರದಾಯದಂತೆ ದೀಪಾವಳಿ ಜಾತ್ರೆ ಪ್ರಯುಕ್ತ ನಡೆಯುವ ಹಾಲರುವೆ ಉತ್ಸವಕ್ಕೆ ಬೇಡಗಂಪಣ ಸಮುದಾಯದ 101 ಬಾಲೆಯರು ಹಾಲ ಹಳ್ಳದಿಂದ ಗಂಗಾಜಲಕ್ಕೆ ಪೂಜೆ ಸಲ್ಲಿಸುತ್ತಾರೆ. ಒಂಬತ್ತು ಕಿ.ಮೀ. ದೂರದಲ್ಲಿರುವ ಹಾಲು ಹಳ್ಳದಿಂದ ಮಕ್ಕಳು ಬರಿಗಾಲಲ್ಲಿ ಹಾಲರುವೆ ಹೊತ್ತು ತಂದು ಮಹದೇಶ್ವರನಿಗೆ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯದ ಹೊರಭಾಗದಲ್ಲಿ ವಿಶೇಷವಾಗಿ ಬಗೆ ಬಗೆಯ ಹೂಗಳಿಂದ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು.
ಸಂಭ್ರಮದಿಂದ ನಡೆದ ಉತ್ಸವಗಳು:ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿ ರಥೋತ್ಸವ ಹಾಗೂ ಬಸವ ವಾಹನ ಉತ್ಸವ, ರುದ್ರಾಕ್ಷಿ ಮಂಟಪೋತ್ಸವ, ಹುಲಿವಾಹನ ಉತ್ಸವ ನಡೆಯಿತು. ಹರಕೆ ಹೊತ್ತ ಭಕ್ತರಿಂದ ದೂಪದ ಸೇವೆ, ಪಂಜಿನ ಸೇವೆ, ಉರುಳು ಸೇವೆ, ಮುಡಿಸೇವೆ ನಡೆದವು.
ಹಾಲರುವೆ ಉತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಬಂದಿದ್ದರು. ದೇವಾಲಯ ಸೇರಿದಂತೆ ದಾಸೋಹ ಭವನ ಹಾಗೂ ರಂಗಮಂದಿರ ಮತ್ತು ಸಾಲೂರು ಮಠದ ರಸ್ತೆಯಲ್ಲಿ ಬಸ್ ನಿಲ್ದಾಣ ಸೇರಿದಂತೆ ಎಲ್ಲಿ ನೋಡಿದರು ಅಪಾರ ಸಂಖ್ಯೆಯ ಭಕ್ತ ಸಮೂಹವೇ ಕಂಡುಬಂತು. ಅಮಾವಾಸ್ಯೆ ಪೂಜೆಯಲ್ಲಿ ಮಹಿಳಾ ಭಕ್ತರೆ ಸಂಖ್ಯೆ ಹೆಚ್ಚಾಗಿತ್ತು.ಚಿನ್ನದ ಹಾಗೂ ಬೆಳ್ಳಿರಥೋತ್ಸವ ಪ್ರಮುಖ ಆಕರ್ಷಣೆ:
ಚಿನ್ನದ ರಥೋತ್ಸವ ಪ್ರತಿದಿನ ಸಂಜೆ ನಡೆಯುತ್ತದೆ. ಬೆಳಗ್ಗೆ ಬೆಳ್ಳಿರಥೋತ್ಸವ ನಡೆಯುತ್ತದೆ. ಅಲ್ಲದೆ ನಿತ್ಯವೂ ಹುಲಿವಾಹನ ಉತ್ಸವ ,ಬಸವ ವಾಹನ ಮತ್ತು ರುದ್ರಾಕ್ಷಿ ಮಂಟಪ ಸೇವೆಗಳು ನಿರಂತರವಾಗಿವೆ. ಬೆಟ್ಟಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕೆ ತಕ್ಕಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.ಇಂದು ದೀಪಾವಳಿ ಮಹಾ ರಥೋತ್ಸವ:
ದೀಪಾವಳಿ ಮಹಾ ರಥೋತ್ಸವ ಬುಧವಾರ ಬೆಳಗ್ಗೆ 9.15 ರಿಂದ 9.55 ರವರೆಗೆ ನಡೆಯಲಿದೆ. ನಂತರ ಗುರು ಬ್ರಹ್ಮೋತ್ಸವ, ಅನ್ನಬ್ರಹ್ಮೋತ್ಸವ, ವಿಶೇಷ ಪೂಜಾ ಕಾರ್ಯಕ್ರಮಗಳು ಸಾಲೂರು ಬೃಹನ್ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆಯಲಿವೆ. ರಾತ್ರಿ ಮಾದಪ್ಪನಿಗೆ ಮಹಾ ನೈವೇದ್ಯದ ನಂತರ ದೀಪಾವಳಿ ತೆಪ್ಪೋತ್ಸವ ಸಹ ನಡೆಯಲಿದೆ.ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಿ ಕಾರ್ಯದರ್ಶಿ ಎ. ಇ ರಘು ಮಾತನಾಡಿ, ಹಾಲರುವೆ ವಿಶೇಷ ಉತ್ಸವಗಳು ನಡೆದಿದ್ದು, ಬುಧವಾರ ದೀಪಾವಳಿ ಮಹಾ ರಥೋತ್ಸವ ವಿಶೇಷ ಪೂಜೆ ಹಾಗೂ ರಾತ್ರಿ ತೆಪ್ಪೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಸಹ ಕ್ರಮ ಕೈಗೊಳ್ಳಲಾಗಿದೆ.