ವಿಜೃಂಭಣೆಯಿಂದ ನಡೆದ ಸಾಮೂಹಿಕ ಗಣೇಶೋತ್ಸವ; ಹೊಸ ಇತಿಹಾಸಕ್ಕೆ ಮುನ್ನುಡಿ

| Published : Sep 05 2025, 01:00 AM IST

ವಿಜೃಂಭಣೆಯಿಂದ ನಡೆದ ಸಾಮೂಹಿಕ ಗಣೇಶೋತ್ಸವ; ಹೊಸ ಇತಿಹಾಸಕ್ಕೆ ಮುನ್ನುಡಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಗಮಂಗಲ ಪಟ್ಟಣದಲ್ಲಿ ಗುರುವಾರ ವಿಜೃಂಭಣೆಯಿಂದ ನಡೆದ ಸಾಮೂಹಿಕ ಗಣೇಶೋತ್ಸವದಲ್ಲಿ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ಸಾಹಸ್ರಾರು ಭಕ್ತರು ಪಾಲ್ಗೊಂಡು ಜನರು ಉತ್ಸವಕ್ಕೆ ಸಾಕ್ಷಿಯಾಗುವ ಮೂಲಕ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದರು.

ಕನ್ನಡಪ್ರಭವಾರ್ತೆ ನಾಗಮಂಗಲ

ಪಟ್ಟಣದಲ್ಲಿ ಗುರುವಾರ ವಿಜೃಂಭಣೆಯಿಂದ ನಡೆದ ಸಾಮೂಹಿಕ ಗಣೇಶೋತ್ಸವದಲ್ಲಿ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ಸಾಹಸ್ರಾರು ಭಕ್ತರು ಪಾಲ್ಗೊಂಡು ಜನರು ಉತ್ಸವಕ್ಕೆ ಸಾಕ್ಷಿಯಾಗುವ ಮೂಲಕ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದರು.

ಪಟ್ಟಣದ ಸಾಮೂಹಿಕ ಗಣೇಶ ವಿಸರ್ಜನಾ ಸಮಿತಿಯಿಂದ ಆಯೋಜಿಸಿದ್ದ ಗಣೇಶೋತ್ಸವಕ್ಕೆ ಪುರಸಭೆ ವ್ಯಾಪ್ತಿಯ ಉಪ್ಪಾರಹಳ್ಳಿ, ಕೆ.ಮಲ್ಲೇನಹಳ್ಳಿ, ಬದರಿಕೊಪ್ಪಲು, ಸಾರಿಮೇಗಲಕೊಪ್ಪಲು, ಪಟ್ಟಣದ ಪೌರಕಾರ್ಮಿಕರ ಕಾಲೋನಿ, ಮೈಸೂರು ರಸ್ತೆಯ ಎ.ಕೆ.ಕಾಲೋನಿ, ಬಬ್ರುವಾಹನ ಸರ್ಕಲ್, ಗಾಣಿಗರ ಬೀದಿ ಮತ್ತು ಎಲ್ಲಮ್ಮದೇವಸ್ಥಾನದ ಮುಂಭಾಗದ ಗಣೇಶ ಮೂರ್ತಿ ಸೇರಿ ಒಟ್ಟು 11 ಗಣೇಶ ಮೂರ್ತಿಗಳನ್ನು ಅಲಂಕರಿಸಿದ ಟ್ರ್ಯಾಕ್ಟರ್‌ಗಳಲ್ಲಿರಿಸಿ ಟಿ.ಬಿ.ಬಡಾವಣೆ ಗಣಪತಿ ದೇವಸ್ಥಾನದ ಬಳಿಗೆ ತರಲಾಯಿತು.

ಮೈಸೂರು ರಸ್ತೆಯ ಮಸೀದಿ ಮುಂಭಾಗದಿಂದ ಹಾದುಬಂದು ಸಾಮೂಹಿಕ ಗಣೇಶಗಳೊಂದಿಗೆ ಸೇರಬೇಕಿದ್ದ ಕೆ.ಮಲ್ಲೇನಹಳ್ಳಿ ಮತ್ತು ಮೈಸೂರು ರಸ್ತೆಯ ಎ.ಕೆ.ಕಾಲೋನಿ ಗಣಪತಿ ಮೂರ್ತಿಗಳನ್ನು ಪೊಲೀಸರು ಬಿಗಿ ಭದ್ರತೆಯೊಂದಿಗೆ ಟಿ.ಬಿ.ಬಡಾವಣೆಗೆ ಕರೆತಂದರು.

ಗಣಪತಿ ದೇವಸ್ಥಾನದಲ್ಲಿ ಹೋಮ ಹವನಾದಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ ಬಳಿಕ ಸಾಮೂಹಿಕ ಗಣೇಶ ಮೆರವಣಿಗೆಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಟಿ.ಬಿ.ಬಡಾವಣೆ ಬಿಜಿಎಸ್ ವೃತ್ತದಿಂದ ಮಧ್ಯಾಹ್ನ 1.20ಕ್ಕೆ ಆರಂಭಗೊಂಡ ಅದ್ಧೂರಿ ಮೆರವಣಿಗೆ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಸಾಗಿ ಸಂಜೆ 4.30ರ ವೇಳೆಗೆ ಮಂಡ್ಯ ವೃತ್ತ ತಲುಪಿತು. ಮಂಡ್ಯ ವೃತ್ತದಲ್ಲಿ ತಿರುವು ಪಡೆದು ಕೆಎಸ್‌ಟಿ ರಸ್ತೆ ಮೂಲಕ ಸಂಚರಿಸಿ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ಆಸುಪಾಸಿನಲ್ಲಿರುವ ಪ್ರಮುಖ ಬೀದಿಗಳಲ್ಲಿ ರಾತ್ರಿ ವರೆಗೂ ವೈಭವದ ಮೆರವಣಿಗೆ ನಡೆಯಿತು.

ಪಟ್ಟಣದ ರಸ್ತೆಯ ಎರಡೂ ಬದಿಯಲ್ಲಿ ಮತ್ತು ಕಟ್ಟಡಗಳ ಮೇಲ್ಭಾಗದಲ್ಲಿ ಜಮಾವಣೆಗೊಂಡಿದ್ದ ಅಪಾರ ಸಂಖ್ಯೆಯ ಜನರು ಸಾಮೂಹಿಕ ಗಣೇಶ ಮೆರವಣಿಗೆ ಮತ್ತು ಜಾನಪದ ಕಲಾತಂಡಗಳ ಪ್ರದರ್ಶನದ ದೃಶ್ಯವನ್ನು ಕಣ್ತುಂಬಿಕೊಂಡು ಭಕ್ತಿಭಾವ ಸಮರ್ಪಿಸಿದರು.

ಗಣೇಶೋತ್ಸವದಲ್ಲಿ ವರ್ಣರಂಜಿತ ವಿದ್ಯುತ್ ದೀಪಸಹಿತ ಧ್ವನಿವರ್ಧಕದಲ್ಲಿ ಹೊರಹೊಮ್ಮುತ್ತಿದ್ದ ಹಾಡುಗಳಿಗೆ ವಿವಿಧ ಶಾಲಾ ಕಾಲೇಜುಗಳ ಹೆಣ್ಣುಮಕ್ಕಳೂ ಸೇರಿದಂತೆ ನೂರಾರು ಮಂದಿ ಹಿಂದೂಪರ ಕಾರ್ಯಕರ್ತರು ದಣಿವರಿಯದೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕೆ.ಮಲ್ಲೇನಹಳ್ಳಿ ಗ್ರಾಮದಿಂದ ಆಗಮಿಸಿದ್ದ ಮಹಿಳೆಯರು ತಮಟೆ ಸದ್ದಿಗೆ ಹೆಜ್ಜೆಹಾಕಿ ಎಲ್ಲರ ಗಮನ ಸೆಳೆದರು.

ಮೆರವಣಿಗೆ ಹೆದ್ದಾರಿಯಲ್ಲಿ ಸಾಗಿಬಂದು ತಿರುವು ಪಡೆದ ಮಂಡ್ಯ ವೃತ್ತದಲ್ಲಿ ಹತ್ತಾರು ಬ್ಯಾರಿಕೆಡ್‌ಗಳನ್ನು ಹಾಕಿ ವಿಶೇಷ ಪೊಲೀಸ್ ಭದ್ರತೆ ಒದಗಿಸುವ ಜೊತೆಗೆ, ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದರು.

ಮೆರವಣಿಗೆಯ ಎಲ್ಲಾ ದೃಶ್ಯಾವಳಿ ಮತ್ತು ನೆರೆದಿದ್ದ ಅಪಾರ ಪ್ರಮಾಣದ ಜನರ ಚಟುವಟಿಕೆ, ಚಲನವಲಗಳನ್ನು ಸೆರೆಹಿಡಿಯಲು ಮೆರವಣಿಗೆ ಸಾಗುವ ಮಾರ್ಗ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಇದರ ಜೊತೆಗೆ ಎರಡು ಡ್ರೋನ್ ಕ್ಯಾಮೆರಾಗಳನ್ನೂ ಕೂಡ ಬಳಸಲಾಗಿತ್ತು.

ಕಳೆದ ವರ್ಷ ಪಟ್ಟಣದಲ್ಲಿ ಗಣೇಶಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಘಟನೆಯಿಂದಾಗಿ ನಾಗಮಂಗಲ ಸೂಕ್ಷ್ಮ ಪ್ರದೇಶವೆಂದು ಕಂಡುಬಂದಿರುವ ಹಿನ್ನಲೆಯಲ್ಲಿ ಸಾಮೂಹಿಕ ಗಣೇಶೋತ್ಸವದ ವೇಳೆ ಯಾವುದೇ ರೀತಿಯ ಸಣ್ಣ ಪುಟ್ಟ ಅಹಿತಕರ ಘಟನೆಗಳೂ ಜರುಗಬಾರದೆಂಬ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

ಸಾಮೂಹಿಕ ಗಣೇಶ ಮೆರವಣಿಗೆ ಸಂಚರಿಸುವ ಎಲ್ಲಾ ರಸ್ತೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಗುರುವಾರ ಬೆಳಗ್ಗೆ ಶ್ವಾನದಳದಿಂದ ತಪಾಸಣೆ ನಡೆಸಲಾಯಿತು. ಮೈಸೂರು ರಸ್ತೆ ಮತ್ತು ಮಂಡ್ಯ ರಸ್ತೆಯ ಮುಸ್ಲೀಂ ಬ್ಲಾಕ್‌ಗಳು ಸೇರಿದಂತೆ ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ಆಂಬುಲೆನ್ಸ್, ಅಗ್ನಿಶಾಮಕ ದಳ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್‌ಪಿಗಳಾದ ತಿಮ್ಮಯ್ಯ ಮತ್ತು ಗಂಗಾಧರಸ್ವಾಮಿ ಅವರು ಮೆರವಣಿಗೆ ಜೊತೆಯಲ್ಲಿಯೇ ಕಾಲ್ನಡಿಗೆಯಲ್ಲಿ ಸಾಗಿ ಎಲ್ಲಾ ಚಲನ ವಲನಗಳ ಬಗ್ಗೆ ವಿಶೇಷ ನಿಗಾವಹಿಸಿದರೆ, ಮಫ್ತಿಯಲ್ಲಿದ್ದ ಕೆಲ ಪೊಲೀಸರು ಮೆರವಣಿಗೆ ಗುಂಪಿನಲ್ಲಿದ್ದುಕೊಂಡು ಸೂಕ್ಷ್ಮತೆಗಳನ್ನು ಗಮನಹರಿಸಿದರು.

ಮಸೀದಿಗೆ ಪೊಲೀಸ್ ಭದ್ರತೆ:

ಕಳೆದ ಬಾರಿ ಗಣೇಶಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಅಹಿತಕರ ಘಟನೆ ಜರುಗಿದ ಮೈಸೂರು ರಸ್ತೆಯ ಮಸೀದಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಿ ಎರಡು ತುಕಡಿಗಳನ್ನು ನಿಯೋಜಿಸಲಾಗಿತ್ತು. ಪಟ್ಟಣದ ಕೆಎಸ್‌ಟಿ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಸ್ವಪ್ರೇರಣೆಯಿಂದ ಮುಚ್ಚಿದ್ದ ವರ್ತಕರು ಸಾಮೂಹಿಕ ಗಣೇಶೋತ್ಸವದಲ್ಲಿ ಪಾಲ್ಗೊಂಡಿದ್ದರಿಂದ ಪಟ್ಟಣದಲ್ಲಿ ಸಂಜೆವರೆಗೂ ಸ್ವಘೋಷಿತ್ ಬಂದ್ ಸ್ಥಿತಿ ನಿರ್ಮಾಣವಾಗಿತ್ತು.

ಪೊಲೀಸ್ ಭದ್ರತೆ:

ಗಣೇಶೋತ್ಸವದ ಬಂದೋಬಸ್ತ್‌ಗಾಗಿ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇಬ್ಬರು ಎಎಸ್‌ಪಿ, 6 ಮಂದಿ ಡಿವೈಎಸ್‌ಪಿ, 25 ಮಂದಿ ಸಿಪಿಐ, 50 ಮಂದಿ ಪಿಎಸ್‌ಐ, 350ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 100 ಮಂದಿ ಗೃಹರಕ್ಷಕದಳದ ಸಿಬ್ಬಂದಿ, 3 ಕೆಎಸ್‌ಆರ್‌ಪಿ ತುಕಡಿ, 8 ಡಿಆರ್ ವಾಹನ, 2ಕ್ಯೂಆರ್‌ಟಿ ತಂಡಗಳ ಭದ್ರತೆ ಒದಗಿಸಲಾಗಿತ್ತು.

ಮದ್ಯದಂಗಡಿಗಳು ಬಂದ್:

ಮೆರವಣಿಗೆ ಮದ್ಯಪಾನ ಮಾಡಿ ಅಹಿತಕರ ಘಟನೆ ಉಂಟುಮಾಡಬಹುದೆಂಬ ಕಾರಣಕ್ಕೆ ಪಟ್ಟಣ ಸೇರಿದಂತೆ ಸುತ್ತಮುತ್ತಲ 10 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ಬಗೆಯ ಮದ್ಯದಂಗಡಿಗಳನ್ನು ಮುಚ್ಚಿಸಲಾಗಿತ್ತು. ಪಟ್ಟಣ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಹಾದು ಹೋಗಿರುವುದರಿಂದ ಸಾಮೂಹಿಕ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಮೈಸೂರು ಮತ್ತು ಬೆಳ್ಳೂರು ಕಡೆಯ ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿಯುಂಟಾಗಿತ್ತು. ಇರುವ ಮುಖ್ಯ ರಸ್ತೆಯನ್ನೇ ಬಳಸಿಕೊಂಡು ಸಂದರ್ಭಕ್ಕೆ ತಕ್ಕಂತೆ ಮಾರ್ಗ ಬದಲಾವಣೆ ಮಾಡಿ ಹೆದ್ದಾರಿ ವಾಹನ ಸಂಚಾರಕ್ಕೆ ಪೊಲೀಸರು ಅನುಕೂಲ ಮಾಡಿಕೊಟ್ಟರು.

ಸಾಮೂಹಿಕ ಗಣೇಶ ಮೆರವಣಿಗೆ ಮತ್ತು ವಿಸರ್ಜನೆ ಕಾರ್ಯಕ್ರಮದ ವೇಳೆ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಯಾವುದೇ ಧಾರ್ಮಿಕ ಭಾವನೆಗಳಿಗೆ ಕಿಂಚಿತ್ತೂ ಧಕ್ಕೆ ಉಂಟಾಗದಂತೆ ಅಭೂತಪೂರ್ವ ಯಶಸ್ವಿ ಗಣೇಶೋತ್ಸವಕ್ಕೆ ಅಗತ್ಯ ಕ್ರಮಹಿಸಿ ಕರ್ತವ್ಯ ನಿರ್ವಹಿಸಿದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪಟ್ಟಣ ಮತ್ತು ತಾಲೂಕಿನ ಜನರು ಶ್ಲಾಘಿಸಿ ಅಭಿನಂದಿಸಿದ್ದಾರೆ.

ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್‌ಪಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್‌ಪಿ ಬಿ.ಚಲುವರಾಜು, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಜಿ.ಆದರ್ಶ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಸಿಪಿಐ ನಿರಂಜನ್, ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಸೇರಿದಂತೆ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಇದ್ದರು.