ಸಾರಾಂಶ
ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ 2ನೇ ದಿನದ ಗಾಯನವನ್ನು ವಿದ್ವಾನ್ ಎಂ. ಎಸ್. ದೀಪಕ್ ಅವರು ತಮ್ಮ ಗುರುಗಳಾದ ವಿದ್ವಾನ್ ಆರ್. ಕೆ. ಪದ್ಮನಾಭ ಅವರ ರಚನೆಯಾದ ಬೃಂದಾವನ ಸಾರಂಗ ರಾಗದ ವರ್ಣದಿಂದ ಕಚೇರಿ ಪ್ರಾರಂಭಿಸಿ ಮುಂದೆ ಮೈಸೂರು ವಾಸುದೇವಾಚಾರ್ಯರ ಗಂಭೀರನಾಟ ರಾಗದ ಗಿರಿಜಾ ರಮಣ ಕೃತಿಯನ್ನು ಮನೋಲ್ಲಾಸಭರಿತವಾದ ಕಲ್ಪನಾ ಸ್ವರಗಳ ಗುಚ್ಚಗಳಿಂದ ಅಲಂಕರಿಸಿ ಪ್ರಸ್ತುತಪಡಿಸಿದರು.
ಕನ್ನಡಪ್ರಭ ವಾರ್ತೆ, ರಾಮನಾಥಪುರ
ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ 2ನೇ ದಿನದ ಗಾಯನವನ್ನು ವಿದ್ವಾನ್ ಎಂ. ಎಸ್. ದೀಪಕ್ ಅವರು ತಮ್ಮ ಗುರುಗಳಾದ ವಿದ್ವಾನ್ ಆರ್. ಕೆ. ಪದ್ಮನಾಭ ಅವರ ರಚನೆಯಾದ ಬೃಂದಾವನ ಸಾರಂಗ ರಾಗದ ವರ್ಣದಿಂದ ಕಚೇರಿ ಪ್ರಾರಂಭಿಸಿ ಮುಂದೆ ಮೈಸೂರು ವಾಸುದೇವಾಚಾರ್ಯರ ಗಂಭೀರನಾಟ ರಾಗದ ಗಿರಿಜಾ ರಮಣ ಕೃತಿಯನ್ನು ಮನೋಲ್ಲಾಸಭರಿತವಾದ ಕಲ್ಪನಾ ಸ್ವರಗಳ ಗುಚ್ಚಗಳಿಂದ ಅಲಂಕರಿಸಿ ಪ್ರಸ್ತುತಪಡಿಸಿದರು.ನಂತರ ಮುತ್ತಯ್ಯ ಭಾಗವತರ ಗೌಡಮಲ್ಹಾರ್ ರಾಗದ ಸಾರಸಮುಖಿ ಕೃತಿಯಲ್ಲಿ ಮಾತೆ ಚಾಮುಂಡೇಶ್ವರಿಗೆ ನಮನ ಸಲ್ಲಿಸಿ, ಹೃದಯಸ್ಪರ್ಶಿಯಾಗಿ ನಾಯಕಿ ರಾಗದ ವಿಸ್ತಾರವಾದ ಆಲಾಪನೆ ಮಾಡಿ ತ್ಯಾಗರಾಜರ ನೀ ಭಜನ ಕೃತಿಯನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ತ್ಯಾಗರಾಜರ ಮಾಳವಿ ರಾಗದಲ್ಲಿ ನೆನರುಂಚಿನಾನು ಕೃತಿ ಹಾಗು ಧೃತ ಕಾಲದಲ್ಲಿ ಹಾಡಿದ ಚಿಟ್ಟೆ ಸ್ವರವಂತೂ ರಸಿಕರನ್ನು ಕುಪ್ಪಳಿಸುವಂತೆ ಮಾಡಿತು. ಮಯೂರಂ ವಿಶ್ವನಾಥ ಶಾಸ್ತ್ರೀಗಳ ದೇಶ ಭಕ್ತಿ ಗೀತೆಯಾದ ಸಮರಸ ಭಾವನ ಎಂಬ ಕೀರ್ತನೆಯನ್ನು ಆಪರೇಶನ್ ಸಿಂಧೂರಕ್ಕೆ ಸಮರ್ಪಿಸಿದರು.ಕಛೇರಿಯ ಮೇರು ಸ್ಥಾನದಲ್ಲಿ ಕಂಗೊಳಿಸಿದ ರಾಗ-ತಾನ-ಪಲ್ಲವಿ ಅಂತೂ ಬಹಳ ಅಮೋಘವಾಗಿ ಮೂಡಿಬಂದಿತು. ನಠಭೈರವಿಯ ಸುದೀರ್ಘ ರಾಗಾಲಾಪನೆಯ ನಂತರ ವಿಶೇಷ ತಾನ ಪ್ರಭೇದಗಳಾದ ನಾಭಿ, ಗಜ, ಚಕ್ರ, ಮಯೂರ, ಅಶ್ವ, ಘಂಟಾ ಮುಂತಾದವುಗಳನ್ನು ಪ್ರಸ್ತುತಪಡಿಸಿದ ಪರಿ ಜನರ ಆಕರ್ಷಣೆಗೆ ಕಾರಣೀಭೂತವಾಯಿತು.ಮುಂದೆ ವಿನೂತನವಾಗಿ ದೀಪಕ್ ಅವರೇ ಕಂಡುಹಿಡಿದ ಹೊಸ ತಾಳಕ್ಕೆ ''''''''ಪದ್ಮನಾಭ ತಾಳ'''''''' (1 ಲಘು, 1 ಅನಧೃತ, 1 ಧೃತ, 1 ಲಘು, 1 ಗುರು) ಎಂದು ಅವರ ಗುರುಗಳ ಹೆಸರಲ್ಲಿ ನಾಮಕರಣ ಮಾಡಿ ಅದರಲ್ಲಿ "ವಾದಿರಾಜ ಕಿಂಕರ ಪದ್ಮನಾಭ ಗುರೂನ್ ವಂದೇ " ಎಂಬ ಪಲ್ಲವಿಯನ್ನು ಸವಿಸ್ತಾರವಾದ ನೆರವಲ್ ಹಾಗೂ ರಾಗಮಾಲಿಕಾ ಕಲ್ಪನಾಸ್ವರಗಳೊಂದಿಗೆ ವಿದ್ವತ್ ಪೂರ್ಣವಾಗಿ ಪ್ರಸ್ತುತಪಡಿಸಿ ತಮ್ಮ ಹುಟ್ಟುಹಬ್ಬದಂದೇ ಗುರುಗಳ ಪಾದಕ್ಕೆ ಸಮರ್ಪಣೆ ಮಾಡಿ ಕಲಾರಸಿಕರ ಹೃನ್ಮನಗಳನ್ನು ಗೆದ್ದರು. ಈ ಸಂದರ್ಭದಲ್ಲಿ ವಿದ್ವಾನ್ ಅರ್.ಕೆ. ಪದ್ಮನಾಭ ಮುಂತಾದವರು ಉಪಸ್ಥಿತರಿದ್ದರು.