ವಿದ್ಯಾರಣ್ಯ ಶಾಲೆಯಲ್ಲಿ ಅದ್ಧೂರಿ ಶಾಲಾ ಪ್ರಾರಂಭೋತ್ಸವ

| Published : Jun 01 2024, 12:45 AM IST

ಸಾರಾಂಶ

ಬೀದರ್ ನಗರದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ನಿಮಿತ್ತ ಮಕ್ಕಳನ್ನು ಪುಷ್ಪದಿಂದ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ನಗರದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ಶುಕ್ರವಾರ ಮುಂಜಾನೆ 8 ಗಂಟೆಗೆ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.

ಆರಂಭದಲ್ಲಿ ಶಾಲೆ ಮುಖ್ಯ ದ್ವಾರದಲ್ಲಿ ಎಲ್ಲ ಮಕ್ಕಳಿಗೆ ಪುಷ್ಪವರ್ಷ ಮಾಡುವುದರ ಮೂಲಕ ಶಾಲೆ ಒಳಗೆ ಸ್ವಾಗತ ಕೋರಲಾಯಿತು. ಶಾಲಾ ಆವರಣ ಪುಷ್ಪ, ತಳಿರು-ತೋರಣಗಳಿಂದ ರಾರಾಜಿಸುತ್ತಿತ್ತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುವುದರ ಮೂಲಕ ಪ್ರಾರಂಭಿಸಲಾಯಿತು.

ಈ ವೇಳೆ ಸಂಸ್ಥೆ ಅಧ್ಯಕ್ಷ ಪ್ರೊ.ಎಸ್.ಬಿ.ಸಜ್ಜನಶೆಟ್ಟಿ ಮಕ್ಕಳಿಗೆ ಪ್ರೇರಣಾದಾಯಕ ನುಡಿ ಹೇಳುತ್ತ ಶಿಕ್ಷಣವು ಜೀವನದ ಬುನಾದಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಆದರ್ಶ ಕಲಿಯಲು ಹಾಗೂ ಆದರ್ಶಮಯವಾದ ಜೀವನ ನಡೆಸಲು ಶಾಲೆಗೆ ಹೋಗಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಶಿಕ್ಷಣ ಜ್ಞಾನಕ್ಕಾಗಿ ಪಡೆಯಬೇಕೆ ವಿನಃ ಪರೀಕ್ಷೆಗಾಗಿ ಅಲ್ಲ. ನಮ್ಮ ಆದರ್ಶಗಳು ಲವ, ಕುಶ, ಧೃವ, ಪ್ರಲ್ಹಾದಂತಾಗಿರಬೇಕು. ವಿದ್ಯಾರ್ಥಿಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಯುವಂತರಾಗಬೇಕು. ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಸಂಸ್ಕಾರ ದೇಶದ ಬೆಳವಣಿಗೆಯಲ್ಲಿ ಬಳಸಬೇಕು. ತಮ್ಮಲ್ಲಾಗುವಂತಹ ಬದಲಾವಣೆಗಳೇ ಮೌಲ್ಯಾಂಕನವಾಗಬೇಕು ಎಂದು ತಿಳಿಸಿದರು.

ಈ ವೇಳೆ ಸಂಸ್ಥೆ ಆಡಳಿತಾಧಿಕಾರಿ ಬಂಡೆಪ್ಪಾ ಎಕ್ಲಾರೆ ಹಾಗೂ ವಿದ್ಯಾರಣ್ಯ ಪ್ರೌಢ ಶಾಲೆಯ ಪ್ರಭಾರಿ ಮುಖ್ಯಗುರು ಬಾಲಾಜಿ ರಾಠೋಡ್, ಉಜ್ವಲಾ ಶಿರಮಾ, ದಿಲೀಪ ದೇವಣಿ ಉಪಸ್ಥಿತರಿದ್ದರು.