ಸಾರಾಂಶ
ಮೂರು ದಿನಗಳ ಐತಿಹಾಸಿಕ ಕಿತ್ತೂರು ಉತ್ಸವ ಹಾಗೂ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮನ 200ನೇ ವಿಜಯೋತ್ಸವಕ್ಕೆ ಶುಕ್ರವಾರ ಅದ್ಧೂರಿ ತೆರೆಬಿದ್ದಿದೆ.
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಮೂರು ದಿನಗಳ ಐತಿಹಾಸಿಕ ಕಿತ್ತೂರು ಉತ್ಸವ ಹಾಗೂ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮನ 200ನೇ ವಿಜಯೋತ್ಸವಕ್ಕೆ ಶುಕ್ರವಾರ ಅದ್ಧೂರಿ ತೆರೆಬಿದ್ದಿದೆ.ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಕಿತ್ತೂರಿನ ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಮಹಿಳಾ ಗೋಷ್ಠಿ, ರಸಮಂಜರಿ ಕಾರ್ಯಕ್ರಮ, ಕುಸ್ತಿ ಪಂದ್ಯ, ಜಲಕ್ರೀಡೆ ಮತ್ತಿತರ ಕಾರ್ಯಕ್ರಮಗಳು ಕಿತ್ತೂರು ಉತ್ಸವಕ್ಕೆ ಮೆರಗು ನೀಡಿದವು.
ಚನ್ನಮ್ಮನ ವಿಜಯೋತ್ಸವದ 200ನೇ ವರ್ಷದ ಹಿನ್ನೆಲೆಯಲ್ಲಿ ಈ ಬಾರಿ ಕಿತ್ತೂರು ಉತ್ಸವನ್ನು ಅರ್ಥಪೂರ್ಣ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು. ಆದರೆ, ಕೆಲವೊಂದು ಅದ್ವಾನ, ಗೊಂದಲಗಳಿಗೂ ಉತ್ಸವ ಸಾಕ್ಷಿಯಾಯಿತು. ಮೊದಲ ದಿನ ಬೌನ್ಸರ್‌ಗಳ ಹಾವಳಿ, ಎರಡನೇ ದಿನ ಪೊಲೀಸ್ ಅಧಿಕಾರಿಗಳ ನಡೆ ಖಂಡಿಸಿ, ಬೆಳಗಾವಿ ಪತ್ರಕರ್ತರು ರಸ್ತೆ ಮಾರ್ಗದಲ್ಲೇ ಕುಳಿತು ಧರಣಿ ನಡೆಸಿದ ಪ್ರಸಂಗವೂ ನಡೆಯಿತು. ಕೊನೆಗೂ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರು ಸ್ಥಳಕ್ಕೆ ಆಗಮಿಸಿ ಪತ್ರಕರ್ತರ ಮನವೊಲಿಸಿದರು. ಕೆಲವು ಅದ್ವಾನ ಹೊರತುಪಡಿಸಿದರೆ ಈ ಬಾರಿಯ ಕಿತ್ತೂರು ಉತ್ಸವ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ವೀರರಾಣಿ ಕಿತ್ತೂರು ಚನ್ನಮ್ಮನ ಇತಿಹಾಸ ಮೆಲಕು ಹಾಕಲಾಯಿತು. ಚನ್ನಮ್ಮನ ಧೈರ್ಯ, ಸಾಹಸವನ್ನು ಮುಂದಿನ ಪೀಳಿಗೆಗೆ ಸಂದೇಶ ಸಾರುವ ಕೆಲಸವೂ ನಡೆಯಿತು.ಬೌನ್ಸರ್ ಗಳ ಕಿರಿಕಿರಿ:
ಕಿತ್ತೂರು ಉತ್ಸವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೌನ್ಸರ್ ಗಳನ್ನು ನಿಯೋಜನೆ ಮಾಡಿರುವುದು ಜನರ ಕಂಗೆಣ್ಣಿಗೆ ಗುರಿಯಾಗಿತ್ತು. ಬೌನ್ಸರ್‌ಗಳ ಕಿರಿಕಿರಿ ಕಲಾವಿದರು, ಮಾಧ್ಯಮದವರು ಸೇರಿ ಎಲ್ಲರಿಗೂ ತಟ್ಟಿತು. ಬೌನ್ಸರ್ ವ್ಯವಸ್ಥೆ ರದ್ದುಗೊಳಿಸುವಂತೆ ಒಕ್ಕೊರಲಿನ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಬೌನ್ಸರ್ ಸೇವೆ ರದ್ದುಗೊಳಿಸಿತು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಅನ್ನೋತ್ಸವಕ್ಕೆ ಜನ ಸಂತಸ:
ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಜಿಲ್ಲಾಡಳಿತ ಅನ್ನೋತ್ಸವ ಆಯೋಜಿಸಿತ್ತು. ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ನಾಡಿನಾದ್ಯಂತ ವಿವಿಧ ಭಾಗಗಳಿಂದ ಸಹಸ್ರಾರು ಜನರು ಪಾಲ್ಗೊಂಡಿದ್ದರು. ಉತ್ಸವದಲ್ಲಿ ಭಾಗವಹಿಸಿದ ಅತಿಥಿಗಳು, ಗಣ್ಯರು, ಕ್ರೀಡಾಪಟುಗಳು ಸೇರಿದಂತೆ ಸಲುತ್ತಮುತ್ತಲಿನಿಂದ ಆಗಮಿಸಿದ ಸಹಸ್ರಾರು ಜನರು ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಯಿತು.ಅ.24 ರಂದು ಮಹಿಳೆಯರಿಗಾಗಿಯೇ ಉತ್ಸವ ಮೀಸಲಿಡಲಾಗಿದ್ದು ವಿಶೇಷ. ಮಹಿಳೆಯರ ಬೈಕ್ ರ್‍ಯಾಲಿ, ಅಟೋಟಗಳು, ಮುಖ್ಯ ವೇದಿಕೆಯ ಮೇಲೆ ಮಹಿಳಾ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮಹಿಳೆಯರಿಗೆ ಸಿಂಹಪಾಲು ನೀಡಿದ್ದು ಮಹಿಳೆಯರ ಪಾಲಿಗೆ ಜಾತ್ರೆಯಂತಾಗಿತ್ತು.
ಚನ್ನಮ್ಮನ ವಿಜಯೋತ್ಸವ 200ನೇ ವರ್ಷಾಚರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ, ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಮತ್ತವರ ತಂಡದಿಂದ ರಸಮಂಜರಿ ಕಾರ್ಯಕ್ರಮ, ಕಿತ್ತೂರು ಉತ್ಸವದಲ್ಲಿ ಖ್ಯಾತ ಗಾಯಕ ವಿಜಯ ಪ್ರಕಾಶ್, ಖ್ಯಾತ ಹಿನ್ನೆಲೆ ಗಾಯಕ ಅರ್ಮಾನ್ ಮಲಿಕ್ ಅವರ ಸಂಗೀತ ಸುಧೆ ಕಾರ್ಯಕ್ರಮ ಜನಮನ ಸೊರೆಗೊಂಡವು.ಮೂರು ದಿನಗಳ ಕಿತ್ತೂರು ಉತ್ಸವ ಈ ಬಾರಿ ಅದ್ಧೂರಿ, ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, ಕಿತ್ತೂರು ಉತ್ಸವ ಯಶಸ್ವಿಯಾಗಲು ಶ್ರಮಿಸಿದ ಎಲ್ಲ ಅಧಿಕಾರಿಗಳು, ಸಂಘಟಕರಿಗೆ ಧನ್ಯವಾದಗಳು.-ಬಾಬಾಸಾಹೇಬ ಪಾಟೀಲ, ಶಾಸಕವೀರರಾಣಿ ಕಿತ್ತೂರು ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಿದ ಸಾರ್ವಜನಿಕರು, ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಧನ್ಯವಾದಗಳು.
- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ