ಮಾಹೆ 32ನೇ ಘಟಿಕೋತ್ಸವಕ್ಕೆ ಅದ್ದೂರಿಯ ತೆರೆ

| Published : Nov 11 2024, 01:07 AM IST

ಸಾರಾಂಶ

ಭಾರತದ ಪ್ರಮುಖ ಸಂಶೋಧನಾ ಕೇಂದ್ರಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ 32ನೇ ಘಟಿಕೋತ್ಸವವು ಭಾನುವಾರ ಇಲ್ಲಿನ ಕೆಎಂಸಿ ಗ್ರೀನ್ಸ್‌ನಲ್ಲಿ ಅದ್ದೂರಿಯಾಗಿ ತೆರೆಕಂಡಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಭಾರತದ ಪ್ರಮುಖ ಸಂಶೋಧನಾ ಕೇಂದ್ರಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ 32ನೇ ಘಟಿಕೋತ್ಸವವು ಭಾನುವಾರ ಇಲ್ಲಿನ ಕೆಎಂಸಿ ಗ್ರೀನ್ಸ್‌ನಲ್ಲಿ ಅದ್ದೂರಿಯಾಗಿ ತೆರೆಕಂಡಿತು.ಭಾನುವಾರ ಮೂರನೇ ದಿನದ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಭಾರತ ಸರ್ಕಾರದ ಕಾರ್ಯದರ್ಶಿ, ಆರೋಗ್ಯ ಸಂಶೋಧನೆ ಇಲಾಖೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ. ರಾಜೀವ್ ಬಹ್ಲ್ ಪದವಿಗಳನ್ನು ಪ್ರದಾನ ಮಾಡಿದರು.ನಂತರ ಮಾತನಾಡಿದ ಅವರು, ನಾನು ಇಲ್ಲಿನ ವಿದ್ಯಾರ್ಥಿಗಳಿಗೆ ಮೊದಲು ತಮ್ಮನ್ನು ತಾವು ನೋಡಿಕೊಳ್ಳುವಂತೆ ಸಲಹೆ ನೀಡಲು ಬಯಸುತ್ತೇನೆ. ನಿಮ್ಮ ಬಗ್ಗೆ ಕಾಳಜಿ ನೀವೇ ವಹಿಸುವುದು ಅತ್ಯಗತ್ಯ, ಏಕೆಂದರೆ ಸ್ವಯಂ ಆರೈಕೆಯಿಲ್ಲದೆ, ನೀವು ಕಲ್ಪಿಸಿಕೊಂಡ ಸಾಧನೆಯನ್ನು ಮಾಡಲು ಅಥವಾ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಿಲ್ಲ. ನೀವು ಅನುಸರಿಸುತ್ತಿರುವ ಗುರಿಗಳು ಏನೇ ಇರಲಿ, ಅದರ ಯಶಸ್ಸು, ನೆರವೇರಿಕೆಗಳು ನಿಮ್ಮ ಬದ್ಧತೆಯಿಂದ ಪ್ರಾರಂಭವಾಗುತ್ತವೆ ಎಂದರು.ಮಾಹೆ ಸಹಕುಲಾಧಿಪತಿ ಡಾ. ಎಂ.ಎಸ್. ಬಲ್ಲಾಳ್, ಮಾಹೆಯಲ್ಲಿ, ನಾವು ಶೈಕ್ಷಣಿಕ ಪ್ರತಿಭೆಗೆ ಮಾತ್ರವಲ್ಲದೆ ಸಮಗ್ರತೆ, ನವೀನತೆ ಮತ್ತು ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳಿಗೆ ಬದ್ಧರಾಗಿದ್ದೇವೆ. ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಈ ಮೌಲ್ಯಗಳನ್ನು ಮುಂದಕ್ಕೆ ಕೊಂಡೊಯ್ಯಿರಿ ಮತ್ತು ನಿಮ್ಮ ಮಾತೃಸಂಸ್ಥೆಯನ್ನು ಹೆಮ್ಮೆಪಡುವಂತೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಶುಭಕೋರಿದರು.ಮಾಹೆ ಟ್ರಸ್ಟಿ ವಸಂತಿ ಆರ್. ಪೈ, ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್, ಸಹಉಪಕುಲಪತಿಗಳಾದ ಡಾ. ನಾರಾಯಣ ಸಭಾಹಿತ್, ಡಾ. ದಿಲೀಪ್ ಜಿ. ನಾಯಕ್, ಕುಲಸಚಿವರುಗಳಾದ ಡಾ. ಪಿ. ಗಿರಿಧರ್ ಕಿಣಿ ಮತ್ತು ಡಾ ವಿನೋದ್ ವಿ ಥಾಮಸ್ ಉಪಸ್ಥಿತರಿದ್ದರು.

ಉಪಕುಲಪತಿ ಡಾ. ಶರತ್ ಕೆ. ರಾವ್ ಸ್ವಾಗತಿಸಿದರು. ಮಾಹೆ ಸಹಾಯಕ ಪ್ರಾಧ್ಯಾಪಕಿ ಡಾ.ಅಂಕಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪಿಎಸ್‌ಪಿಎಚ್ ನಿರ್ದೇಶಕ ಡಾ ಚೆರಿಯನ್ ವರ್ಗಿಸ್ ವಂದಿಸಿದರು..................

5 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಕೊನೆಯ ದಿನದ ಘಟಿಕೋತ್ಸವಲ್ಲಿ ಎಂಐಟಿಯ ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಅರ್ನವ್ ಅಗ್ರವಾಲ್ ಬಿ., ಎಂಸಿಎಚ್‌ಪಿಯ ಬಿಎಸ್ಸಿ ಪರ್ಫ್ಯೂಷನ್ ಟೆಕ್ನಾಲಜಿಯಲ್ಲಿ ಶೆಟ್ಟಿ ತ್ರಾಶ, ಮಂಗಳೂರು ಕೆಎಂಸಿಯ ಎಂಬಿಬಿಎಸ್‌ನಲ್ಲಿ ಜಾನೆಟ್ ಕೆ. ಜಾಯ್ ಮತ್ತು ಮೃಣ್ಮಯಿ, ಮಣಿಪಾಲ ಕೆಎಂಸಿಯ ಎಂಬಿಬಿಎಸ್‌ನಲ್ಲಿ ರಾಹುಲ್ ನೆರ್ಲಿಕರ್ ಅವರಿಗೆ ಅಸಾಧಾರಣ ಸಾಧನೆಗಳಿಗಾಗಿ 2024ರಲ್ಲಿ ಪ್ರತಿಷ್ಠಿತ ಡಾ. ಟಿ.ಎಂ.ಎ. ಪೈ ಚಿನ್ನದ ಪದಕವನ್ನು ನೀಡಲಾಯಿತು.