ಭಾರತದ ಇತಿಹಾಸ ಪುಟದಲ್ಲಿ ಕೆಂಪೇಗೌಡರ ಹೆಸರು ಚಿರಸ್ಥಾಯಿ

| Published : Jun 28 2025, 12:18 AM IST

ಸಾರಾಂಶ

ಬೆಂಗಳೂರು ಕೋಟೆಯ ದಕ್ಷಿಣ ಭಾಗದ ದಿಡ್ಡಿಬಾಗಿಲ ನಿಲುವಿಗಾಗಿ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿಯು ಸ್ವತಃ ಆತ್ಮರ್ಪಾಣೆ ಮಾಡುವ ಮೂಲಕ ಬೆಂಗಳೂರು ನಗರ ನಿಮಾರ್ಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು

ಕನ್ನಡಪ್ರಭ ವಾರ್ತೆ ಮೈಸೂರುಕೆಂಪೇಗೌಡರು ಗಂಗರ ಕಾಲದಿಂದಲೂ ಕನ್ನಡ ನಾಡಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ವಿಜಯನಗರ ಸಾಮಾಂತರಾಗಿ ಯಲಹಂಕ ನಾಡಿನ ಚುಕ್ಕಾಣಿ ಹಿಡಿದು ಮಾಡಿದಂತಹ ಸಾಧನೆ ಅವರು ನೀಡಿದಂತಹ ಕೊಡುಗೆ ಅಪಾರವಾದದ್ದು, ಕೆಂಪೇಗೌಡರು ಬೆಂಗಳೂರನ್ನು ನಿರ್ಮಾಣ ಮಾಡಿರುವುದರಿಂದ ಇಂದು ವಿಶ್ವ ವಿಖ್ಯಾತಿಯಾಗಿ ಬೆಳೆಯುವುದರ ಮೂಲಕ ಭಾರತದ ಇತಿಹಾಸ ಪುಟದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಕೆಂಪೇಗೌಡ ಜಯಂತೋತ್ಸವ ಸಮಿತಿ ಸಹಯೋಗದಲ್ಲಿ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.ಬೆಂಗಳೂರು ಕೋಟೆಯ ದಕ್ಷಿಣ ಭಾಗದ ದಿಡ್ಡಿಬಾಗಿಲ ನಿಲುವಿಗಾಗಿ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿಯು ಸ್ವತಃ ಆತ್ಮರ್ಪಾಣೆ ಮಾಡುವ ಮೂಲಕ ಬೆಂಗಳೂರು ನಗರ ನಿಮಾರ್ಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು ಎಂದು ತಿಳಿಸಿದರು.ನಗರದ ಬೆಳವಣಿಗೆ ದೂರದೃಷ್ಟಿಯಿಂದ ಬೆಳ್ಳಿ ಮಂಟಪ (ವಾಣಿಜ್ಯ ಮಂಟಪ), ಇಲ್ಲಂತೆ ಮಂಟಪ (ಆರೋಗ್ಯ ಮಂಟಪ), ನೆಡುಂಕಲ್ ಮಂಟಪ (ದೈವ ಮಂಟಪ), ಚೌಕಿಸ್ಥಾನ ಮಂಟಪ (ಶಿಕ್ಷಾ ಮಂಟಪ) ಹಾಗೂ ಪಾವ ಮಂಟಪ (ನ್ಯಾಯ ಮಂಟಪ)ಗಳನ್ನು ಆಯಾ ಕ್ಷೇತ್ರಕ್ಕನುಗುಣವಾಗಿ ಪಂಚ ಗೋಪುರಗಳನ್ನು ನಿರ್ಮಿಸಿದ್ದಾಗಿ ಹೇಳಿದರು.ಕೇಂಪೇಗೌಡರು ಬೆಂಗಳೂರು ನಗರ ನಿರ್ಮಾಣ ನಂತರ ವಾಸಿಸಲು ಬರುವ ಜನರಿಗೆ ಕುಡಿಯಲು ನೀರಿಗಾಗಿ ಕೆಂಪಾಬುದಿಕೆರೆ, ಗಿಡ್ಡೆ ಗೌಡರ ಕೆರೆ, ಕಾರಂಜಿ ಕೆರೆ, ಜಕ್ಕರಾಯನಕೆರೆ, ಕೆಂಪಾಪುರ ಅಗ್ರಹಾರದ ಕೆರೆ, ಮಾವಳ್ಳಿ ಸಿದ್ದಾಪುರ ಕೆರೆ ಹೀಗೆ ಇನ್ನು ಅನೇಕ ಕೆರೆಗಳನ್ನು ಸ್ಥಾಪಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾಗಿ ಅವರು ತಿಳಿಸಿದರು.ನಗರದ ಪ್ರಸಿದ್ದ ಶ್ರೀ ಗವಿ ಗಂಗಾಧರೇಶ್ವರ ಗುಡಿ, ಶ್ರೀ ಬಸವೇಶ್ವರ ಗುಡಿ, ಶ್ರೀ ದೊಡ್ಡ ವಿಘ್ನೇಶ್ವರ ಗುಡಿ, ಶ್ರೀ ಹನುಮಂತ ದೇವರ ಗುಡಿ, ಚೆನ್ನಿಗರಾಯ ಸ್ವಾಮಿ ಗುಡಿಗಳನ್ನು ನಿರ್ಮಿಸಿ ಜನರಲ್ಲಿ ದೈವ ಭಾವನೆ ಮೂಡಿಸಿ ಅನೇಕ ದೇವಾಲಯಗಳನ್ನು ನಿರ್ಮಿಸಿರುವುದಾಗಿ ಹೇಳಿದರು.ನಗರದ ಮುಂದಿನ ಬೆಳವಣಿಗೆಯ ದೃಷ್ಟಿಯಲ್ಲಿ ಆಯಾ ಕುಲಕಸಬು ಕಲಿತ್ತಿದ್ದ ಜನರಿಗೆ ವ್ಯಾಪರ ಮಾಡಲು ಅನುಕೂಲವಾಗುವಂತೆ ಬಿನ್ನಿಪೇಟೆ, ಚಿಕ್ಕಪೇಟೆ, ಬಳೆಪೇಟೆ, ಅಕ್ಕಿಪೇಟೆ, ಮಾಮೂಲ್ ಪೇಟೆ, ಗಾಣಿಗರ ಪೇಟೆ, ನಗರ್ತಪೇಟೆ, ಕಾಟನ್ ಪೇಟೆ, ಸುಲ್ತಾನ್ ಪೇಟೆ, ತಿಗಳರಪೇಟೆ, ಕುಂಬಾರ ಪೇಟೆ, ಗೊಲ್ಲರಪೇಟೆ ಹೀಗೆ ಪೇಟೆಗಳನ್ನು ನಿರ್ಮಿಸಿಕೊಟ್ಟು ಜೀವನ ಮಾಡಲು ದಾರಿ ಮಾಡಿಕೊಡುವುದರ ಮೂಲಕ ವ್ಯಾಪರ ಮಾಡಲು ಪೇಟೆಗಳನ್ನು ನಿರ್ಮಿಸಿ ಕೊಟ್ಟಿದ್ದಾಗಿ ಅವರು ತಿಳಿಸಿದರು.ಕೆಂಪೇಗೌಡರ ವಂಶಸ್ಥರು ಗ್ರಾಮದ ಉಪದ್ರವ ನಿವಾರಣೆಗಾಗಿ ದ್ವಾದಶ: ಬ್ರಾಹ್ಮಣರಿಗೆ ಭೂದಾನ, ಕನ್ಯಾ ಸಂಕ್ರಾಂತಿ ಪುಣ್ಯಕಾಲದಲ್ಲಿ 15 ಜನರಿಗೆ ಬ್ರಾಹ್ಮಣರಿಗೆ ಭೂದಾನ, ತಂದೆ-ತಾಯಿಯ ಒಳತಿಗಾಗಿ ಬ್ರಾಹ್ಮಣರಿಗೆ ಹೊಲ, ಗದ್ದೆ ಮತ್ತು ಮನೆಗಳ ದಾನ ಹೀಗೆ ಇನ್ನು ಹಲವಾರು ಬ್ರಾಹ್ಮಣರಿಗೆ ದಾನ ಮಾಡುವ ಮೂಲಕ ಕೊಡುಗೈ ದಾನಿಗಳಾಗಿದ್ದಾಗಿ ಅವರು ಹೇಳಿದರು.ಲಿಂಗಾಯಿತ ಮಠಮಾನ್ಯಗಳಿಗೆ ದಾನ-ಧರ್ಮಂಗೈದು ಬಿಸ್ಸನಹಳ್ಳಿಯ ವೀರಪ್ಪ ದೇವರ ಮಠಕ್ಕೆ ಹೊಲದ ದಾನ, ರಾಮಗಿರಿ ಬೆಟ್ಟದ ಮೇಲೆ ಶೈವ ಮಠದ ಸ್ಥಾಪನೆ, ಡಣಾಯಕಪುರದ ಕೊಮರ ದೇವರ ಮಠಕ್ಕೆ ಗ್ರಾಮದಾನ, ಲಿಂಗಾಯಿತರ 66 ವಿರಕ್ತ ಮಠಗಳನ್ನು ಸ್ಥಾಪಿಸಿದ ಇಮ್ಮಡಿ ಕೆಂಪೇಗೌಡರು ಲಿಂಗಾಯತ ಮಠಗಳಿಗೂ ದಾನ ಮಾಡಿ ಬೆಳೆಯಲು ಸಹಕರಿಸಿದ್ದಾಗಿ ಅವರು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಬೆಂಗಳೂರನ್ನು ನಿರ್ಮಾಣ ಮಾಡಿದವರು ಕೆಂಪೇಗೌಡರು. ಇವರಿಗೆ ನಾಡಪ್ರಭು ಎಂದು ಅಂಕಿತ ನಾಮದಿಂದ ಕರೆಯಲಾಗುತ್ತದೆ. 15-16 ನೇ ಶತಮಾನದಲ್ಲಿ ಸುಸಜ್ಜಿತ ಬೆಂಗಳೂರು ನಗರ ನಿರ್ಮಾಣ ಮಾಡುವುದರ ಮೂಲಕ ಎಷ್ಟೋ ಜನರ ಜೀವನವನ್ನು ಕಟ್ಟಿಕೊಟ್ಟಿದ್ದಾಗಿ ಅವರು ಹೇಳಿದರು.ಕೆಂಪೇಗೌಡರು ನಿರ್ಮಾಣ ಮಾಡಿದಂತಹ ಎಲ್ಲಾ ಪೇಟೆಗಳು ಇಂದಿಗೂ ಕೂಡ ಜೀವಂತವಾಗಿದ್ದು ಇವರು ಮಾಡಿರುವಂತಹ ಸಾಧನೆ ಕರ್ನಾಟಕ ರಾಜ್ಯಕ್ಕೆ ಕೊಟ್ಟಿರುವಂತಹ ಕೊಡುಗೆ ಅಪಾರವಾದದ್ದು ಎಂದರು.ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಬೆಂಗಳೂರನ್ನು ಇಂದು ಸಿಲಿಕಾನ್ ಸಿಟಿ ಎಂದು ಕರೆಯಲಾಗುತ್ತಿದೆ. ಇದು ಕರ್ನಾಟಕದ ಅತ್ಯಂತ ಸುಂದರವಾದ ನಗರ. ಜೊತೆಗೆ ಶೇ. 60ರಷ್ಟು ಮಾಹಿತಿಯನ್ನು ಒಳಗೊಳ್ಳುವುದರ ಮೂಲಕ ಎಲ್ಲವನ್ನೂ ನಿಭಾಯಿಸುವಂತಹ ಶಕ್ತಿಯನ್ನು ಬೆಂಗಳೂರು ನಗರ ಒಳಗೊಂಡಿದೆ ಎಂದು ಹೇಳಿದರು.ವಿಶ್ವದ ಮೂಲೆ ಮೂಲೆಯ ಎಲ್ಲ ಜನರನ್ನು ಒಳಗೊಂಡು ಜೀವನ ಮಾಡುವಂತಹ ಒಂದು ವ್ಯವಸ್ಥೆಯನ್ನು ಕೆಂಪೇಗೌಡರು ಕಲ್ಪಿಸಿ ಕೊಟ್ಟಿದ್ದಾರೆ. ಎಲ್ಲಾ ವರ್ಗದ ಜನರು ವಾಸ ಮಾಡುವಂತಹ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಎಲ್ಲರೂ ನಮ್ಮವರೇ ಎಂಬ ಭಾವನೆಯನ್ನು ಉಳ್ಳವರಾಗಿದ್ದವರು ಕೆಂಪೇಗೌಡರು. ಇಂತಹ ಮಾಹಾನ್ ವ್ಯಕ್ತಿಗಳ ಸದ್ಗುಣಗಳ ಬಗ್ಗೆ, ಅವರು ನಡೆದು ಬಂದ ಹಾದಿಯ ಬಗ್ಗೆ ಇಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಿ ನಮ್ಮ ನಾಡಿನ ಒಳ್ಳೆಯ ವ್ಯಕ್ತಿ ಆಗುವಂತೆ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಅವರು ತಿಳಿಸಿದರು.ಸುಯೋಗ ಆಸ್ಪತ್ರೆಯಸಂಸ್ಥಾಪಕ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ಯಲಹಂಕದ ಪ್ರಸಿದ್ಧ ಪ್ರಭು, ಎಲ್ಲರಿಗೂ ಮುಕುಟ ಪ್ರಿಯವಾದಂತಹ ದೊರೆ ನಾಡಪ್ರಭು ಕೆಂಪೇಗೌಡ ಅವರು ಎಂದು ಹೇಳಿದರು.ಸುಮಾರು 46 ವರ್ಷಗಳ ಕಾಲ ನಾಡನ್ನು ಆಳಿದ ಕೀರ್ತಿ ನಾಡಪ್ರಭು ಅವರದು, ಇವರನ್ನು ಒಂದನೇ ಕೆಂಪೇಗೌಡ ಎಂದು ಸಹ ಕರೆಯಲಾಗುತ್ತದೆ. ಬೆಂಗಳೂರಿನ ನಿರ್ಮಾಣ ಮಾಡುವಲ್ಲಿ ಕೆಂಪೇಗೌಡರ ಪಾತ್ರ ಬಹಳ ಪ್ರಮುಖವಾದದ್ದು, ಸಾಮಾನ್ಯರಲ್ಲಿ ಸಾಮಾನ್ಯವಾಗಿ ಜೀವಿಸಿ ಸರ್ವಜ್ಞಾನ ಪಾರಂಗತರಾಗಿ ಬೆಳೆದವರು ಕೆಂಪೇಗೌಡರು ಎಂದು ತಿಳಿಸಿದರು. ಕೆಂಪೇಗೌಡ ಜಯಂತಿಯ ಪ್ರಯುಕ್ತವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ, ಶಾಸಕ ಟಿ.ಎಸ್. ಶ್ರೀವತ್ಸ, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಕೆಂಪೇಗೌಡ ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಗೌಡ ಮೊದಲಾದವರು ಇದ್ದರು. ಅದ್ಧೂರಿ ಮೆರವಣಿಗೆನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಕೆಂಪೇಗೌಡರ ಜಯಂತಿ ಅಂಗವಾಗಿ ಅದ್ಧೂರಿ ಮೆರವಣಿಗೆ ನಡೆಯಿತು.ಟಿ. ನರಸೀಪುರ ರಸ್ತೆಯ ಸಿದ್ಧಾರ್ಥ ಬಡಾವಣೆಯಲ್ಲಿನ ಕೆಂಪೇಗೌಡರ ಬೃಹತ್ಪ್ರತಿಮೆಗೆ ಶ್ರೀ ಸೋಮನಾಥ ಸ್ವಾಮೀಜಿ, ಶಾಸಕರಾದ ಜಿ.ಟಿ. ದೇವೇಗೌಡ, ಕೆ. ಹರೀಶ್ಗೌಡ, ಟಿ.ಎನ್. ಶ್ರೀವತ್ಸ, ಸಿ.ಎನ್. ಮಂಜೇಗೌಡ, ಮಾಜಿ ಸಂಸದ ಪ್ರತಾಪ ಸಿಂಹ ಮೊದಲಾದವರು ಮಾಲಾರ್ಪಣೆ ನೆರವೇರಿಸಲಾಯಿತು.ಬಳಿಕ ಅಲ್ಲಿಂದ ಎಲ್ಲರೂ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಜಮಾವಣೆಗೊಂಡರು. ಅಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಮೆರವಣಿಗೆಗೆ ಚಾಲನೆ ನೀಡಲಾಯಿತು.ವಿವಿಧ ಜಾನಪದ ಕಲಾತಂಡಗಳಾದ ಗೊರವರ ಕುಣಿತ, ಪೂಜಾ ಕುಣಿತ, ಗಾರಡಿ ಗೊಂಬೆ, ಚಾಮುಂಡೇಶ್ವರಿಯ ವಿವಿಧ ವೇಷ ಭೂಷಣ ಕಲಾವಿದರು, ಹುಲಿ ವೇಷಧಾರಿಗಳು ಪಾಲ್ಗೊಂಡಿದ್ದರು. ಕೆಂಪೇಗೌಡರ ಸಾಧನೆಯನ್ನು ಒಳಗೊಂಡ ಸ್ತಬ್ಧಚಿತ್ರ ಗಮನ ಸೆಳೆಯಿತು.ಮೆರವಣಿಗೆಯಲ್ಲಿ ಡೊಳ್ಳು ಮತ್ತು ನಗಾರಿಯ ಸದ್ದಿಗೆ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೆಜ್ಜೆ ಹಾಕಿದರು. ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳವರು ಮೆರವಣಿಗೆಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು.