ಕ್ಯಾಸಿನಕೆರೆಯಲ್ಲಿ ಹಳ್ಳಿಕಾರ್‌ ಹೋರಿ ಅದ್ಧೂರಿ ಮೆರವಣಿಗೆ

| Published : May 12 2024, 01:16 AM IST

ಸಾರಾಂಶ

ಕ್ಯಾಸಿನಕೆರೆಯಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಹಳ್ಳಿಕಾರ್ ಹೋರಿಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಸಿನಕೆರೆ ಗ್ರಾಮದ ಶಿವಶರಣ ಬಸವ ಸಮಿತಿ ಆಯೋಜಿಸಿದ 6ನೇ ವರ್ಷದ ಬಸವವಣ್ಣನವರ ಜಯಂತ್ಯುತ್ಸವ ಅಂಗವಾಗಿ ಗ್ರಾಮದಲ್ಲಿ ಹಳ್ಳಿಕಾರ್ ಹೋರಿಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಶಿವಶರಣ ಬಸವ ಸಮಿತಿ ಗೌರವ ಅಧ್ಯಕ್ಷ ದೇವೇಂದ್ರಪ್ಪ ಟ್ರ್ಯಾಕ್ಟರ್‌ನಲ್ಲಿ ಪ್ರತಿಷ್ಠಾಪಿಸಿದ ಆಳೆತ್ತರದ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸುಂದರವಾಗಿ ಅಲಂಕರಿಸಿದ ಹಳ್ಳಿಕಾರ್ ಹೋರಿಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಇಂದಿನ ಕೃಷಿ ವಲಯದಲ್ಲಿ ಎತ್ತುಗಳ ಜಾಗದಲ್ಲಿ ಟ್ರ್ಯಾಕ್ಟರ್, ಟಿಲ್ಲರ್ ಯಂತ್ರ ಕೆಲಸ ಮಾಡುತ್ತಿದ್ದು ಇಂದು ರೈತರು ದನ, ಕರು, ಎತ್ತು ಸಾಕುವುದನ್ನು ಬಿಟ್ಟಿರುವುದರಿಂದ ಎತ್ತುಗಳು ಕೃಷಿ ವಲಯದಿಂದ ದೂರವಾಗಿವೆ. ಅನಾದಿಕಾಲದಿಂದಲೂ ರೈತನೊಂದಿಗೆ ಜೀವನಾಡಿಯಾಗಿ ಹಗಲಿರುಳು ದುಡಿಯುವ ಎತ್ತುಗಳಿಗೆ ಸಿಂಗಾರಗೊಳಿಸಿ ಗ್ರಾಮಗಳ ರಾಜಬೀದಿಯಲ್ಲಿ ಜಾನಪದ ಕಲಾ ಮೇಳಗಳೊಂದಿಗೆ ಭವ್ಯ ಮೆರವಣಿಗೆ ಮಾಡಲಾಗುತ್ತಿದೆ ಎಂದರು.

ಹಬ್ಬ ಮಾಡುವುದೇ ಒಂದು ಸಂಭ್ರಮ. ಹಳ್ಳಿಗಳಲ್ಲಿ ನಡೆಯುವ ಹಬ್ಬ ಹರಿದಿನ ಜಾತ್ರೆ ಮಹೋತ್ಸವದಲ್ಲಿ ಹೋರಿ ಬೆದರಿಸುವುದು. ಮೆರವಣಿಗೆಗೆಂದೇ ಜಲ್ಲಿಕಟ್ಟು ಹೋರಿಗಳನ್ನು ದಿಗ್ಗೇನಹಳ್ಳಿ ವಿಷ್ಣು ದಾದಾ ಶಶಿಕುಮಾರ ಹಾಗೂ ನರಸಿಂಹ ಇವರು ತಮಿಳುನಾಡಿನಿಂದ 1.20ಲಕ್ಷ ಹಣ ನೀಡಿ ತಲಾ ಒಂದೊಂದು ಹಳ್ಳಿಕಾರ್ ಹೋರಿಗ ತಂದಿದ್ದು, ಕಳೆದ ವರ್ಷದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಯುವ ಹೋರಿ ಬೆದರಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿ ಜನರ ಹೃದಯ ಗೆದ್ದಿದ್ದು ಇಂದು ಕ್ಯಾಸಿನಕೆರೆಯಲ್ಲಿ ನಡೆಯುತ್ತಿರುವ ಬಸವ ಜಯಂತಿ ಮೆರವಣಿಗೆಯಲ್ಲಿ ಹಳ್ಳಿಕಾರ್ ಹೋರಿಗಳದ್ದೇ ಹವಾ. ಹಳ್ಳಿಕಾರ್ ಹೋರಿ ಮೆರವಣಿಗೆ ಸೊಬಗು, ಜಿಂಜಿ, ಕಲಾ ಮೇಳಗಳು ಬಸವ ಜಯಂತಿ ಮೆರವಣಿಗೆಗೆ ಮೆರಗು ನೀಡಿತು. ಸುತ್ತಮುತ್ತಲ ಗ್ರಾಮದವರು ಕೂಡ ಮೆರವಣಿಗೆ ಸೊಬಗನ್ನು ಆನಂದಿಸಿದರು.

ಬಸವೇಶ್ವರರ ಮೆರವಣಿಗೆಯಲ್ಲಿ ಭದ್ರಾವತಿ ಡಾನ್, ಭದ್ರಾವತಿ ಡಾನ್ ಅಧಿಪತಿ, ಹೊನ್ನಾಳಿ ಅರ್ಜುನ್ ಹಳ್ಳಿಕಾರ್ ಹೋರಿ ಸೇರಿ ಸುಮಾರು ಹತ್ತರಿಂದ ಹದಿನೈದು ಜೊತೆ ಹೋರಿಗಳು ಗ್ರಾಮದ ರಾಜ ಬೀದಿಯಲ್ಲಿ ಮೆರವಣಿಗೆ ಹೋಗುತ್ತಿರುವಾಗ ಪ್ರತಿ ಮನೆಯ ಹೆಣ್ಣುಮಕ್ಕಳು ಹೋರಿಗಳಿಗೆ ಕಾಯಿ ಒಡೆದು ಪೂಜಿಸಿ, ಆರತಿ ಬೆಳಗಿಸಿ ಹೋರಿಗಳ ಪಾದಗಳಿಗೆ ನಮಿಸಿ ಮೀಸಲು ಎಡೆ ತಿನ್ನಿಸಿದರು.

ಕಾರ್ಯಕ್ರಮದಲ್ಲಿ ಶಿವಶರಣ ಬಸವ ಸಮಿತಿ ಅಧ್ಯಕ್ಷ ಪವನ್ ಬಿ. ಡಿ, ಉಪಾಧ್ಯಕ್ಷ ಕೆ.ಜಿ. ಪ್ರದೀಪ್, ಕಾರ್ಯದರ್ಶಿ ರುದ್ರೇಶ್ ಎಂ ಬಿ, ಪದಾಧಿಕಾರಿಗಳಾದ ಬಿ ವಿ ಸಂತೋಷ, ಬಸವನಗೌಡ, ಚಂದ್ರಶೇಖರ್,ರವಿ, ಮನೋಜ್, ಪದಾಧಿಕಾರಿಗಳಾದ ಕೆ.ಜಿ. ಬೀರೇಶ್, ನಾಗೇಶ್, ಮಂಜು ಸೇರಿ ಕ್ಯಾಸಿನಕೆರೆ ಗ್ರಾಮಸ್ಥರಿದ್ದರು.