ಸಾರಾಂಶ
ಕೆಂಭಾವಿ ಪಟ್ಟಣದ ಸಂಜೀವನಗರ ಸಂಜೀವಾಂಜನೇಯ ದೇವಸ್ಥಾನದಲ್ಲಿ ಕೋರಿಸಿದ್ದೇಶ್ವರ ಶಾಖಾಮಠದ ಸಿದ್ಧಚನ್ನ ಮಲ್ಲಿಕಾರ್ಜುನ ಸ್ವಾಮಿಗಳು, ಹಿರೇಮಠದ ಚನ್ನಬಸವ ಶಿವಾಚಾರ್ಯರು, ಕೂಡಲಗಿ ಗಣಪತಿ ಮಹಾರಾಜ, ಶಿವು ಕರಡಕಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಸುರಪುರ
ಅಯೋಧ್ಯೆಯಲ್ಲಿ ಜರುಗುವ ಶ್ರೀರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಗುರುವಾರ ಕೆಂಭಾವಿ ಪಟ್ಟಣದಲ್ಲಿ ಶ್ರೀರಾಮ ದೇವರ ಮಂತ್ರಾಕ್ಷತೆ ವಿತರಣೆ ಹಾಗೂ ಶ್ರೀರಾಮ ದೇವರ ಭಾವಚಿತ್ರದ ಭವ್ಯ ಶೋಭಾ ಯಾತ್ರೆ ಸಹಸ್ರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.ಕೆಂಭಾವಿ ಪಟ್ಟಣದ ಸಂಜೀವನಗರ ಸಂಜೀವಾಂಜನೇಯ ದೇವಸ್ಥಾನದಲ್ಲಿ ಕೋರಿಸಿದ್ದೇಶ್ವರ ಶಾಖಾಮಠದ ಸಿದ್ಧಚನ್ನ ಮಲ್ಲಿಕಾರ್ಜುನ ಸ್ವಾಮಿಗಳು, ಹಿರೇಮಠದ ಚನ್ನಬಸವ ಶಿವಾಚಾರ್ಯರು, ಕೂಡಲಗಿ ಗಣಪತಿ ಮಹಾರಾಜ, ಶಿವು ಕರಡಕಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಜಾರ ಕೇದಾರ ಕಟ್ಟೆಯಲ್ಲಿ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುದನೂರ ಕಂಠಿಮಠದ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಸಮಗ್ರ ಭಾರತೀಯರು 500 ವರ್ಷಗಳಿಂದ ಕಾಯುತ್ತಿದ್ದ ಉತ್ತಮ ಸಮಯ ಈಗ ಒದಗಿಬಂದಿದೆ. ಆದರ್ಶ ಪುರುಷ ಎಂದು ಕರೆಸಿಕೊಳ್ಳುವ ಶ್ರೀರಾಮನ ಪ್ರತಿಷ್ಠಾಪನೆ ನಮ್ಮ ಎಲ್ಲ ಭಾತೀಯರಿಗೆ ಸಂತಸ ತರುವ ವಿಷಯ ಎಂದು ಹೇಳಿದರು.ಕೂಡಲಗಿ ಗಜಾನನ ಮಹಾರಾಜ ಮಾತನಾಡಿ, ಸಾಕ್ಷಾತ್ ರುದ್ರದೇವರೆ ಶ್ರೀರಾಮ ದೇವರನ್ನು ತಮ್ಮ ಅಮೋಫ ಶ್ಲೋಕದಿಂದ ಕೊಂಡಾಡಿದ್ದಾರೆ. ಅಂಥ ಭಗವಂತನ ಪ್ರತಿಷ್ಠಾಪನೆ ಎಲ್ಲ ರಾಮ ಭಕ್ತರಿಗೆ ಸಂತೋಷದ ವಿಚಾರ ಎಂದು ಹೇಳಿದರು. ಶಿವು ಕರಡಕಲ್, ಆನಂದ ಕುಲಕರ್ಣಿ ಇದ್ದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀರಾಮ ಮತ್ತು ಹನುಮಂತ ದೇವರ ಭಾವಚಿತ್ರ ಮೆರವಣಿಗೆ ಸಂಜೀವನಗರದ ಆಂಜನೇಯ ಹಾಗೂ ಕಾಶಿ ವಿಶ್ವನಾಥ ದೇವಸ್ಥಾನದಿಂದ ಪ್ರಾರಂಭವಾಗಿ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ, ಅಂಬಿಗರ ಚೌಡಯ್ಯ ವೃತ್ತ, ಟಿಪ್ಪು ಸುಲ್ತಾನ ವೃತ್ತ, ಉತ್ತರಾದಿ ಮಠ ಬೀದಿ, ಜೈ ಹನುಮಾನ ಚೌಕ್, ಹಿರೇಮಠ ಸಂಸ್ಥಾನ, ಹಳೆ ಬಸ್ ನಿಲ್ದಾಣ, ಬಲಭೀಮಸೇನ ದೇವರ ವೃತ್ತ ಮಾರ್ಗವಾಗಿ ಮುಖ್ಯ ಬಜಾರ ಪ್ರದೇಶದ ಹನುಮಾನ ದೇವಸ್ಥಾನದ ಕೇದಾರ ಕಟ್ಟೆ ತಲುಪಿತು.ಮಾರ್ಗ ಮಧ್ಯೆ ವಿವಿಧ ಬಡಾವಣೆಗಳಲ್ಲಿ ಮಹಿಳೆಯರು, ಮಕ್ಕಳು ಸೇರಿ ಶ್ರೀರಾಮ ಭಕ್ತರು ಹೂಮಳೆಗೈದು ಸ್ವಾಗತಿಸಿದರು. ಪಟ್ಟಣ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.