ಧಾರವಾಡದಲ್ಲಿ ಅದ್ಧೂರಿ ದಸರಾ ಆರಂಭ

| Published : Oct 16 2023, 01:45 AM IST / Updated: Oct 16 2023, 01:46 AM IST

ಸಾರಾಂಶ

ಒಂಭತ್ತು ದಿನಗಳ ನವರಾತ್ರಿ ಹಬ್ಬ ಇದೀಗ ಧಾರವಾಡದಲ್ಲಿ ಕಳೆಗಟ್ಟಿದೆ. ಅ. 15 ರಿಂದ ಶುರುವಾದ ನವರಾತ್ರಿ ಉತ್ಸವ ಸೆ. 24ರ ವರೆಗೆ ನಡೆಯಲಿದ್ದು ಧಾರವಾಡದಲ್ಲಿ ದಸರಾ ಹಬ್ಬದ ವೈಭವ ಕೈ ಬೀಸಿ ಕರೆಯುತ್ತಿದೆ.
ಕನ್ನಡಪ್ರಭ ವಾರ್ತೆ ಧಾರವಾಡ ಒಂಭತ್ತು ದಿನಗಳ ನವರಾತ್ರಿ ಹಬ್ಬ ಇದೀಗ ಧಾರವಾಡದಲ್ಲಿ ಕಳೆಗಟ್ಟಿದೆ. ಅ. 15 ರಿಂದ ಶುರುವಾದ ನವರಾತ್ರಿ ಉತ್ಸವ ಸೆ. 24ರ ವರೆಗೆ ನಡೆಯಲಿದ್ದು ಧಾರವಾಡದಲ್ಲಿ ದಸರಾ ಹಬ್ಬದ ವೈಭವ ಕೈ ಬೀಸಿ ಕರೆಯುತ್ತಿದೆ. ಭಾನವಾರ ಬೆಳಗ್ಗೆ 4ಕ್ಕೆ ಮಹಿಳೆಯರು ಸೀರೆಯುಟ್ಟು ಮಡಿಯೊಂದಿಗೆ ಬನ್ನಿ ಗಿಡಕ್ಕೆ ಪೂಜೆ ಮಾಡಿದರು. ದುರ್ಗಾ ದೇವಿ, ಕರಿಯಮ್ಮ ದೇವಸ್ಥಾನಕ್ಕೂ ಹೋಗಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿದೆ. ಧಾರವಾಡದಲ್ಲಿ ಕಳೆದ 18 ವರ್ಷಗಳಿದ ಜಂಬುಸವಾರಿ ಕನ್ನಡಾಂಬೆಯ ಮೆರವಣಿಗೆ ನಡಯುತ್ತಿದ್ದು ಕೊನೆ ದಿನ ವಿಜೃಂಭಣೆಯಿಂದ ನಡೆಯಲಿದೆ. ಇಲ್ಲಿಯ ಜವಳಿ ಪೇಟೆಯ ಲಕ್ಷ್ಮೀನಾರಾಯಣ ಹಾಗೂ ನಗರೇಶ್ವರ ದೇವಸ್ಥಾನದಲ್ಲಿ 10 ದಿನಗಳ ಕಾಲ ದೇವರ ಮೂರ್ತಿಗಳಿಗೆ ವಿಶೇಷ ಅವತಾರಗಳನ್ನು ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ದಸರಾ ಹಬ್ಬಕ್ಕೆ ಶುರುವಾದ ಜಾತ್ರೆಯು ದೀಪಾವಳಿಯವರೆಗೆ ನಡೆಯತ್ತದೆ. ಭಾನುವಾರ ನಗರೇಶ್ವರ ದೇವಸ್ಥಾನದಲ್ಲಿ ಕೊಲ್ಲಾಪೂರ ಮಹಾಲಕ್ಷ್ಮೀ ಅವತಾರ ಗಮನ ಸೆಳೆಯಿತು. ಕಿಲ್ಲಾ ಆವರಣದಲ್ಲಿ ದುರ್ಗಾದೇವಿಗೆ ಭಾನುವಾರ ಗೆಜ್ಜೆ ವಸ್ತ್ರದ ಅಲಂಕಾರ ಮಾಡಲಾಗಿತ್ತು. ಹಾಗೆಯೇ, ಶಾಂತಿನಿಕೇತನ ನಗರದ ಕರಿಯಮ್ಮದೇವಿ ದೇವಸ್ಥಾನದಲ್ಲಿ ಭಾನುವಾರದಿಂದ ವಿಜೃಂಭಣೆಯ ಶರನ್ನವರಾತ್ರಿ ಉತ್ಸವ ಶುರುವಾಗಿದೆ. ಕೆಲಗೇರಿ ರಸ್ತೆಯಲ್ಲಿರುವ ಆಧಿದೇವತೆ ಕರಿಯಮ್ಮ ದೇವಿ ಭಕ್ತಿಗೆ ರಾಜ್ಯದ ನಾನಾಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ದೇವಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತಿದ್ದು, ಪ್ರತಿದಿನ ರಾತ್ರಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಶ್ರೀ ರೇಣುಕಾದೇವಿ ಅವತಾರ ಮಾಡಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ಸೋಮವಾರ ಪದ್ಮಾವತಿದೇವಿ ಅಲಂಕಾರವಿದೆ. ಅ. 24ರಂದು ಮಹಿಷಾಸುರ ಮರ್ದಿನಿ ಅಲಂಕಾರ ಮಾಡುವುದರ ಜೊತೆಗೆ ಸಂಜೆ 4.30ಕ್ಕೆ ಕರಿಯಮ್ಮದೇವಿಯ ಅಲಂಕೃತ ಪಲ್ಲಕ್ಕಿ ಉತ್ಸವ ನಡೆದು ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಮುಡಿಯಲಾಗುವುದು ಎಂದು ದೇವಸ್ಥಾನದ ಟ್ರಸ್ಟ್ ಚೇರಮನ್ ಎನ್.ಎಚ್. ಕೋನರಡ್ಡಿ ತಿಳಿಸಿದರು. ನಗರದ ಕಟ್ಟಿಮಠದಲ್ಲಿ ವಾರಣಾಸಿ ಕಲ್ಪನೆಯಲ್ಲಿ ಈ ಬಾರಿ ದೇವಿ ಅಲಂಕಾರ ಮಾಡಲಾಗುತ್ತಿದ್ದು ಭಾನುವಾರ ಕಾಶಿಕಾ ಅವತಾರದಲ್ಲಿ ದೇವಿ ಕೈ ಬೀಸಿ ಕರೆಯುತ್ತಿದ್ದಾಳೆ. ಹೀಗೆ ಅನೇಕ ದೇವಸ್ಥಾನಗಳಲ್ಲಿ ದೇವಿಗೆ ನಿತ್ಯವೂ ಪೂಜೆ ಆರಂಭವಾಗಿದೆ. ಈ ಹಬ್ಬ ಅಶ್ವಿಜ ಮಾಸದ ಬಹುಳ ಪಾಡ್ಯಮಿಯಿಂದ ಪ್ರಾರಂಭವಾಗಿ ವಿಜಯದಶಮಿಯಂದು ಕೊನೆಗೊಳ್ಳುತ್ತದೆ. ಈ ಮಧ್ಯೆ ಬರುವ ಸಪ್ತಮಿ, ಅಷ್ಟಮಿ, ನವಮಿ ಹಾಗೂ ದಶಮಿಗಳಲ್ಲಿ ವಿಶೇಷ ಪೂಜೆಯೂ ನಡೆಯುತ್ತದೆ. ದುರ್ಗಾಷ್ಟಮಿಗೆ ಶಕ್ತಿಪೂಜೆ, ಮಹಾನವಮಿಯಂದು ಸರಸ್ವತಿ ಪೂಜೆ, ಆಯುಧ ಪೂಜೆ, ವಿಜಯದಶಮಿಯಂದು ‘ಬನ್ನಿ’ ಪೂಜೆಯನ್ನು ಮಾಡುವ ಮೂಲಕ ಹಬ್ಬಕ್ಕೆ ವಿಧಾಯ ಹೇಳಲಾಗುತ್ತದೆ.