ಸಾರಾಂಶ
ಹೊಸಕೋಟೆ: ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಖಿಲ ಭಾರತ ಯಾದವ(ಗೊಲ್ಲ)ಸಮಾಜ ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ ಕಳಸ ರಥಯಾತ್ರೆ ಮಂಗಳವಾರ ತಾಲೂಕಿಗೆ ಆಗಮಿಸಿದಾಗ ಯಾದವ ಸಂಘದ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು.
ನಗರದ ಕೆಇಬಿ ವೃತ್ತದಿಂದ ತಾಲುಕು ಕಚೇರಿವರೆಗೆ ಪೂರ್ಣಕುಂಭದೊಂದಿಗೆ ಕಳಸ ರಥದ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಮುಂದೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಬಹಿರಂಗ ಸಭೆ ನಡೆಸಲಾಯಿತು.ಯಾದವ ಸಮಾಜದ ರಾಜ್ಯಾಧ್ಯಕ್ಷ ಹಾಗೂ ಎಂಎಲ್‌ಸಿ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಯಾದವ ಸಮುದಾಯದ 3 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಹಾರದಿಂದ ಕಳಸ ರಥಯಾತ್ರೆ ಆಯೋಜಿಸಿದೆ. ಈಗಾಗಲೇ ೮ ರಾಜ್ಯಗಳಲ್ಲಿ ಯಾತ್ರೆ ಮುಗಿಸಿ ರಾಜ್ಯಕ್ಕೆ ಪ್ರವೇಶ ಮಾಡಿದೆ. ಕೇಂದ್ರ ಸರ್ಕಾರ ಜಾತಿ ಗಣತಿಗೆ ಮುಂದಾಗಿದ್ದು, ಕೇವಲ ಜಾತಿ ಗಣತಿ ಮಾತ್ರ ನಡೆಸದೆ ಸಮುದಾಯದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಇತರೇ ಮಾನದಂಡಗಳೊಂದಿಗೆ ಸಮೀಕ್ಷೆ ಮಾಡಬೇಕು. ಹಿಂದುಳಿದ ಜಾತಿಗಳಿಗೆ ರಾಜಕೀಯ ಮೀಸಲಾತಿ ಹೆಚ್ಚಳ ಮಾಡಬೇಕು, ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸುವುದರಿಂದ ಅದರಲ್ಲಿ ಎಸ್‌ಸಿ ಎಸ್‌ಟಿ ಒಬಿಸಿ ಮಹಿಳೆಯರಿಗೂ ಮೀಸಲಾತಿ ನೀಡಬೇಕು. ಅಹೀರ್‌ಗಳ ರೆಜ್ಮೆಂಟನ್ನು ಸೇನೆಯಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಯಾದವ ಸಂಘದ ಅಧ್ಯಕ್ಷ ಗಿಡ್ಡಪ್ಪನಹಳ್ಳಿ ವಿ.ಪ್ರಸಾದ್ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸಣ್ಣ ಸಮಾಜಗಳು ರಾಜಕೀಯ ಅಸ್ತಿತ್ವಕ್ಕಾಗಿ ಹೆಣಗಾಡುವಂತಾಗಿದೆ. ಎಲ್ಲಾ ರಾಜ್ಯಗಳಲ್ಲಿಯೂ ಹಿಂದುಳಿದ ವರ್ಗಗಳ ಸಮಾಜಕ್ಕೆ ಶೇ.44ರಷ್ಟು ಮೀಸಲಾತಿ ನಿಗಡಿಪಡಿಸಬೇಕು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಒಬಿಸಿ ಸಮಾವೇಶದಲ್ಲಿಯೂ ನಿರ್ಣಯವಾಗಿದ್ದು ಕೇಂದ್ರ ಸರ್ಕಾರದ ಗಮನ ಸೆಳೆಯಲು ನ.18ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ಯಾದವ ಮುಖಂಡ ಕಿರಣ್ ಯಾದವ್, ತಾಲೂಕು ಉಪಾಧ್ಯಕ್ಷ ಮುನಿನಾರಾಯಣ, ಖಜಾಂಚಿ ಯರ‍್ರೇಗೌಡ, ಮುಖಂಡರಾದ ಮೋತಕದಹಳ್ಳಿ ಶ್ರೀನಿವಾಸ್, ಬೀಮಕ್ಕನಹಳ್ಳಿ ವೆಂಕಟೇಗೌಡ, ಅನುಪಳ್ಳಿ ಶ್ರೀನಿವಾಸ್ ಇತರರಿದ್ದರು.
ಫೋಟೋ: 5 ಹೆಚ್‌ಎಸ್‌ಕೆ 3ಹೊಸಕೋಟೆಯ ತಾಲೂಕು ಕಚೇರಿ ಅವರಣಕ್ಕೆ ಆಗಮಿಸಿದ ಯಾದವ್ (ಗೊಲ್ಲ) ಸಮುದಾಯದ ಕಳಸ ಯಾತ್ರೆಯನ್ನು ತಾಲೂಕು ಯಾದವ ಸಮುದಾಯದ ಮುಖಂಡರು ಬರಮಾಡಿಕೊಂಡರು.