ರಾಜಧಾನಿಯಲ್ಲಿ 2025ಕ್ಕೆ ಭರ್ಜರಿ ಸ್ವಾಗತ

| Published : Jan 01 2025, 01:00 AM IST

ಸಾರಾಂಶ

ಬೆಂಗಳೂರಿನ ನಗರಾದದ್ಯಂತ ಭರ್ಜರಿಯಾಗಿ ಹೊಸ ವರ್ಷವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಗಿಲು ಮುಟ್ಟಿದ ‘ಹ್ಯಾಪಿ ನ್ಯೂ ಇಯರ್‌’ ಹರ್ಷೋದ್ಗಾರ, ಪರಸ್ಪರ ಶುಭಾಶಯ ಕೋರಿಕೆ, ಆಗಸದಲ್ಲಿ ಸಿಡಿ ಮದ್ದಿನ ಬಣ್ಣದ ಚಿತ್ತಾರ, ಮನೆಗಳ ಅಂಗಳ, ಮಹಡಿ ಸೇರಿದಂತೆ ಹೊಟೇಲ್‌, ರಿಸಾರ್ಟ್‌, ಪಬ್‌ಗಳಲ್ಲಿ ಭರ್ಜರಿ ಹಾಡು, ಸಂಗೀತದೊಂದಿಗೆ ಹೆಜ್ಜೆ ಹಾಕಿದ ಜನರು, ಯುವ ಸಮೂಹ.

ಮಂಗಳವಾರ ಮಧ್ಯರಾತ್ರಿ ಗಡಿಯಾರದಲ್ಲಿ 11.59 ಕಳೆದು 12 ಗಂಟೆ ತೋರಿಸುತ್ತಿದ್ದಂತೆ ಸಿಲಿಕಾನ್‌ ಸಿಟಿ ಜನ 2024ಕ್ಕೆ ವಿದಾಯ ಹೇಳಿ ಹೊಸ ವರ್ಷ 2025ನ್ನು ಬರಮಾಡಿಕೊಂಡಿದ್ದು ಹೀಗೆ. ನಿಗದಿತ ಅವಧಿ 1 ಗಂಟೆ ಮೀರಿ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ನಗರ ಮುಳುಗಿತ್ತು.

ಸಂಜೆಯಾಗುತ್ತಿದ್ದಂತೆ ನಿಧಾನವಾಗಿ ಯುವ ಜನರು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ತೆರಳತೊಡಗಿದರು. ಇನ್ನೂ ರಾತ್ರಿ 9 ಗಂಟೆ ಬಳಿಕ ಎಂ.ಜಿ ರಸ್ತೆಯತ್ತ ಯುವಸಮೂಹ ದಾಂಗುಡಿ ಇಟ್ಟಿತ್ತು. ವೈವಿಧ್ಯಮ ಉಡುಗೆಯಲ್ಲಿದ್ದ ಯುವಕ ಯುವತಿಯರು ಆಗಮಿಸತೊಡಗಿದರು. ಜಗಮಗಿಸುವ ವಿದ್ಯುತ್‌ ದೀಪಗಳಿಂದ ರಸ್ತೆಗಳು ರಂಗು ಪಡೆದುಕೊಂಡಿದ್ದವು. ಇದರೊಟ್ಟಿಗೆ ಕೇಳಿಬರುತ್ತಿದ್ದ ಡಿಜೆ ಮ್ಯೂಸಿಕ್‌ ಯುವಕರನ್ನು ಸಂಭ್ರಮಾಚರಣೆಗೆ ಆಹ್ವಾನಿಸಿತ್ತು. ಗುಂಪು ಗುಂಪಾಗಿ ಕೇಕೆ ಹಾಕುತ್ತಾ ಸಂಚರಿಸುತ್ತಿದ್ದ ದೃಶ್ಯಗಳು ಎಲ್ಲೆಡೆ ಕಂಡುಬಂತು.

ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್‌, ಕೋರಮಂಗಲ, ಇಂದಿರಾ ನಗರದ 100 ಅಡಿ ರಸ್ತೆಯಲ್ಲಿ ಸಂಭ್ರಮ ಮೇರೆ ಮೀರಿತ್ತು. ಜನತೆ ಸರದಿ ಸಾಲಲ್ಲಿ ಪಬ್‌ ಪ್ರವೇಶಿಸಿದರು. ನಗರ ಮಾತ್ರವಲ್ಲದೆ, ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶಗಳಿಂದಲೂ ಬಂದಿದ್ದ ಜನ ಸಿಲಿಕಾನ್‌ ಸಿಟಿಯಲ್ಲಿ ತಮ್ಮ ಅಭಿರುಚಿಗೆ ತಕ್ಕಂತೆ ಹೊಸ ವರ್ಷಾಚರಣೆ ಮಾಡಿದರು. ಇಲ್ಲಿರುವ ಪಬ್‌, ಹೋಟೆಲ್‌ಗಳ ಎದುರು ಅಲಂಕಾರಿಕ ವಿದ್ಯುತ್ ದೀಪಗಳು ಕಣ್ಣು ಕೋರೈಸಿದವು.

ಅದೇ ರೀತಿ ಜಗಮಗಿಸುವ ಬೆಳಕಿನಲ್ಲಿ ಡಿಜೆ ಅಬ್ಬರಕ್ಕೆ ಪಬ್, ಕ್ಲಬ್‌ಗಳಲ್ಲಿ ಯುವಕ- ಯುವತಿಯರು ಕೈ ಹಿಡಿದು ಹೆಜ್ಜೆ ಹಾಕಿದರು. ಫೋಟೋ , ಸೆಲ್ಫೀ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಭರ್ಜರಿ ಪಾರ್ಟಿ:

ಇಲ್ಲೆಲ್ಲ ಮದ್ಯ, ಊಟ, ವಿಶೇಷ ಖಾದ್ಯಗಳ ಬಾಯಲ್ಲಿ ನೀರೂರಿಸಿತ್ತು. ವಿಐಪಿ, ವಿವಿಐಪಿಗಳಿಗೆ ಪ್ರತ್ಯೇಕ ಕೌಂಟರ್‌ ಮಾಡಲಾಗಿತ್ತು. ಕ್ಯಾಂಪ್‌ ಫೈರ್‌ ಸೇರಿ ಓಪನ್ ಏರ್‌ ಪಾರ್ಟಿ, ಪೂಲ್‌ಸೈಡ್ ಪಾರ್ಟಿ, ರೈನ್ ಡ್ಯಾನ್ಸ್, ಫೈರ್‌ ಡ್ಯಾನ್ಸ್‌ ಆಯೋಜನೆ ಮಾಡಲಾಗಿತ್ತು. ಇದಕ್ಕಾಗಿ ಪ್ರಖ್ಯಾತ ತಾರೆಯರು, ಗಾಯಕರನ್ನು ಕರೆಸಿಕೊಳ್ಳಲಾಗಿತ್ತು. ವಿಐಪಿ, ವಿವಿಐಪಿ ಕೌಂಟರ್‌, ಸೆಲೆಬ್ರಿಟಿ ಕೌಂಟರ್‌, ಫ್ಯಾಮಿಲಿ ಕೌಂಟರ್‌, ಮಕ್ಕಳಿಗೆ ಪ್ರತ್ಯೇಕ ಝೋನ್‌ ಎಂದು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಹೊಸ ವರ್ಷವನ್ನು ನಗರದ ಗಲ್ಲಿಗಳಲ್ಲಿ, ವಸತಿ ಸಮುಚ್ಛಯಗಳಲ್ಲಿ ವಿಶೇಷವಾಗಿ ಸಂಭ್ರಮಿಸಲಾಯಿತು. ಅಪಾರ್ಟ್‌ಮೆಂಟ್‌ ಸಂಘಗಳಿಂದ ಮನರಂಜಾ ಕಾರ್ಯಕ್ರಮ, ಮಕ್ಕಳಿಂದ ಸಂಗೀತ, ನೃತ್ಯ, ಮನರಂಜನಾ ಕ್ರೀಡೆ ಆಯೋಜಿಸಲಾಗಿತ್ತು. ಮಲ್ಲೇಶ್ವರ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮೀ ಬಡಾವಣೆ, ಅಶೋಕ ನಗರ, ದೀಪಾಂಜಲಿ ನಗರ, ಯಶವಂತಪುರ, ದಾಸರಹಳ್ಳಿ, ಬಿಟಿಎಂ ಲೇಔಟ್, ಎಚ್‌ಎಸ್‌ಆರ್‌ ಲೇಔಟ್, ವೈಟ್‌ಫೀಲ್ಡ್‌ ಸೇರಿ ಎಲ್ಲೆಡೆ ಹೊಸ ವರ್ಷ ಸ್ವಾಗತದ ವಿಶೇಷ ಕಾರ್ಯಕ್ರಮಗಳು ನಡೆದವು.

ನಗರದ ಹೊರವಲಯದ ಕನಕಪುರ ರಸ್ತೆ, ಹೊಸೂರು, ದಾಬಸ್‌ಪೇಟೆ, ತುಮಕೂರು, ಮೈಸೂರು ರಸ್ತೆಗಳಲ್ಲಿರುವ ರೆಸಾರ್ಟ್‌, ಹೋಂಸ್ಟೇಗಳಲ್ಲೂ ಹೊಸವರ್ಷದ ಪ್ರಯುಕ್ತ ವಿಶೇಷ ಥೀಮ್‌ಗಳಡಿ ಪಾರ್ಟಿ ನಡೆದವು. ಮಡಿಕೇರಿ, ಮಂಗಳೂರು, ಉಡುಪಿ , ಗೋಕರ್ಣ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಹಲವೆಡೆಗಳಿಗೆ ಪ್ರವಾಸ ತೆರಳಿ ಹೊಸ ವರ್ಷಾಚರಣೆ ಮಾಡಿದರು.

ಮಾರ್ಧನಿಸಿದ ಡಿಜೆ: 31ರ ರಾತ್ರಿ ಪ್ರಯುಕ್ತ ಪ್ರತಿಷ್ಠಿತ ಹೊಟೆಲ್‌ಗಳಲ್ಲಿ ಸೆಲೆಬ್ರಿಟಿ ಡಿಜೆಗಳು ತಮ್ಮ ಪ್ರದರ್ಶನ ಮೂಲಕ ರಂಜಿಸಿದರು. ಹೊಟೆಲ್‌ ಲಲಿತ್‌ ಅಶೋಕ್‌ನಲ್ಲಿ ಬಹುಭಾಷಾ ಗಾಯಕಿ ಉಷಾ ಉತ್ತಪ್‌, ಡಿಜೆ ಹರ್ಷ ಬಟೌನಿ ಗಾಯನ ಆಯೋಜಿಸಲಾಗಿತ್ತು. ಕೋರಮಂಗಲದ ಗಿಲ್ಲೀಸ್‌ ರೆಡಿಫೈಂಡ್‌ನಲ್ಲಿ ಡಿಜೆ ಹಂಶ್‌, ಡಿಜೆ ಹೈಶಿ, ಶೆರ್ಟಾನ್‌ ಗ್ರ್ಯಾಂಡ್‌ನಲ್ಲಿ ನಿಖಿಲ್‌ ಚಿನಪ್ಪ, ಎಂ.ಜಿ.ರಸ್ತೆ ತಾಜ್‌ನಲ್ಲಿ ಸೆಬ್ರಿನಾ ಟೆರೆನ್ಸ್‌ ಪ್ರದರ್ಶನವಿತ್ತು. ಹೀಗೆ ಬಹುತೇಕ ಎಲ್ಲ ಹೊಟೆಲ್‌, ಪಬ್‌ಗಳಲ್ಲಿ ಡಿಜೆ ಸಂಗೀತ ಮಾರ್ದನಿಸಿತು. ಹಾಲಿವುಡ್‌, ಬಾಲಿವುಡ್‌, ಪಂಜಾಬಿ, ಇಂಡಿಯನ್‌ ಪಾಪ್‌ ಮ್ಯೂಸಿಕ್, ಬೆಲ್ಲಿ ಡ್ಯಾನ್ಸ್‌ ಲೈವ್‌ ಪರ್‌ಫಾರ್ಮೆನ್ಸ್‌ ಇತ್ತು.

ತುಂಬಿ ತುಳುಕಿದ ಮೆಟ್ರೋ ರೈಲುಗಳು:

ಎಂ.ಜಿ.ರಸ್ತೆ ಸುತ್ತಮುತ್ತ ಪಾರ್ಟಿಗೆ ಬರುವವರು ಮೆಟ್ರೋ ಮೂಲಕ ಬಂದಿದ್ದರಿಂದ ನೇರಳೆ ಮಾರ್ಗದ ಬಹುತೇಕ ರೈಲುಗಳು ಪ್ರಯಾಣಿಕರಿಂದ ತುಂಬಿ ಹೋಗಿದ್ದವು. ರಾತ್ರಿ 11ಗಂಟೆವರೆಗೂ ಇಲ್ಲಿಗೆ ಮೆಟ್ರೋ ಮೂಲಕ ಜನ ಬಂದಿಳಿಯುತ್ತಿದ್ದರು. ಬಳಿಕ ಇಲ್ಲಿ ಮೆಟ್ರೋ ನಿಲುಗಡೆ ಬಂದಾಗಿತ್ತು. ತಡರಾತ್ರಿ ಭರ್ಜರಿ ಪಾರ್ಟಿ ಬಳಿಕ ಎಂ.ಜಿ.ರಸ್ತೆಯಿಂದ ಮೆಟ್ರೋಗೆ ಅವಕಾಶ ಇಲ್ಲದ ಕಾರಣ ಹತ್ತಿರದ ಕಬ್ಬನ್‌ಪಾರ್ಕ್‌ ಹಾಗೂ ಟ್ರಿನಿಟಿ ಮೆಟ್ರೋ ಮೂಲಕ ಜನತೆ ಮೆಟ್ರೋ ಏರಿದರು. ತಡರಾತ್ರಿ 2ಗಂಟೆವರೆಗೆ ಮೆಟ್ರೋ ರೈಲು ಓಡಾಡಿದ್ದರಿಂದ ವರ್ಷಾಚರಣೆಗೆ ಬಂದಿದ್ದವರಿಗೆ ಅನುಕೂಲವಾಯಿತು. ಇಂದು ದೇವಸ್ಥಾನಕ್ಕೆ ಲಗ್ಗೆ:

ಹೊಸ ವರ್ಷದ ಮೊದಲ ದಿನವಾದ ಕಾರಣ ಬುಧವಾರ ನಗರದ ಬಸವನಗುಡಿ ದೊಡ್ಡಗಣಪತಿ ದೇವಸ್ಥಾನ, ಗವಿಗಂಗಾಧರೇಶ್ವರ ಸ್ವಾಮೀಜಿ, ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಸ್ಥಾನ, ಕೋಟೆ ಆಂಜನೇಯ, ಬನಶಂಕರಿ ದೇವಿ ದೇವಸ್ಥಾನ ಸೇರಿ ಹಲವು ದೇವಸ್ಥಾನಗಳಿಗೆ ಜನ ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.