ಸಾರಾಂಶ
ಹುಬ್ಬಳ್ಳಿ:ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಶಾಸಕ ಪ್ರಸಾದ ಅಬ್ಬಯ್ಯಗೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಂದ ಅದ್ಧೂರಿ ಸ್ವಾಗತ ದೊರೆಯಿತು.
ಇಲ್ಲಿನ ಗಬ್ಬೂರ್ ಕ್ರಾಸ್‌ಗೆ ಆಗಮಿಸಿದ ಶಾಸಕ ಅಬ್ಬಯ್ಯ ಅವರನ್ನು ಮಹಿಳಾ ಕಾರ್ಯಕರ್ತರು ಆರತಿ ಬೆಳಗಿ ಬರ ಮಾಡಿಕೊಂಡರು.ಈ ವೇಳೆ ಬರೋಬ್ಬರಿ 150 ಕೆಜಿ ತೂಕದ ಸೇಬು ಹಣ್ಣಿನ ಮಾಲೆಯನ್ನು ಕ್ರೇನ್ ಮೂಲಕ ಹಾಕಿ ಭವ್ಯವಾಗಿ ಸ್ವಾಗತಿಸಿದರು. ಅಲ್ಲಿಂದ ತೆರೆದ ವಾಹನದಲ್ಲಿ ಮಹಾನಗರ ಪ್ರವೇಶಿಸಿದ ಅಬ್ಬಯ್ಯಗೆ ಕಾರ್ಯಕರ್ತರು ಬೈಕ್, ಕಾರು ರ್‍ಯಾಲಿ ಮೂಲಕ ಕರೆ ತರಲಾಯಿತು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಜಾಂಜ್ ಮೇಳ ಸೇರಿದಂತೆ ಹಲವು ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರುಗು ತಂದವು. ಜೈಘೋಷಗಳು ಮುಗಿಲು ಮುಟ್ಟಿದ್ದವು.ಅಲ್ಲಿಂದ ಬಿಡ್ನಾಳ ಕ್ರಾಸ್ ಬಳಿ ದಿವಾನ್ ಚಾಚಾ ದರ್ಗಾ, ಸಿದ್ಧಾರೂಢ ಮಠ, ಕಾರವಾರ ರಸ್ತೆಯ ಚರ್ಚ್‌ಗೆ ಭೇಟಿ ನೀಡಿದರು. ಬಳಿಕ ಕಿತ್ತೂರು ಚೆನ್ನಮ್ಮ ಪುತ್ಥಳಿ, ಅಂಬೇಡ್ಕರ್ ಪುತ್ಥಳಿ, ಬಸವೇಶ್ವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಬಡವರ ಸೇವೆಯಲ್ಲಿಯೇ ಭಗವಂತನನ್ನು ಕಾಣುವಂತೆ ಹಿರಿಯರು ಸಾರಿದ್ದಾರೆ. ಅದರಂತೆ ಕೊಳಗೇರಿ ಅಭಿವೃದ್ಧಿ ಮಂಡಳಿಯೂ ಬಡವರ ಸೇವೆ ಮಾಡಲು ಇರುವ ಮಂಡಳಿ. ಸೇವೆ ಸಲ್ಲಿಸಲು ನನಗೆ ಅವಕಾಶ ದೊರೆತಿರುವುದು ನನ್ನ ಪುಣ್ಯ ಎಂದರು.ಪಕ್ಷದಲ್ಲಿ ಯಾರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂಬುದನ್ನು ಗುರುತಿಸಿ ಪಕ್ಷ ಜವಾಬ್ದಾರಿ ನೀಡಿದೆ. ದೊರೆತ ಅವಕಾಶ ಸದುಪಯೋಗ ಮಾಡಿಕೊಂಡು ಮಾದರಿಯಾಗಿ ಕೆಲಸ ಮಾಡಿ ತೋರಿಸುವೆ ಎಂದರು.
ಲೋಕಸಭೆ ಚುನಾವಣೆ ಪೂರ್ವದಲ್ಲಿ ಸುಮಾರು 36 ಸಾವಿರ ಮನೆಗಳ ಹಸ್ತಾಂತರ ಕೆಲಸ ಮಾಡಲಾಗುವುದು. ಚುನಾವಣೆ ನಂತರ ಮತ್ತೆ ₹500 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.ಹು-ಧಾ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಮುಖಂಡರಾದ ದೊರಾಜ್ ಮಣಿಕುಂಟ್ಲ, ಅಲ್ತಾಫ್ ಕಿತ್ತೂರು, ಮೋಹನ್ ಅಸುಂಡಿ, ನಾಗರಾಜ ಗೌರಿ, ದೀಪಾ ಗೌರಿ, ಶ್ಯಾಮ್ ಜಾಧವ್, ವಿಜನಗೌಡ ಪಾಟೀಲ, ಗಣೇಶ ಟಗರಗುಂಟಿ, ಇಮ್ರಾನ್ ಎಲಿಗಾರ್, ಗುರುನಾಥ ಉಳ್ಳಿಕಾಶಿ, ಹುಡಾ ಮಾಜಿ ಸದಸ್ಯ ಪ್ರಭು ಪ್ರಭಾಕರ ಸೇರಿದಂತೆ ಹಲವರಿದ್ದರು.