ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಅವತರಣದ ಶತಮಾನೋತ್ಸವದ ಪ್ರಯುಕ್ತ ಬಾಬಾ ಅವರ ದಿವ್ಯಾವತಾರದ ಸೌರಭವನ್ನು ಪಸರಿಸಲು ಮತ್ತು ದಿವ್ಯ ಪ್ರೇಮದ ಸಂದೇಶ ಸಾರಲು ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಯನ್ನು ಶನಿವಾರ ದಾವಣಗೆರೆ ನಗರಕ್ಕೆ ಆಗಮಿಸಿತು.ಶನಿವಾರ ಮಧ್ಯಾಹ್ನ 3 ಗಂಟೆಗೆ ಪಾದುಕೆಗಳ ರಥಯಾತ್ರೆಯ ಶೋಭಾಯಾತ್ರೆ ಇಲ್ಲಿನ ಪಿ.ಬಿ.ರಸ್ತೆಯ ಶ್ರೀ ಕೋದಂಡರಾಮ ದೇವಸ್ಥಾನದಿಂದ ವಿಶೇಷ ಪೂಜಾ ವಿಧಾನಗಳೊಂದಿಗೆ ರಾಜಮಾರ್ಗದ ಮೂಲಕ ಇಲ್ಲಿನ ಪಿ.ಜೆ.ಬಡಾವಣೆಯಲ್ಲಿರುವ ಶ್ರೀ ಸತ್ಯಸಾಯಿ ಮಂದಿರದ ವರೆಗೆ ತಲುಪಿತು.
ರಥಯಾತ್ರೆಯು ಪಿ.ಬಿ.ರಸ್ತೆಯ ಶ್ರೀ ಕೋದಂಡ ರಾಮ ದೇವಸ್ಥಾನದಿಂದ ಆರಂಭಗೊಂಡು ಗಾಂಧಿ ಸರ್ಕಲ್, ರೇಣುಕಾ ಮಂದಿರ, ಎವಿಕೆ ಕಾಲೇಜು ರಸ್ತೆ ಮಾರ್ಗವಾಗಿ ರಾಂ ಅಂಡ್ ಕೋ ಸರ್ಕಲ್, ಅರುಣ ಚಿತ್ರಮಂದಿರ ವೃತ್ತದ ಮೂಲಕ ಶ್ರೀ ಸತ್ಯಸಾಯಿ ಮಂದಿರ ತಲುಪಿತು.ಈ ಸಂದರ್ಭದಲ್ಲಿ ಕರ್ನಾಟಕ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ (ಎಜುಕೇರ್ ವಿಭಾಗ) ಜಗನ್ನಾಥ ನಾಡಿಗೇರ್ ಮಾತನಾಡಿ, ಇಂದು ಸಮಾಜ, ಮಾನವ ಜನಾಂಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದರೆ ಪರಸ್ಪರ ಎಲ್ಲರನ್ನೂ ಪ್ರೀತಿಸುವುದು. ಪ್ರೇಮದ ಸಂದೇಶವನ್ನು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರು ನಮಗೆಲ್ಲರಿಗೂ ನೀಡಿದ್ದಾರೆ. ಅವರ ಜೀವನದಲ್ಲಿ ಅವರು ಆ ಪ್ರೇಮವನ್ನು ನಮ್ಮ ಜೀವನದಲ್ಲಿ ಆಚರಣೆ ರೂಪದಲ್ಲಿ ತಂದರು ಎಂದು ಹೇಳಿದರು.
ನಾವೆಲ್ಲರೂ ಸೋದರ, ಸೋದರಿಯರು ಎನ್ನುವ ಭಾವನೆ ಬೆಳೆಸಿಕೊಂಡಾಗ ನಮ್ಮಲ್ಲಿ ಯಾವುದೇ ರೀತಿಯ ಸಮಸ್ಯೆಗಳು, ಘರ್ಷಣೆಗಳು ಇರುವುದಿಲ್ಲ. ಎಲ್ಲ ಸಮಸ್ಯೆಗಳಿಗೆ ಪ್ರೇಮವೇ ಪರಿಹಾರ. ಹಾಗಾಗಿಯೇ ಈ ರಥಕ್ಕೆ ಪ್ರೇಮ ಪ್ರವಾಹಿನಿ ಎಂದು ಹೆಸರು ಇಟ್ಟಿದ್ದಾರೆ. ಆ ಪ್ರೇಮವನ್ನು ಎಲ್ಲರೂ ಬೆಳೆಸಿಕೊಳ್ಳಿರಿ ಎಂದು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರು ನಮಗೆ ತಿಳಿಸಿದ್ದಾರೆ. ಅದರಂತೆ ನಾವು ನೀವೆಲ್ಲರೂ ಬಾಳೋಣ ಎಂದರು.ಸಂಜೆಯಿಂದ ಶ್ರೀ ಸತ್ಯಸಾಯಿ ಪಾದುಕಾ ಪೂಜೆ, ಭಜನೆ ಕಾರ್ಯಕ್ರಮಗಳು ನಡೆದವು, ಈಶ್ವರಮ್ಮ ಶಾಲಾ ಬಾಲವಿಕಾಸ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಹಸ್ರಾರು ಭಕ್ತರು ಭಾಗವಹಿಸಿ ಸ್ವಾಮಿಯ ಪಾದುಕೆ ದರ್ಶನ ಪಡೆದರು.
ಕರ್ನಾಟಕ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ವೆಂಕಟರಮಣ ಗೋಸಾಯಿ, ಸೇವಾ ವಿಭಾಗದ ರಾಜ್ಯ ಸಂಯೋಜಕರಾದ ರಾಜಶೇಖರ ರೆಡ್ಡಿ, ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷ ರಾಜಕುಮಾರ, ದಾವಣಗೆರೆ ಜಿಲ್ಲೆಯ ಸತ್ಯಸಾಯಿ ಸೇವಾ ಸಮಿತಿಯ ರಥಯಾತ್ರೆಯ ಜಿಲ್ಲಾ ಉಸ್ತುವಾರಿ ಸಾಯಿನಾಥ ಪ್ರಸಾದ, ಸಂಚಾಲಕ ಪಾಂಡುರಂಗ ರಾವ್, ಈಶ್ವರಮ್ಮ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಶ್ರೀ ಸತ್ಯಸಾಯಿ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.