ಸಾರಾಂಶ
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ಕಳೆದ ಸೋಮವಾರ ಬಸವನಬಾಗೇವಾಡಿಯಿಂದ ಆರಂಭಗೊಂಡು ಅ.1ವರೆಗೆ ರಾಜ್ಯಾದ್ಯಂತ ಸಾಗಿರುವ ಬಸವ ಸಂಸ್ಕೃತಿ ಅಭಿಯಾನವು ಶುಕ್ರವಾರ ರಾಯಚೂರು ನಗರಕ್ಕೆ ಆಗಮಿಸಿತು.
ಕನ್ನಡಪ್ರಭ ವಾರ್ತೆ ರಾಯಚೂರು
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ಕಳೆದ ಸೋಮವಾರ ಬಸವನಬಾಗೇವಾಡಿಯಿಂದ ಆರಂಭಗೊಂಡು ಅ.1ವರೆಗೆ ರಾಜ್ಯಾದ್ಯಂತ ಸಾಗಿರುವ ಬಸವ ಸಂಸ್ಕೃತಿ ಅಭಿಯಾನವು ಶುಕ್ರವಾರ ರಾಯಚೂರು ನಗರಕ್ಕೆ ಆಗಮಿಸಿತು.ಬೆಳಗ್ಗೆ ಸ್ಥಳೀಯ ಗಂಜ್ ವೃತ್ತದಲ್ಲಿ ಅಭಿಯಾನಕ್ಕೆ ಅದ್ದೂರಿ ಸ್ವಾಗತ ಕೋರಿ ಗಂಜ್ ಕಲ್ಯಾಣ ಮಟಪದಲ್ಲಿ ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಲಾಯಿತು. ನಂತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ರೊಂದಿಗೆ ಮುಕ್ತ ಸಂವಾದ ನಡೆಯಿತು.
ಈ ವೇಳೆ ಮಾತನಾಡಿ ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯರು, ಎಲ್ಲರೂ ಬಾಹ್ಯ ಸಂಪತ್ತಿನ ಹಿಂದೆ ಬಿದ್ದಿದ್ದು ಅದನ್ನು ಬಿಟ್ಟು ಜ್ಞಾನ ಸಂಪತ್ತನ್ನು ವೃದ್ಧಿಸಿಕೊಳ್ಳುವುದರ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಇದರಿಂದ ಮರೆಯಾಗುತ್ತಿರುವ ಆತ್ಮಮ ಹಾಗೂ ಲೋಕ ಕಲ್ಯಾಣದ ಜ್ಞಾನವು ಪ್ರಾಪ್ತಿಯಾಗಲಿದೆ. ಇಂದು ಬಸವಣ್ಣ ಅವರು ಕೇವಲ ಆಯ್ದವರಿಗೆ ಗುರುವಲ್ಲ. ಅವರು ಇಡೀ ವಿಶ್ವ ಗುರು ವಾಗಿದ್ದಾರೆ. ಸಾರ್ವಜನಿಕರಲ್ಲಿ ಅದರಲ್ಲಿಯೂ ಮುಖ್ಯವಾಗಿ ಮಕ್ಕಳಲ್ಲಿ ಬಸವಣ್ಣ ನವರ ಜೀವನ ಸಾಧನೆ ಹಾಗೂ ಸಂದೇಶಗಳನ್ನು ಬಿತ್ತುವ ಕೆಲಸವನ್ನು ಮಾಡುತ್ತಿದ್ದು ಅದರ ಭಾಗವಾಗಿಯೇ ಈ ಅಭಿಯಾನವನ್ನು ರೂಪಿಸಲಾಗಿದೆ ಎಂದರು.ಸಾಮರಸ್ಯ ನಡಿಗೆ: ಸಂಜೆ ನಗರದ ಬಸವೇಶ್ವರ ವೃತ್ತದಿಂದ ಗಂಜ್ ಕಲ್ಯಾಣ ಮಂಟಪದವರೆಗೂ ಜರುಗಿದ ಸಾಮರಸ್ಯದ ನಡಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಬಳಿಕ ನಡೆದ ಧರ್ಮ ಸಭೆಯಲ್ಲಿ ಹತ್ತು ಹಲವು ವಿಚಾರಗಳನ್ನು ವಿವಿಧ ಮಠಾಧೀಶರು, ಗಣ್ಯರು ತಿಳಿಸಿದರು.
ನಂತರ ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿತ ಜಂಗಮದೆಡೆಗೆ ನಾಟಕವನ್ನು ಪ್ರಸ್ತುತಪಡಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಬಾಲ್ಕಿಯ ಡಾ.ಬಸವಲಿಂಗ ಪಟ್ಟದೇವರು, ವಿವಿಧ ಮಠಗಳ ಗುರುಬಸವ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಚಿಕ್ಕಸುಗೂರು ಚೌಕಿ ಮಠದ ಸಿದ್ದಲಿಂಗ ಸ್ವಾಮಿ, ಶಾಸಕರಾದ ಡಾ.ಶಿವರಾಜ ಪಾಟೀಲ್, ಹಂಪನಗೌಡ ಬಾದರ್ಲಿ, ಮುಖಂಡರಾದ ರವಿ ಬೋಸರಾಜು, ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ವೆಂಕಟರಾವ್ ನಾಡಗೌಡ, ಕೆ.ಶಾಂತಪ್ಪ, ಡಾ.ಬಸವರಾಜ ಸಾದರ,ರಾಚನಗೌಡ ಕೋಳೂರು ಸೇರಿ ಜನಪ್ರತಿನಿಧಿಗಳು, ಸಮಾಜದ ಮುಖಂಡರು ಭಾಗವಹಿಸಿದ್ದರು.