ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಅದ್ಧೂರಿ ಸ್ವಾಗತ

| Published : Feb 13 2024, 12:45 AM IST

ಸಾರಾಂಶ

ಕನಕಗಿರಿ ತಾಲೂಕಿನಿಂದ ಕಾರಟಗಿ ತಾಲೂಕಿನ ಸೋಮನಾಳಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ರಥ ಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು. ಅಧಿಕಾರಿಗಳು, ಜನಪ್ರತಿನಿಧಿಗಳು ಪುಷ್ಪಾರ್ಚನೆ ಮಾಡಿದರು.

ಕಾರಟಗಿ: ದೇಶದ ಸಂವಿಧಾನ ಅಂಗೀಕಾರಗೊಂಡು ೭೫ ವರ್ಷ ಪೂರೈಸಿದ ಹಿನ್ನೆಲೆಗೆ ರಾಜ್ಯಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ಸೋಮವಾರ ಸಂಜೆ ಕನಕಗಿರಿ ತಾಲೂಕಿನಿಂದ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಪಂ ವ್ಯಾಪ್ತಿಯ ಸೋಮನಾಳಕ್ಕೆ ಅಧಿಕೃತವಾಗಿ ಆಗಮಿಸಿದ್ದು, ತಾಲೂಕು ಆಡಳಿತ ಮತ್ತು ತಾಪಂ ಅಧಿಕಾರಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು.

ಸೋಮನಾಳ ಗ್ರಾಮದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಸಮೂಹ ಸಂವಿಧಾನ ಜಾಗೃತಿ ಜಾಥಾ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಹಾಗೂ ತಾಪಂ ಸಹಾಯಕ ನಿರ್ದೇಶಕಿ ವೈ. ವನಜಾ ಪುಷ್ಪಾರ್ಪಣೆ ಮಾಡಿ ಗೌರವಿಸಿದರು. ಆನಂತರ ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಬೋಧಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಸೋಮನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಮಕ್ಕಳು ಸೇರಿದಂತೆ ಜಾಥಾ ಮೆರವಣಿಗೆಯಲ್ಲಿನ ಕಲಾ ತಂಡಗಳಾದ ಡೊಳ್ಳು ಕುಣಿತ, ರಾಮ, ಲಕ್ಷ್ಮಣ, ಸೀತೆ, ಆಂಜನೇಯ, ದುರ್ಯೋಧನ, ಅರ್ಜುನ, ರಾವಣನ ಹಗಲು ವೇಷಧಾರಿಗಳ ನೃತ್ಯ, ಕುಂಭ ಕಳಸ ಹೊತ್ತ ಮಹಿಳೆಯರು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರು ಸೇರಿದಂತೆ ಸಂವಿಧಾನ ಬರೆದ ಡಾ. ಬಿ.ಆರ್. ಅಂಬೇಡ್ಕರ್‌ ಅವರ ವೇಷಭೂಷಣಗಳ ನೋಡುಗರ ಗಮನ ಸೆಳೆಯುತ್ತಿತ್ತು. ವೇಷ ಬೂಷಣಗಳನ್ನು ಧರಿಸಿದ ಶಾಲಾ ಮಕ್ಕಳು, ಕಾರ್ಯಕ್ರಮಕ್ಕೆ ಮೆರಗು ತಂದರು.

ಸೋಮನಾಳ ಗ್ರಾಮದ ಮುಖ್ಯ ರಸ್ತೆ ಮಾರ್ಗವಾಗಿ ಗುಡೂರು, ಮೈಲಾಪುರ ಗ್ರಾಮಕ್ಕೆ ತೆರಳಿದ ಸಂವಿಧಾನ ಜಾಗೃತಿ ರಥವನ್ನು ತಾಪಂ ಇಒ ಲಕ್ಷ್ಮೀದೇವಿ ಅವರು ಗ್ರಾಮಸ್ಥರು, ಶಾಲಾ ಮಕ್ಕಳೊಂದಿಗೆ ಸ್ವಾಗತಿಸಿದರು. ಗ್ರಾಪಂ ಅಧಿಕಾರಿಗಳು ಸಂವಿಧಾನ ಪ್ರಸ್ತಾವನೆ ಬೋಧಿಸಿದರು.

ಗ್ರಾಪಂ ಗ್ರಾಮ ಅಧ್ಯಕ್ಷರು, ಸದಸ್ಯರು, ಕಂದಾಯ ಇಲಾಖೆ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇನ್ನಿತರ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘಟನೆಗಳು ಪ್ರಮುಖರು ಭಾಗಿಯಾಗಿದ್ದರು.

ಜಾಗೃತಿ ರಥ ಸೋಮವಾರ ತಾಲೂಕಿನ ಚೆಳ್ಳೂರು, ಬೇವಿನಾಳ, ಬೂದುಗುಂಪಾ ಗ್ರಾಮಗಳಲ್ಲಿ ಸಂಚರಿಸಿ ಕಾರಟಗಿ ಪಟ್ಟಣದಲ್ಲಿ ವಾಸ್ತವ್ಯ ಹೂಡಿತು.