ಕನ್ನಡ ಜ್ಯೋತಿ ರಥಯಾತ್ರೆಗೆ ಭವ್ಯ ಸ್ವಾಗತ

| Published : Dec 30 2023, 01:15 AM IST

ಸಾರಾಂಶ

ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣವಾಗಿ ಇಲ್ಲಿಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ವರ್ಷಪೂರ್ತಿ ಕನ್ನಡ ಹಬ್ಬ ಆಚರಣೆ ಮಾಡುತ್ತಿರುವ ಕಾರಣ ಹತ್ತಿಗೂಡುರಿನಿಂದ ಮನಮುಟಗಿ ಮಾರ್ಗವಾಗಿ ಹಯ್ಯಾಳ ಗ್ರಾಮಕ್ಕೆ ಆಗಮಿಸಿದ ಕನ್ನಡ ರಥಕ್ಕೆ ವಡಗೇರಾ ತಾಲೂಕು ಆಡಳಿತದಿಂದ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣವಾಗಿ ಇಲ್ಲಿಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ವರ್ಷಪೂರ್ತಿ ಕನ್ನಡ ಹಬ್ಬ ಆಚರಣೆ ಮಾಡುತ್ತಿರುವ ಕಾರಣ ಹತ್ತಿಗೂಡುರಿನಿಂದ ಮನಮುಟಗಿ ಮಾರ್ಗವಾಗಿ ಹಯ್ಯಾಳ ಗ್ರಾಮಕ್ಕೆ ಆಗಮಿಸಿದ ಕನ್ನಡ ರಥಕ್ಕೆ ವಡಗೇರಾ ತಾಲೂಕು ಆಡಳಿತದಿಂದ ಸ್ವಾಗತಿಸಲಾಯಿತು.

ಈ ವೇಳೆ ಮಾತನಾಡಿದ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್ ಅವರು, ನಮ್ಮ ನಾಡು-ನುಡಿ, ಭಾಷೆ, ಸಂಸ್ಕೃತಿ ಅತ್ಯಂತ ಶ್ರೀಮಂತವಾದದ್ದು, ನಾವೆಲ್ಲರು ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಭಾಷೆಯನ್ನು ಬೆಳೆಸೋಣ. ನಾಡು-ನುಡಿ, ಜಲ ರಕ್ಷಣೆಗೆ ಪ್ರತಿಯೊಬ್ಬರೂ ಪಣತೋಡಬೇಕು ಎಂದರು.

ಕರ್ನಾಟಕ ಏಕೀಕರಣದಲ್ಲಿ ಹಲವಾರು ಮಹಾನ್ ನಾಯಕರ ಹೋರಾಟ, ತ್ಯಾಗ, ಬಲಿದಾನದಿಂದ ನಮ್ಮ ಕರ್ನಾಟಕ ಏಕೀಕರಣಗೊಂಡಿದೆ. ಹೋರಾಟಗಾರರ ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ಕಾರ್ಯಕ್ರಮದಲ್ಲಿ ಕವಿಗಳು, ಸಾಹಿತಿಗಳು, ಕನ್ನಡ ಪರ ಮತ್ತು ರೈತ ಪರ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಶಾಲಾ ಮಕ್ಕಳು, ಶಿಕ್ಷಕರು ಭಾಗವಹಿಸಿ ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ವಾದ್ಯಗಳೊಂದಿಗೆ ಹಯ್ಯಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಯ್ಯಾಳ ಪ್ರೌಢ ಶಾಲೆ ಮಕ್ಕಳ ವತಿಯಿಂದ ಕನ್ನಡ ರಥ ಮೆರವಣಿಗೆ ಜರುಗಿತು.

ವಡಗೇರಾ ತಾಲೂಕು ಪಂಚಾಯತ್ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ಸಿ‌ಡಿಪಿಓ ಮೀನಾಕ್ಷಿ ಪಾಟೀಲ್, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ನಿರ್ದೇಶಕಿ ಉತ್ತರಾದೇವಿ ಹಿರೇಮಠ, ಕಸಾಪ ವಡಗೇರಾ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಕರಿಕಳ್ಳಿ, ಕಸಾಪ ಹಯ್ಯಾಳ ಹೋಬಳಿ ಅಧ್ಯಕ್ಷ ಆನಂದ್ ಗೂಬ್ಬಿ, ಕೊಂಕಲ್ ವಲಯ ಅಧ್ಯಕ್ಷ ಮಲ್ಲಿಕಾರ್ಜುನ ಕಾವಲಿ‌, ಸಿದ್ದವೀರಪ್ಪ ಪೂಜಾರಿ, ಸಿಆರ್ ಪಿ ನಿಂಗಪ್ಪ ವರಕೇರಿ‌, ಮುಖ್ಯಗುರು ಶರಣಪ್ಪ ಅಥಣಿ, ಕರವೇ ಮುಖಂಡ ಅಬ್ದುಲ್ ಚಿಗಾನೂರ, ಚಂದ್ರಶೇಖರ್ ಸಾಹುಕಾರ ಸೇರಿದಂತೆ ಇತರರಿದ್ದರು.