ಸಾರಾಂಶ
ಹುಬ್ಬಳ್ಳಿ: ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ನಗರದ ವಿವಿಧ ರಾಯರ ಮಠಗಳಲ್ಲಿ ಭಾನುವಾರ ಅದ್ಧೂರಿಯಾಗಿ ಆರಂಭಗೊಂಡಿತು.
ಆರಾಧನೆ ಮೊದಲ ದಿನ ಭಾನುವಾರ ಬೆಳಗ್ಗೆ ಭವಾನಿನಗರ ನಂಜನಗೂಡು ರಾಯರ ಮಠ, ತೊರವಿಗಲ್ಲಿ ರಾಯರ ಮಠ, ಕುಬೇರಪುರಂ ರಾಯರ ಮಠ, ನವನಗರ ರಾಯರ ಮಠ, ವಿದ್ಯಾನಗರದ ಪರಿಮಳ ಮಾರ್ಗದಲ್ಲಿನ ಶ್ರಿ ಗುರು ರಾಘವೇಂದ್ರ ಸ್ವಾಮಿಗಳ ಮಠ ಸೇರಿದಂತೆ ನಗರದ 12 ಮಠಗಳಲ್ಲಿ ಸುಪ್ರಭಾತ ಸೇವೆ ನಡೆಯಿತು.ಬಳಿಕ ಪಂಚಾಮೃತ ಅಭಿಷೇಕ, ಶ್ರೀರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ವಿದ್ವಾಂಸರಿಂದ ಪಾರಾಯಣ, ಕೆಲ ಮಠಗಳಲ್ಲಿ ಪಂಡಿತರಿಂದ ಪ್ರವಚನ ನಡೆಯಿತು. ಇದೇ ವೇಳೆ ರಾಯರ ಕೃತಿಗಳ ಪಾರಾಯಣವೂ ನಡೆಯಿತು.
ರಾಯರ ವೃಂದಾವನಕ್ಕೆ ಮೊದಲ ದಿನ ಮಾಡಲಾಗಿದ್ದ ವಿಶೇಷ ಅಲಂಕಾರ ಭಕ್ತರ ಗಮನ ಸೆಳೆಯಿತು. ಭವಾನಿ ರಾಯರ ಮಠದಲ್ಲಿ ವಿಶೇಷ ಕನಾಭಿಷೇಕ ಸೇರಿದಂತೆ ಸೇವೆ ಸಲ್ಲಿಸಲಾಯಿತು. ನಂತರ ನೈವೇದ್ಯೆ, ಅಲಂಕಾರ ಭೋಜನ, ಸಹಸ್ರಾರು ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆದವು.ಸಂಜೆ ಪಲ್ಲಕ್ಕಿ ಸೇವೆ, ಅಷ್ಟಾವಧಾನ, ಮಹಾಮಂಗಳಾರತಿ ಮತ್ತು ತೊಟ್ಟಿಲು ಸೇವೆ ನಡೆಯಿತು. ಈ ಸಂದರ್ಭದಲ್ಲಿ ವಿಚಾರಣಾಕರ್ತ ಎ.ಸಿ. ಗೋಪಾಲ, ವ್ಯವಸ್ಥಾಪಕರಾದ ವೇಣುಗೋಪಾಲಾಚಾರ್ಯ, ಅರ್ಚಕ ಗುರುರಾಜಾಚಾರ್ಯ ಸಾಮಗ, ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲ ಕುಲಕರ್ಣಿ, ಮಠಾಧಿಕಾರಿಗಳಾದ ರಾಘವೇಂದ್ರಾಚಾರ್ಯ, ಬಿಂದುಮಾಧವ ಪುರೋಹಿತ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಕುಸುಗಲ್ಲ ರಸ್ತೆಯ ರಾಯರ ಮಠದಲ್ಲಿ ಗುರುರಾಜಾಚಾರ್ಯ ಪುರಾಣಿಕ ಇವರ ನೇತೃತ್ವದಲ್ಲಿ ಮತ್ತು ವಿದ್ವಾನ್ ಪಂಢರಿನಾಥಾಚಾರ್ಯ ಗಲಗಲಿ ಅವರು ಸಂಸ್ಥಾಪಿಸಿದ ಶಾಂತಿ ಕಾಲೋನಿಯ ರಾಯರ ಮಠದಲ್ಲಿ ಆರಾಧನಾ ಮಹೋತ್ಸವ ನಡೆಯಿತು. ವಾಸುದೇವ ಗಲಗಲಿ, ಗುಡಬಲ್ಲ ವೆಂಕಟನರಸಿಂಹಾಚಾರ್ಯ ಜೋಶಿ, ವಿಷ್ಣುತೀರ್ಥ ಕಲ್ಲೂರಕರ, ಜಕಾತಿ, ಅರುಣ ಓರಣಕರ, ರಾಘವೇಂದ್ರ ಕುಲಕರ್ಣಿ ಪಾಲ್ಗೊಂಡಿದ್ದರು.ಗೋಪೂಜೆ, ಪಂಚರಾತ್ರೋತ್ಸವಕ್ಕೆ ನಾಂದಿ
ಶನಿವಾರ ಗೋಧೂಳಿ ಸಮಯದಲ್ಲಿ ಐದು ದಿನಗಳವರೆಗೆ ನಡೆಯುವ ರಾಯರ ಆರಾಧನೆಗೆ ಗೋಪೂಜೆ ಮೂಲಕ ಚಾಲನೆ ನೀಡಲಾಯಿತು. ಧ್ವಜಾರೋಹಣ ಕಾರ್ಯಕ್ರಮದ ಜತೆಗೆ ಭಜನಾ ಮಂಡಳಿಗಳಿಂದ ಶೋಭಾನ, ಋಗ್ವೇದಿ ಮತ್ತು ಯಜುರ್ವೇದಿಗಳ ನೂತನ ಉಪಾಕರ್ಮ ಕಾರ್ಯಕ್ರಮಗಳು ನಡೆದವು. ಇದರಲ್ಲಿ ವಿಪ್ರ ಬಂಧುಗಳ ಪಾಲ್ಗೊಂಡು ರಾಯರ ಆರಾಧನೆಯಲ್ಲಿ ತೊಡಗಿದ್ದು ಕಂಡುಬಂದಿತು.----
10ಎಚ್‌ಯುಬಿ23ಭವಾನಿ ನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಾಧನಾ ಮಹೋತ್ಸವ ನಿಮಿತ್ತ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
10ಎಚ್‌ಯುಬಿ24ವಿಶ್ವೇಶ್ವರ ನಗರದ ರಾಯರ ಮಠದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
10ಎಚ್‌ಯುಬಿ25ವಿದ್ಯಾನಗರದ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಮಾಡಿದ್ದ ಅಲಂಕಾರ ಗಮನಸೆಳೆಯುವಂತಿತ್ತು.