ಸಿಲಿಂಡರ್ ತುಂಬಿದ್ದ ಲಾರಿಗೆ ಗ್ರಾನೈಟ್ ಲಾರಿ ಡಿಕ್ಕಿ: ಹೊತ್ತಿ ಉರಿದ ಲಾರಿಗಳು

| Published : Dec 29 2024, 01:17 AM IST

ಸಾರಾಂಶ

ಸಿಎನ್​​ಜಿ ಗ್ಯಾಸ್ ಸಿಲೆಂಡರ್​ಗಳು ಸ್ಫೋಟಗೊಂಡು ಆವರಿಸಿದ ಬೆಂಕಿಯ ಕೆನ್ನಾಲಿಗೆ ನೂರು ಅಡಿ ಎತ್ತರ ಚಿಮ್ಮಿದ್ದು, ಸುತ್ತಮುತ್ತ ಇದ್ದ ಸ್ಥಳೀಯರು ಹಾಗೂ ವಾಹನ ಸವಾರರನ್ನು ಆತಂಕಕ್ಕೀಡು ಮಾಡಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಿಎನ್‌ಜಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಕ್ಯಾಂಟರ್‌ಗೆ ಗ್ರಾನೈಟ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಶುಕ್ರವಾರ ತಡರಾತ್ರಿ ತಾಲೂಕಿನ ಬೆಂಗಳೂರು- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಹುನೇಗಲ್ ಗ್ರಾಮದ ಬಳಿ ನಡೆದಿದೆ.

ಘಟನೆಯಲ್ಲಿ ಎರಡೂ ಲಾರಿಗಳ ಚಾಲಕರಾದ ನರಸಿಂಹಮೂರ್ತಿ ಹಾಗೂ ಮಾದಪ್ಪ ಎಂಬುವವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುನೇಗಲ್ ಬಳಿ ಯೂ ಟರ್ನ್ ಪಡೆಯಲು ನಿಂತಿದ್ದ ಮೇಘಾ ಸಿಎನ್​​ಜಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಕಂಪನಿಗೆ ಸೇರಿದ ಸಿಲಿಂಡರ್ ತುಂಬಿದ್ದ ಲಾರಿಗೆ, ಕಲ್ಲು ದಿಮ್ಮೆಗಳನ್ನು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸಿಎನ್​​ಜಿ ಗ್ಯಾಸ್ ಸಿಲಿಂಡರ್​​ಗಳು ಸ್ಫೋಟಗೊಂಡು ಲಾರಿಗಳೆರಡೂ ಹೊತ್ತಿ ಉರಿದಿವೆ.

ಸಿಎನ್​​ಜಿ ಗ್ಯಾಸ್ ಸಿಲೆಂಡರ್​ಗಳು ಸ್ಫೋಟಗೊಂಡು ಆವರಿಸಿದ ಬೆಂಕಿಯ ಕೆನ್ನಾಲಿಗೆ ನೂರು ಅಡಿ ಎತ್ತರ ಚಿಮ್ಮಿದ್ದು, ಸುತ್ತಮುತ್ತ ಇದ್ದ ಸ್ಥಳೀಯರು ಹಾಗೂ ವಾಹನ ಸವಾರರನ್ನು ಆತಂಕಕ್ಕೀಡು ಮಾಡಿತ್ತು.

ತಕ್ಷಣ ಚಿಕ್ಕಬಳ್ಳಾಪುರ ಹಾಗೂ ಬಾಗೇಪಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಿದರು.

ಘಟನೆಯಿಂದ ಬೆಂಗಳೂರು- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಕೆಲವು ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಪೊಲೀಸರು ಕ್ರೇನ್ ಮೂಲಕ ಹಾನಿಗೊಳಗಾದ ವಾಹನಗಳನ್ನು ರಸ್ತೆಬದಿಗೆ ಸರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.