ಕ್ಷೇತ್ರದ ಪ್ರತಿ ಗ್ರಾಪಂಗೂ ₹ 5 ಕೋಟಿ ಅನುದಾನ: ಶಿವರಾಜ ತಂಗಡಗಿ

| Published : Jun 24 2024, 01:33 AM IST

ಸಾರಾಂಶ

ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗೂ ೫ ಕೋಟಿ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುವುದು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಭೂಮಿಪೂಜೆ । ಮತದಾರರ ಋಣ ತೀರಿಸಲು ಆಗದು

ಕನ್ನಡಪ್ರಭ ವಾರ್ತೆ ಕನಕಗಿರಿ

ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗೂ ₹ ೫ ಕೋಟಿ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ನಾನಾ ಗ್ರಾಮಗಳಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಜೊತೆಗೆ ಹೆಚ್ಚು ಅನುದಾನ ತರುವ ಮೂಲಕ ಕ್ಷೇತ್ರಕ್ಕೆ ಮೂಲ ಸೌಲಭ್ಯ ಕಲ್ಪಿಸಲಾಗುವುದು. ಕನಕಗಿರಿಯಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳುವ ರಸ್ತೆಗಳು ದುರಸ್ತಿಗೊಂಡಿದ್ದು, ಅವುಗಳ ಸುಧಾರಣೆಗೆ ಹಂತ-ಹಂತವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಜೀರಾಳ ಗ್ರಾಮದಲ್ಲಿ ಕನಕ ಭವನ ನಿರ್ಮಾಣಕ್ಕೆ ₹೨೫ ಲಕ್ಷ, ಕನಕಾಪೂರದಲ್ಲಿ ಬೀರಲಿಂಗೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ₹೨೫ ಲಕ್ಷ, ಹಣವಾಳದಲ್ಲಿ ಶರಣಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ₹೨೫ ಲಕ್ಷ, ವಡಕಿ ಹಾಗೂ ಕನಕಾಪೂರದಲ್ಲಿ ಅಂಗನವಾಡಿ ಕಟ್ಟಡಕ್ಕೆ ₹೨೬.೯೬ ಲಕ್ಷ, ಗುಡದೂರು-ಕೆ. ಮಲ್ಲಾಪೂರಕ್ಕೆ ಬ್ರಿಡ್ಜಂ ಕಂ ಬ್ಯಾರೇಜ್ ನಿರ್ಮಾಣಕ್ಕೆ ₹೭.೨೪ ಕೋಟಿ, ಬೈಲಕ್ಕಂಪುರ ಗ್ರಾಮದಲ್ಲಿ ₹೧.೪ ಕೋಟಿ ಹಾಗೂ ಕನ್ನೇರಮಡು ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ₹೭೦ ಲಕ್ಷ ಒಟ್ಟು ೧೦.೨೪ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದ ಅವರು, ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.ಅರೇ ಹುಚ್ಚ ಎಂದು ನನ್ನನ್ನು ಬಿಜೆಪಿಯವರು ಕರೆಯುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಯಾರು ಅರೇ ಹುಚ್ಚ ಎಂಬುದನ್ನ ಜನ ತಿರ್ಮಾನ ಮಾಡಿದ್ದಾರೆ. ಅಸಭ್ಯವಾಗಿ ಮಾತನಾಡುವವರಿಗೆ ಜನರು ಪಾಠ ಕಲಿಸಿದ್ದಾರೆ. ವಿಪಕ್ಷದವರ ಮಾತಿಗೆ ಕಿವಿಗೊಡುವುದಿಲ್ಲ. ಅಭಿವೃದ್ಧಿಯೇ ನನ್ನ ಮಂತ್ರವಾಗಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಿವರಾಜ ತಂಗಡಗಿ ತಿಳಿಸಿದರು.

ಭರ್ಜರಿ ಸ್ವಾಗತ:

ಲೋಕಸಭಾ ಚುನಾವಣೆಯಲ್ಲಿ ಮತಗಳ ಲೀಡ್ ಪಡೆಯಲು ಸಾಧ್ಯವಾಗದಿದ್ದರೂ ಕನಕಗಿರಿ ಭಾಗದಲ್ಲಿ ಸಚಿವ ತಂಗಡಗಿ ವರ್ಚಸ್ಸು ಹೆಚ್ಚುತ್ತಿದೆ. ತಾಲೂಕಿನ ನಾನಾ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆಗೆಂದು ವಿವಿಧ ಗ್ರಾಮಗಳಿಗೆ ಭೇಟಿ ನೀಡಿದಾಗ ಪಕ್ಷದ ಕಾರ್ಯಕರ್ತರ ಜತೆಗೆ ತಂಗಡಗಿ ಅಭಿಮಾನಿಗಳು ಪಟಾಕಿ ಸಿಡಿಸಿ ಹಾರ ತೂರಾಯಿಗಳನ್ನು ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಸಚಿವರು, ೧೭ ವರ್ಷದ ರಾಜಕಾರಣದಲ್ಲಿ ನನ್ನನ್ನು ಮತದಾರರು ಕೈ ಬಿಟ್ಟಿಲ್ಲ. ಅವರ ಋಣ ತೀರಿಸಲು ಆಗದು. ಅವರ ಪ್ರೀತಿಗೆ ನಾನು ಅಭಾರಿ, ಜನರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.

ಈ ವೇಳೆ ಎಇಇ ವಿಜಯಕುಮಾರ, ಸಣ್ಣ ನೀರಾವರಿ ಇಲಾಖೆಯ ಸೆಲ್ಯೂ ಕುಮಾರ, ತಾಪಂ ಇಒ ಕೆ. ರಾಜಶೇಖರ, ಉಪ ತಹಸೀಲ್ದಾರ ವಿ.ಎಚ್. ಹೊರಪೇಟೆ, ಪಿಡಿಒಗಳಾದ ನಾಗಲಿಂಗಪ್ಪ ಪತ್ತಾರ, ಅಮರೇಶ ರಾಠೋಡ, ಕರಡೋಣ ಗ್ರಾಪಂ ಅಧ್ಯಕ್ಷ ಹಿರೇ ಹನುಮಂತಪ್ಪ ಮಂದಲಾರ, ಜೀರಾಳ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಬಸವರಾಜ ಕಟ್ಟಿಮನಿ, ಪ್ರಮುಖರಾದ ಗಂಗಾಧರಸ್ವಾಮಿ, ವೀರೇಶ ಸಮಗಂಡಿ, ಸಿದ್ದಪ್ಪ ನಿರ್ಲೂಟಿ, ರಮೇಶ ನಾಯಕ, ರಾಮನಗೌಡ ಬುನ್ನಟ್ಟಿ, ಬಸವಂತಗೌಡ, ಮಲಕನಗೌಡ, ಟಿ.ಜೆ. ರಾಮಚಂದ್ರ, ನಾಗರಾಜ ತಳವಾರ, ನಾಗಪ್ಪ ಹುಗ್ಗಿ, ನರಸಿಂಹ ನಾಯಕ, ಆಪ್ತ ಸಹಾಯಕ ವೆಂಕಟೇಶ ಗೋಡಿನಾಳ ಸೇರಿ ಇತರರು ಇದ್ದರು.