ಸಾರಾಂಶ
ಅಪಘಾತದಲ್ಲಿ ಮೃತಪಟ್ಟ ಪ್ರೀತಿಯ ಚಾರ್ಲಿಯನ್ನು ಅಂತ್ಯಸಂಸ್ಕಾರ ಮಾಡಿರುವ ಗೂಡಂಗಡಿಯ ಮಾಲೀಕ ಪ್ರಕಾಶ ಸುಣಗಾರ, ನಿತ್ಯವು ಆ ಸಮಾಧಿಗೆ ಪೂಜೆ ಮಾಡುತ್ತಾರೆ. ಆ ಬಳಿಕ ತಮ್ಮ ವ್ಯಾಪಾರ ಆರಂಭಿಸುತ್ತಾರೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಮೃತಪಟ್ಟ ಪ್ರೀತಿಯ ನಾಯಿಗೆ ಇಲ್ಲಿ ಸಮಾಧಿ, ನಿತ್ಯವೂ ಪೂಜೆ. ಪೂಜೆ ಇಲ್ಲದೇ ಗೂಡಂಗಡಿ ತೆರೆಯುವುದೇ ಇಲ್ಲ!
ಇದು ಇಲ್ಲಿನ ಕುಸುಗಲ್ ರಸ್ತೆಯಲ್ಲಿನ ಶ್ರೀದುರ್ಗಾಮಾತಾ ಕಾಲನಿ ಬಳಿ ರಸ್ತೆಯ ಬದಿಯ ಗೂಡಂಗಡಿಯ ಮಾಲೀಕ ಪ್ರಕಾಶ ಸುಣಗಾರ ತೋರಿರುವ ಶ್ವಾನ ಪ್ರೀತಿಯ ಪರಿ.ಪ್ರಕಾಶ ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನವರು. ಉದ್ಯೋಗ ಅರಸಿ ಹುಬ್ಬಳ್ಳಿಗೆ ಬಂದು ಆಟೋ ಚಾಲಕರಾಗಿರುವ ಪ್ರಕಾಶ, ರಸ್ತೆ ಬದಿ ಚಿಕ್ಕದಾದ ಚಹಾದಂಗಡಿ (ಗೂಡಂಗಡಿ) ಇಟ್ಟುಕೊಂಡಿದ್ದಾರೆ. ಇವರ ಪತ್ನಿ ಭಾರತಿ ಅದನ್ನು ನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ ಮೂವರು ಪುತ್ರರು.
ಮೂರು ವರ್ಷದ ಹಿಂದೆ ಹುಬ್ಬಳ್ಳಿಗೆ ಬಂದಾಗ ಅಪರಿಚಿತ ಹೆಣ್ಣು ನಾಯಿ ಇವರ ಅಂಗಡಿ ಬಳಿ ಬಂದಿದೆ. ಅದಕ್ಕೆ ಆಗಾಗ ಊಟ ಹಾಕುತ್ತಾ ಸಾಕಿದ್ದಾರೆ. ಅದು ಮನೆಯ ಸದಸ್ಯೆಯಂತಾಗಿದೆ. ಸದಾಕಾಲ ಇವರೊಂದಿಗೆ ಇರುತ್ತಿದ್ದ ಈ ನಾಯಿಗೆ "ಚಾರ್ಲಿ " ಎಂದು ಹೆಸರು ಕೂಡ ಇಟ್ಟಿದ್ದರು. ಒಂದು ಸಲ ಇವರ ಗುಡಿಸಲ ಬಳಿ ಸಣ್ಣದೊಂದು ಹಾವಿನ ಮರಿ ಬಂದಿತ್ತಂತೆ. ಅದನ್ನು ಈ ನಾಯಿಯೇ ಗುಡಿಸಲನೊಳಗೆ ಹೋಗಲು ಬಿಡದೇ ಅದನ್ನು ತನ್ನ ಕಾಲಿನಿಂದಲೇ ಬಡಿದು ಕೊಂದಿತ್ತಂತೆ.ಅಪಘಾತಕ್ಕೆ ಬಲಿ:
ಎರಡು ತಿಂಗಳ ಹಿಂದೆ ತಮ್ಮ ಚಹಾದಂಗಡಿ ಬಳಿ ನಿಲ್ಲಿಸಿದ್ದ ಪಾಲಿಕೆಯ ಕಸ ವಿಲೇವಾರಿ ಮಾಡುವ ಟಿಪ್ಪರ್ ಕೆಳಗೆ ಮಲಗಿತ್ತು. ಇದನ್ನು ಗಮನಿಸದ ಚಾಲಕ ಟಿಪ್ಪರ್ ಚಲಾಯಿಸಿದ ಪರಿಣಾಮ ಅದು ಅಲ್ಲೇ ಮೃತಪಟ್ಟಿದೆ. ಹೀಗೆ ಅಕಾಲಿಕ ಮೃತಪಟ್ಟಿದ್ದ ನಾಯಿಯ ಶವ ಕಂಡು ಪ್ರಕಾಶ ಕುಟುಂಬ ರೋದಿಸಿತ್ತು. ಮಕ್ಕಳು ಅದನ್ನು ನೆನಸಿಕೊಂಡು ಅಳುತ್ತಿರುವುದನ್ನು ನೋಡಿದ ಟಿಪ್ಪರ್ ಚಾಲಕ ಎಷ್ಟು ದುಡ್ಡು ಹೇಳಿ ಕೊಡುತ್ತೇನೆ ಎಂದು ಹೇಳಿದ್ದ. ಜತೆಗೆ ಸತ್ತಿರುವ ನಾಯಿಯ ಶವವನ್ನು ತೆಗೆದುಕೊಂಡು ಕಸದೊಂದಿಗೆ ಎಸೆಯುತ್ತೇನೆ ಎಂದು ಕೂಡ ತಿಳಿಸಿದ್ದನಂತೆ.ಆದರೆ, ಅದಕ್ಕೆ ಒಪ್ಪದ ಈ ದಂಪತಿ, ಟಿಪ್ಪರ್ ಚಾಲಕನ ಬಳಿ ದುಡ್ಡು ತೆಗೆದುಕೊಳ್ಳದೆ ಗೂಡಂಗಡಿಯ ಬಳಿ ತಾವೇ ತೆಗ್ಗು ತೋಡಿ ಹೂತು ಸಮಾಧಿ ಮಾಡಿದ್ದಾರೆ. ಆಗಿನಿಂದ ಪ್ರತಿನಿತ್ಯ ಈ ಸಮಾಧಿಗೆ ಮೊದಲು ಪೂಜೆ ಮಾಡಿಯೇ ತಮ್ಮ ಚಹಾದಂಗಡಿಯ ಬಾಗಿಲು ತೆಗೆದು ವ್ಯಾಪಾರ ಆರಂಭಿಸುತ್ತಾರೆ. ಇನ್ನು ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ಈ ಸಮಾಧಿಗೆ ಹೂವಿನ ಮಾಲೆ ಹಾಕಿ ಪೂಜೆ ಸಲ್ಲಿಸಲಾಗುತ್ತದೆ. ಇದರಿಂದ ವ್ಯಾಪಾರವೂ ಚೆನ್ನಾಗಿ ಆಗುತ್ತದೆ. ನಮಗೂ ಒಂದು ಬಗೆಯ ಖುಷಿ ಎಂದು ಪ್ರಕಾಶನ ಪತ್ನಿ ಭಾರತಿ ತಿಳಿಸುತ್ತಾರೆ.
ಈ ದಂಪತಿಯ ಶ್ವಾನ ಪ್ರೀತಿ ನೋಡಿ ಅಂಗಡಿ ಬರುವ ಜನರು ಕೂಡ ಮಮ್ಮಲ ಮರುಗುತ್ತಾರೆ.ಚಹಾದಂಗಡಿ ತೆರೆದಾಗಿನಿಂದಲೂ "ಚಾರ್ಲಿ " (ನಾಯಿ) ನಮ್ಮ ಬಳಿ ಬಂದಿತ್ತು. ಸಾಕಿ ಸಲುಹಿಸಿದ್ದೇವು. 2 ತಿಂಗಳ ಹಿಂದೆ ಅಚಾನಕ್ಕಾಗಿ ಮೃತಪಟ್ಟಿತು. ಅದಕ್ಕೆ ಪುಟ್ಟದಾದ ಸಮಾಧಿ ಮಾಡಿ ಪೂಜೆ ಸಲ್ಲಿಸುತ್ತಿದ್ದೇವೆ. ಹೀಗೆ ಮಾಡಿದರೆ ನಮಗೂ ಸಮಾಧಾನ. ವ್ಯಾಪಾರವೂ ಚೆನ್ನಾಗಿ ಆಗುತ್ತದೆ ಎಂದು ಅಂಗಡಿ ಮಾಲೀಕ ಪ್ರಕಾಶ ಸುಣಗಾರ ಹೇಳಿದರು.