ಅದ್ಧೂರಿ ಅಯೋಧ್ಯೆ ರಾಮ ಗಣಪತಿ ವಿಸರ್ಜನೆ

| Published : Oct 05 2024, 01:31 AM IST

ಸಾರಾಂಶ

ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ್ದ ಅಯೋಧ್ಯೆ ರಾಮ ಗಣಪತಿಯ ವಿಸರ್ಜನಾ ಮಹೋತ್ಸವವು ವಿವಿಧ ಜಾನಪದ ಕಲಾತಂಡಗಳೊಂದಿಗೆ ಶುಕ್ರವಾರ ವೈಭವದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ್ದ ಅಯೋಧ್ಯೆ ರಾಮ ಗಣಪತಿಯ ವಿಸರ್ಜನಾ ಮಹೋತ್ಸವವು ವಿವಿಧ ಜಾನಪದ ಕಲಾತಂಡಗಳೊಂದಿಗೆ ಶುಕ್ರವಾರ ವೈಭವದಿಂದ ಜರುಗಿತು.

ಬೆಳಿಗ್ಗೆ ೧೦.೪೫ಕ್ಕೆ ಶೋಭಾಯಾತ್ರೆಗೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮತ್ತು ಶ್ರೀ ವಿದ್ಯಾಗಣಪತಿ ಮಂಡಳಿ ಪದಾಧಿಕಾರಿಗಳು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಗುರುನಂಜಶೆಟ್ಟರ ಛತ್ರದ ಮುಂಭಾಗದಿಂದ ಆರಂಭಗೊಂಡ ವಿಸರ್ಜನಾ ಯಾತ್ರೆಯು ಕಡಕ್ ಮೊಹಲ್ಲಾ, ಡಾ.ಬಿ.ಆರ್.ಅಂಬೇಡ್ಕರ್ ಬೀದಿ, ಡಿವಿಯೇಷನ್ ರಸ್ತೆ, ದೇವಾಂಗ ೩ನೇ ಬೀದಿ, ನಾಗಪ್ಪಶೆಟ್ಟರ ಚೌಕ, ದೊಡ್ಡಂಗಡಿ ಬೀದಿ, ಗಾಡಿಪೇಟೆ ಚೌಕ, ಮೇಗಲ ನಾಯಕರ ಬೀದಿ, ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ, ನಾಗಪ್ಪಶೆಟ್ಟರ ಚೌಕ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ವೀರಮದಕರಿ ನಾಯಕರ ಬೀದಿ, ಶ್ರೀಭಗೀರಥ ಉಪ್ಪಾರ ಬಡಾವಣೆ, ಶ್ರೀಆದಿಶಕ್ತಿ ದೇವಸ್ಥಾನ, ಬಣಜಿಗರ ಬೀದಿ, ಭ್ರಮರಾಂಭ ೨ನೇ ಕ್ರಾಸ್, ಭ್ರಮರಾಂಭ ೧ನೇ ಕ್ರಾಸ್, ಕುರಬರಬೀದಿ, ಹಳ್ಳದಬೀದಿ, ಅಗ್ರಹಾರ, ನಗರಸಭಾ ಕಚೇರಿ ರಸ್ತೆ, ಚಾಮಾಲ್ ಬೀದಿ, ಶ್ರೀವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜೈನರ ಬೀದಿ, ಕೊಳದ ಬೀದಿ ಮುಖಾಂತರ ಹೊರಟು ಶ್ರೀ ದೊಡ್ಡರಸನ ಕೊಳದವರೆಗೆ ಸಾಗಿತು. ದೊಡ್ಡರಸನ ಕೊಳದಲ್ಲಿ ವಿಸರ್ಜನೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು,

ಮೆರವಣಿಗೆಯಲ್ಲಿ ನಾಸಿಕ್ ಡೊಳ್ಳು ಕುಣಿತ, ಮಹಿಳಾ ವೀರಗಾಸೆ, ಪುರುಷ ವೀರಗಾಸೆ, ಡೊಳ್ಳು ಕುಣಿತದ ಚಂಡೆವಾದ್ಯ, ಬ್ಯಾಂಡ್ ಸೆಟ್, ನೃತ್ಯ, ಕೀಳು ಮತ್ತು ಗಾರುಡಿ ಗೊಂಬೆಗಳು, ಮಂಗಳವಾದ್ಯ, ತಮಟೆ ನಗಾರಿ, ಕೇರಳದ ತೈಯಂ ನೃತ್ಯ, ಕಂಸಾಳೆ ತಂಡಗಳು ಮೆರವಣಿಗೆಗೆ ಮೆರುಗು ತಂದವು.

ಖಡಕ್ ಮೊಹಲ್ಲಾದಲ್ಲಿ ಗಣಪತಿ ಮೆರವಣಿಗೆಯು ಸಾಗಿ ಹೋಗುವಾಗ ಎಸ್ಪಿ ಡಾ.ಬಿ.ಟಿ.ಕವಿತಾ ನಿಂತು ಮೆರವಣಿಗೆ ಸುಗಮವಾಗಿ ಸಾಗಲು ಎಲ್ಲಾ ಸೂಚನೆಗಳನ್ನು ನೀಡಿದರು, ಯುವಪಡೆ ಕುಣಿದು ಕುಪ್ಪಳಿಸಿದರೆ, ಬಾವುಟಗಳು ಹುಡುಗರ ಕೈಯಲ್ಲಿ ರಾರಾಜಿಸಿದವು. ವಂದೇ ಮಾತರಂ ಜಯಘೋಷ ಮೊಳಗಿತು.

ಪೊಲೀಸ್ ಗಣಪತಿ ಎಂದು ಪ್ರಖ್ಯಾತಿ ಪಡೆದಿರುವ ಈ ಗಣಪತಿ ವಿಸರ್ಜನಾ ಯಾತ್ರೆಗೆ ಎಸ್ಪಿ ಡಾ.ಬಿ.ಟಿ.ಕವಿತಾ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿಸಲಾಗಿತ್ತು, ಸೂಕ್ಷ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಮಾಡಲಾಗಿತ್ತು. ಸುಮಾರು ೧೦೦೦ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತಿಗೆ ಆಯೋಜಿಸಲಾಗಿತ್ತು. ಹೊರ ಜಿಲ್ಲೆಗಳಿಂದಲೂ ಪೊಲೀಸ್ ತಂಡಗಳನ್ನು ಕರೆಸಲಾಗಿತ್ತು,

ಶೋಭಾಯಾತ್ರೆಯ ಅಂಗವಾಗಿ ಅಲ್ಲಲ್ಲಿ ಪ್ರಸಾದ ವಿನಿಯೋಗ ನಡೆಯಿತು. ಬೆಳಿಗ್ಗೆ ೬ ಗಂಟೆಯಿಂದ ಅ.೫ರ ಬೆಳಿಗ್ಗೆ ೬ ರವರೆಗೆ ಮೆರವಣಿಗೆಯ ಮಾರ್ಗದಲ್ಲಿ ಹಾಗೂ ಚಾಮರಾಜನಗರ ಪಟ್ಟಣದ ಅನುಮತಿ ಪಡೆದ ಸ್ಥಳಗಳನ್ನು ಹೊರತುಪಡಿಸಿ ಇತರೆ ಕಡೆಗಳಲ್ಲಿ ಫ್ಲವರ್ ಬ್ಲಾಸ್ಟಿಂಗ್, ಪೇಪರ್ ಬ್ಲಾಸ್ಟಿಂಗ್, ಪಟಾಕಿ, ಎಲೆಕ್ಟ್ರಿಕ್‌ ಸ್ಪಾರ್ಕರ್ ಇತ್ಯಾದಿ ಸ್ಫೋಟಕಗಳನ್ನು ನಿಷೇಧಿಸಿ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದರು.

ನಗರಸಭಾ ಅಧ್ಯಕ್ಷ ಸುರೇಶ್‌, ಉಪಾಧ್ಯಕ್ಷೆ ಮಮತಾ, ಸದಸ್ಯರು, ಶ್ರೀ ವಿದ್ಯಾ ಗಣಪತಿ ಮಂಡಳಿ ಅಧ್ಯಕ್ಷ ಸುಂದರರಾಜು ಹಾಗೂ ಪದಾಧಿಕಾರಿಗಳು, ಬಾಲಸುಬ್ರಹ್ಮಣ್ಯಂ, ಸುರೇಶ್‌ನಾಯಕ, ಮಹದೇವನಾಯಕ, ಬಂಗಾರಸ್ವಾಮಿ, ಗಣೇಶ್‌ದೀಕ್ಷಿತ್, ಮಂಜುನಾಥಗೌಡ, ಶಿವಣ್ಣ, ಕೃಷ್ಣಪ್ಪ, ಶ್ರೀಕಂಠು, ಭಜರಂಗದಳ ಸೇರಿದಂತೆ ನಾನಾ ಸಂಘಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.