ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಇಂದು ನಮಗೆ ಸ್ವಾತಂತ್ರ್ಯ ತಂದು ಕೊಟ್ಟ ಹುತಾತ್ಮರಿಗೆ ಮತ್ತು ಮಹಾನ್ ನಾಯಕರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಸ್ವಾತಂತ್ರ್ಯ ಹೋರಾಟ ನಡೆದು ಬಂದ ದಾರಿಯನ್ನು ಹಾಗೂ ಅದರ ಏಳು ಬೀಳುಗಳನ್ನು ಸ್ಮರಿಸುತ್ತಾ, ದೇಶದ ಉಜ್ವಲ ಭವಿಷ್ಯಕ್ಕಾಗಿ ಕನಸು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹತ್ವದ ಘಟನೆಗಳನ್ನು ಮತ್ತು ಮುಖ್ಯ ಆಶಯಗಳನ್ನು ನಾವು ಸ್ಮರಿಸಬೇಕು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.ನಗರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 78 ನೇ ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ,ಪಥಸಂಚಲನ ವೀಕ್ಷಿಸಿದನಂತರ ಮಾತನಾಡಿ,ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಾಯಕರ ಆಶಯಗಳು ಮತ್ತು ಕನಸುಗಳನ್ನು ನನಸಾಗಿಸಲು ನಾವೆಲ್ಲರೂ ಸಂಕಲ್ಪ ಮಾಡಿ ಮುನ್ನಡೆಯಬೇಕು ಎಂದರು.ತ್ಯಾಗ, ಬಲಿದಾನದ ಫಲ ಸ್ವಾತಂತ್ರ್ಯ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತರಲು ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರಬೋಸ್, ಬಾಲಗಂಗಾಧರ ತಿಲಕ್, ಸೇರಿದಂತೆ ಅಸಂಖ್ಯಾತ ಹೋರಾಟಗಾರರು ತಮ್ಮ ತನು, ಮನ, ಧನಗಳನ್ನು ಮಾತ್ರವಲ್ಲದೆ ಇಡೀ ಜೀವನವನ್ನೇ ಅರ್ಪಿಸಿದ್ದಾರೆ. ಅವರೆಲ್ಲರ ಶ್ರಮದಿಂದಾಗಿ ನಾವಿಂದು ಗುಲಾಮಗಿರಿ ಸಂಸ್ಕೃತಿಯಿಂದ ಹೊರಬಂದಿದ್ದೇವೆ. ಭಾರತದ ಉಕ್ಕಿನ ಮನುಷ್ಯ ಸರದಾರ್ ವಲ್ಲಬಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹನೀಯರ ಹೆಸರನ್ನು ಸ್ಮರಿಸಬೇಕಾಗಿದೆ. ನಮ್ಮ ಪೂರ್ವಜರ ಇತಿಹಾಸವನ್ನು ಗೌರವಿಸುತ್ತಾ. ಈ ಕ್ಷಣದ ಸಾತಂತ್ರ್ಯವನ್ನು ಅನುಭವಿಸುತ್ತಾ ನಮ್ಮ ಮುಂದಿನ ಪೀಳಿಗೆಗಾಗಿ ಭವ್ಯ ಭವಿಷ್ಯವನ್ನು ರೂಪಿಸೋಣವೆಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಕೊಡುಗೆಸ್ವಾತಂತ್ರ್ಯ ಸಂಗ್ರಾಮದ ಆಂದೋಲನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯೂ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ್ದು, ಕರ್ನಾಟಕದ ಜಲಿಯನ್ ವಾಲಾಬಾಗ್ ಎಂಬ ಖ್ಯಾತಿಯ ವಿದುರಾಶ್ವತ್ಥ. ಜಿಲ್ಲೆಯು ಅನೇಕ ಧೀಮಂತ ವ್ಯಕ್ತಿಗಳಿಗೆ ಜನ್ಮ ನೀಡಿದ್ದು, ಈ ಪೈಕಿ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಡಾ. ಸಿಎನ್‌ಆರ್ ರಾವ್ ಅವರುಗಳು ಭಾರತರತ್ನ ಪ್ರಶಸ್ತಿಗೆ ಭಾಜನರಾಗಿರುವುದು ಜಿಲ್ಲೆಯೇ ಹೆಮ್ಮೆ ಪಡುವಂತಹ ಸಂಗತಿ. ಡಾ. ಎಚ್. ನರಸಿಂಹಯ್ಯನವರ ಸ್ಮರಣಾರ್ಥ ಅವರ ಹುಟ್ಟೂರಾದ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹೊಸೂರಿನಲ್ಲಿ ''''''''ಅಂತರಾಷ್ಟ್ರೀಯ ವಿಜ್ಞಾನ ಕೇಂದ್ರ''''''''ವನ್ನು ಸ್ಥಾಪಿಸುವ ಸುಮಾರು 10 ಕೋಟಿ ವೆಚ್ಚದ ಯೋಜನೆಯು ಪ್ರಗತಿಯಲ್ಲಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ದಾಪುಗಾಲುಚಿಕ್ಕಬಳ್ಳಾಪುರ ಜಿಲ್ಲೆಯು 2007ರಲ್ಲಿ ರೂಪಗೊಂಡರೂ ಸಹ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚಿಗೆ ತನ್ನದೇ ಆದಂತಹ ದಾಪುಗಾಲು ಇಟ್ಟಿರುವುದನ್ನು ನಾವು ಇಂದು ಗಮನಿಸಬಹುದಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಅರೂರು ಬಳಿ ಸರ್ಕಾರಿ ಮೆಡಿಕಲ್ ಕಾಲೇಜು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಮುದ್ದೇನಹಳ್ಳಿ ಹಾಗೂ ಚಿಂತಾಮಣಿಯಲ್ಲಿ ತಲಾ ಒಂದೊಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ನಡೆಯುತ್ತಿವೆ ಎಂದು ತಿಳಿಸಿದರು.
ಈ ವೇಳೆ ಜಾನಪದ ಅಕಾಡಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್.ಜಿ.ಟಿ.ನಿಟ್ಟಾಲಿ, ಎಸ್ ಪಿ ಕುಶಾಲ್ ಚೌಕ್ಸೆ, ಡಿಸಿಎಫ್ಓ ರಮೇಶ್, ಡಿಹೆಚ್ಓ ಡಾ.ಎಸ್.ಎಸ್.ಮಹೇಶ್ ಕುಮಾರ್,ಎಎಸ್ ಪಿ ರಾಜಾ ಇಮಾಂ ಖಾಸೀಂ, ಮತ್ತಿರರು ಇದ್ದರು.