ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ಘಟ್ಟ

| Published : Jun 15 2024, 01:04 AM IST

ಸಾರಾಂಶ

ಮಾಗಡಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ಘಟ್ಟ, ಅದನ್ನು ಯಶಸ್ವಿಯಾಗಿ ಎದುರಿಸಬೇಕು ಎಂದು ಕನ್ನಡಪ್ರಭ ದಿನ ಪತ್ರಿಕೆ ಪ್ರಸರಣಾ ವ್ಯವಸ್ಥಾಪಕ ಮಂಜುನಾಥ್ ಹೇಳಿದರು.

ಮಾಗಡಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ಘಟ್ಟ, ಅದನ್ನು ಯಶಸ್ವಿಯಾಗಿ ಎದುರಿಸಬೇಕು ಎಂದು ಕನ್ನಡಪ್ರಭ ದಿನ ಪತ್ರಿಕೆ ಪ್ರಸರಣಾ ವ್ಯವಸ್ಥಾಪಕ ಮಂಜುನಾಥ್ ಹೇಳಿದರು.

ಪಟ್ಟಣದ ರಂಗನಾಥಸ್ವಾಮಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ದಿನಪತ್ರಿಕೆಯ ವಿದ್ಯಾರ್ಥಿ ಮಿತ್ರ ಸಂಚಿಕೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶೈಕ್ಷಣಿಕ ಭವಿಷ್ಯದ ಭದ್ರ ಬುನಾದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವುದು ಅತಿ ಮುಖ್ಯ. ಯಾವುದೇ ಉದ್ಯೋಗಕ್ಕೆ ಸೇರುವ ವೇಳೆ 10ನೇ ತರಗತಿಯಲ್ಲಿ ಗಳಿಸಿರುವ ಅಂಕಗಳನ್ನು ಪರಿಶೀಲಿಸುವರು. ಆದ್ದರಿಂದ ವಿದ್ಯಾರ್ಥಿಗಳು ಶ್ರಮ ಹಾಕಿ ಓದುವುದು ಅಗತ್ಯ. ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಕನ್ನಡಪ್ರಭ ದಿನಪತ್ರಿಕೆ ವಿದ್ಯಾರ್ಥಿ ಮಿತ್ರ ಸಂಚಿಕೆ ಹೊರ ತಂದಿದೆ ಎಂದರು.

ವಿದ್ಯಾರ್ಥಿ ಮಿತ್ರ ಸಂಚಿಕೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿಷಯಗಳನ್ನು ಪ್ರಕಟಿಸಲಾಗುತ್ತದೆ. ಹಿಂದಿನ ವರ್ಷದ ಪ್ರಶ್ನೆಪತ್ರಿಕೆ ಅದರ ಉತ್ತರಗಳು, ಸಾಮಾನ್ಯ ಜ್ಞಾನ, ಗಣಿತ, ವಿಜ್ಞಾನ, ಸಾಮಾಜ ಪಾಠ, ಹಿಂದಿ, ಇಂಗ್ಲಿಷ್ ಭಾಷೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸರಳ ಉತ್ತರ ನೀಡುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ಮಿತ್ರ ಸಂಚಿಕೆ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಮಂಜುನಾಥ್ ಹೇಳಿದರು.

ವಿದ್ಯಾರ್ಥಿ ಮಿತ್ರ ಸಂಚಿಕೆ ಪ್ರಾಯೋಜಕತ್ವದ ಗೌಡರಪಾಳ್ಯ ಧನಂಜಯ್ಯ ಮಾತನಾಡಿ, ಇಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ವರ್ಧೆ ಹೆಚ್ಚಾಗಿದೆ. ಗ್ರಾಮಾಂತರ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಸ್ವರ್ಧಿಸಬೇಕಾದ ಅನಿವಾರ್ಯತೆ ಇರುವುದರಿಂದ ಅವರ ಬುದ್ಧಿಮತ್ತೆಯನ್ನು ಹೆಚ್ಚಿಸಬೇಕಿರುವುದು ನಮ್ಮೇಲ್ಲರ ಕರ್ತವ್ಯ. ದಿನ ಪತ್ರಿಕೆಗಳಲ್ಲಿ ದೇಶ, ವಿದೇಶಗಳ ಸುದ್ದಿ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿಷಯಗಳನ್ನು ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು ಪ್ರತಿದಿನವೂ ಸಹ ದಿನ ಪತ್ರಿಕೆಗಳನ್ನು ಓದಿ ಅದರಲ್ಲಿರುವ ವಿಷಯಗಳನ್ನು ತಿಳಿದುಕೊಂಡು ತಮ್ಮ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳಬೇಕು. ಕನ್ನಡಪ್ರಭ ದಿನ ಪತ್ರಿಕೆಯವರು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿದ್ಯಾರ್ಥಿ ಮಿತ್ರ ಸಂಚಿಕೆ ಬಿಡುಗಡೆಗೊಳಿಸಿದ್ದಾರೆ. ಅದನ್ನು 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ವಿತರಿಸುತ್ತಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ನಾವು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ದಿನ ಪತ್ರಿಕೆಗಳೇ ನಮಗೆ ಮರೀಚಿಕೆಯಾಗಿತ್ತು. ಶಾಲೆಗೆ ಬರುತ್ತಿದ್ದ ಒಂದೇ ಒಂದು ದಿನ ಪತ್ರಿಕೆಯನ್ನು ನಾವು ಪೈಪೋಟಿಯಲ್ಲಿ ಓದುತ್ತಿದ್ದೆವು. ಅದರಿಂದ ನಮ್ಮ ಜ್ಞಾನ ಭಂಡಾರ ಹೆಚ್ಚಾಗಿತ್ತು. ಈಗ ಪ್ರಾಯೋಜಕರ ನೆರವಿನಿಂದ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಪತ್ರಿಕೆಯ ವಿದ್ಯಾರ್ಥಿ ಮಿತ್ರ ಸಂಚಿಕೆ ದೊರೆಯುತ್ತಿದ್ದು, ಈ ಪತ್ರಿಕೆಯನ್ನು ವಿದ್ಯಾರ್ಥಿಗಳು ಪ್ರತಿ ದಿನ ಓದುವ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಬೇಕು ಎಂದು ಹೇಳಿದರು.

ಪ್ರಾಂಶುಪಾಲ ಜಯಸಿಂಹ ಮಾತನಾಡಿ, ಹತ್ತನೆ ತರಗತಿ ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯ ಘಟ್ಟವಾಗಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ವ್ಯಾಸಂಗ ನಡೆಸಬೇಕು, ಮೊಬೈಲ್ ಗೀಳನ್ನು ಬದಿಗೊತ್ತಿ ತಮ್ಮ ಮುಂದಿಷ್ಭವಿಷ್ಯವನ್ನು ಉಜ್ವಳಗೊಳಿಸಿಕೊಳ್ಳಲು ಶಿಕ್ಷಣದತ್ತ ಗಮನಹರಿಸಬೇಕು ಎಂದು ನುಡಿದರು.

ಬಿಜಿಎಸ್ ಕಾಲೇಜಿನ ಉಪ ಪ್ರಾಂಶುಪಾಲ ಗುರುರಾಜ್, ಕನ್ನಡ ಪ್ರಭ ದಿನಪತ್ರಿಕೆ ತಾಲೂಕು ವರದಿಗಾರ ಎಚ್.ಆರ್.ಮಾದೇಶ್, ಹರೀಶ್, ಪುರಸಭೆ ನಾಗೇಂದ್ರ, ಗೀರಿಶ್, ದೊಡ್ಡಿ ನಾಗೇಶ್ ಇತರರಿದ್ದರು.(ಫೋಟೋ ಕ್ಯಾಪ್ಷನ್‌)

ಮಾಗಡಿ ರಂಗನಾಥಸ್ವಾಮಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ದಿನಪತ್ರಿಕೆಯ ವಿದ್ಯಾರ್ಥಿ ಮಿತ್ರ ಸಂಚಿಕೆ ವಿತರಣಾ ಕಾರ್ಯಕ್ರಮದಲ್ಲಿ ಪತ್ರಿಕೆಯ ಪ್ರಸರಣಾ ವ್ಯವಸ್ಥಾಪಕ ಮಂಜುನಾಥ್, ಉಪ ಪ್ರಾಂಶುಪಾಲ ಗುರುರಾಜ್, ಕನ್ನಡ ಪ್ರಭ ದಿನಪತ್ರಿಕೆ ತಾಲೂಕು ವರದಿಗಾರ ಎಚ್.ಆರ್.ಮಾದೇಶ್, ಪುರಸಭೆ ನಾಗೇಂದ್ರ ಇತರರಿದ್ದರು.