ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಶಿಕ್ಷಕ ವೃತ್ತಿ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗುವ ಶ್ರೇಷ್ಠ ವೃತ್ತಿಯಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣ ಮತ್ತು ಸ್ನಾತಕೋತರ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಕೆ.ವೆಂಕಟೇಶ್ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಇಂದಿರಾಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರುಬಿ.ಇಡಿ ಎನ್ನುವಂತಹ 2 ವರ್ಷಗಳ ತರಬೇತಿಯೇ ಅತ್ಯದ್ಭುತವಾದುದ್ದು. ಎಲ್ಲಿ ಸಲ್ಲುವರು, ಇಲ್ಲಿ ಸಲುವರಯ್ಯ ಎನ್ನುವ ಮಾತಿತ್ತು. ಆದರೆ, ಇದೀಗ, ಇಲ್ಲಿ ಸಲ್ಲುವರು ಎಲ್ಲಿಯೂ ಸಲ್ಲುವರಯ್ಯ ಎಂದು ಹೇಳಲಾಗುತ್ತಿದೆ. ಇದು ಪ್ರಶಿಕ್ಷಣಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ
ಬಿ.ಇಡಿ ಕೋರ್ಸ್ ಆದಂತಹ ವಿದ್ಯಾರ್ಥಿಗಳನ್ನು ನಾವು ಎಲ್ಲಾ ಕ್ಷೇತ್ರಗಳಲ್ಲಿಯೂ ನೋಡಬಹುದು. ಸೂಕ್ಷ್ಮ ಅಣುಬೋಧನೆ, ಸಿಟಿಸಿ, ಪ್ರಾಕ್ಟೀಸ್ ಟೀಚಿಂಗ್ ಮತ್ತು ಇಂಟರ್ನ್ಶಿಪ್ ಇವುಗಳು ಈ ಕೋರ್ಸಿನ 4 ಆಧಾರ ಸ್ತಂಭಗಳಾಗಿವೆ.ಇಲ್ಲಿ ನಾನು ಎನ್ನುವ ಅಹಂ ಬಿಟ್ಟು, ಉಪನ್ಯಾಸಕರು ಹೇಳಿಕೊಡುವ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಾಗ ಮಾತ್ರ, ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಸಾಧ್ಯ ವಾಗುತ್ತದೆ. ಹಿಂದೆ ಉದ್ಯೋಗಂ ಪುರುಷ ಲಕ್ಷಣಂ ಎನ್ನುತ್ತಿದ್ದರು. ಈಗ ಸ್ತ್ರೀ-ಪುರುಷಂ ಉದ್ಯೋಗ ಲಕ್ಷಣಂ ಎನ್ನುತ್ತಿದ್ದು, ಮುಂದಿನ ದಿನಗಳಲ್ಲಿ ಉದ್ಯೋಗಂ ಸ್ತ್ರೀ ಲಕ್ಷಣಂ ಎನ್ನುವ ಕಾಲ ಸಮೀಪದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಯುವಕರಿಗಿಂತ ಯುವತಿಯರೇ ಹೆಚ್ಚಾಗಿ ಬಿ.ಇಡಿ ಕೋರ್ಸ್ ಪಡೆಯುತ್ತಿರುವುದು ಸಂತಸ ತಂದಿದೆ ಎಂದರು.
ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಖಜಾಂಚಿ ಮಲ್ಲಿಕಾರ್ಜುನಪ್ಪ ಮಾತನಾಡಿ, ಸರ್ಕಾರ ಶಿಕ್ಷಣವನ್ನು ಖಾಸಗೀಕರಣಗೊಳಿಸುತ್ತಿರುವಂತಹ ಸಂದರ್ಭದಲ್ಲಿ ಹೆಚ್ಚು ವಿದ್ಯಾರ್ಥಿಗಳು ಬಿ.ಇಡಿ ಕೋರ್ಸ್ ಪಡೆಯಲು ಮುಂದಾಗುತ್ತಿರುವುದು ಸಂತಸದ ವಿಷಯ. ಅಧ್ಯಯನ ಮತ್ತು ಬೋಧನೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಬಿಟ್ಟು ಇನ್ನೊಂದು ಇರಲಾರದು. ಹಾಗಾಗಿ, ಶಿಕ್ಷಕರಾಗಬೇಕಾದವರು ನಿರಂತರ ಅಧ್ಯಯನ ಶೀಲರಾಗಿರಬೇಕು. ಹೆಚ್ಚು ಹೆಚ್ಚು ಓದಿದಂತೆ ಒಳ್ಳೆಯ ಜ್ಞಾನವಂತರಾಗಲು ಸಾಧ್ಯವಾಗುತ್ತದೆ. ಶಿಕ್ಷಕ ರಾಗಿ ನೀವು ಮಾಡುವ ಸೇವೆ ನಿಮ್ಮನ್ನು ಸದಾ ಗುರುತಿಸುವಂತೆ ಮಾಡುತ್ತದೆ. ಶಿಕ್ಷಕರಾಗಬೇಕಾದವರಲ್ಲಿ ಸಂಸ್ಕಾರ, ಶಿಸ್ತು, ತಾಳ್ಮೆ, ಬದ್ಧತೆ, ಸ್ವೀಕಾರ ಮನೋಭಾವ ಮತ್ತು ಅಧ್ಯಯನ ಶೀಲತೆ ಬಹಳ ಮುಖ್ಯವಾಗಿದ್ದು, ಇವು ನಿಮ್ಮಲ್ಲಿ ಬೆಳೆಯಬೇಕೆಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.ಈ ವೇಳೆ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ವಿಸ್ತರಣಾಧಿಕಾರಿ ಕೆ.ಸಿ. ಶಶಿಧರ್, ಕಾಲೇಜು ಪ್ರಾಂಶುಪಾಲ ಟಿ.ಬಸಪ್ಪ, ಸಂಸ್ಥೆಯ ಧರ್ಮದರ್ಶಿಗಳಾದ ಎಂ.ಹೆಚ್.ನೀಲಕಂಠಯ್ಯ ವೀಣಾ ನಟರಾಜ್, ಲೀಲಾ ಏಕಾಂತರಾಜ್, ವಿಜಯ ಶಿವಲಿಂಗಪ್ಪ, ವೇದಮೂರ್ತಿ, ಎಂ.ಬಿ.ತಿಪ್ಪೇಸ್ವಾಮಿ, ಉಪನ್ಯಾಸಕರಾದ ಭುವನೇಶ್, ನೀರಗುಂದ ಸುರೇಶ್, ನಾಗಭೂಷಣ್, ಶ್ರೀನಿವಾಸ್, ರೇಖಾ, ಗೌರಿ ಚಿನ್ಮಯಿ ಮತ್ತು ಸಂತೋಷ್ ಸೇರಿದಂತೆ ಪ್ರಥಮ ಮತ್ತು ದ್ವಿತೀಯ ವರ್ಷದ ನೂರಾರು ಪ್ರಶಿಕ್ಷಣಾರ್ಥಿಗಳಿದ್ದರು.