ಆಸ್ಪತ್ರೆಗೆ ದೌಡಾಯಿಸಿದ ಬಿಜೆಪಿ ನಾಯಕರ ದಂಡು

| Published : Jul 21 2025, 01:30 AM IST

ಆಸ್ಪತ್ರೆಗೆ ದೌಡಾಯಿಸಿದ ಬಿಜೆಪಿ ನಾಯಕರ ದಂಡು
Share this Article
  • FB
  • TW
  • Linkdin
  • Email

ಸಾರಾಂಶ

ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅನಾರೋಗ್ಯ ಹಿನ್ನೆಲೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸ್ವಾಮೀಜಿ ಆರೋಗ್ಯ ವಿಚಾರಿಸಲು ಬಿಜೆಪಿ ನಾಯಕರ ದಂಡೇ ಆಸ್ಪತ್ರೆಗೆ ಬರುತ್ತಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅನಾರೋಗ್ಯ ಹಿನ್ನೆಲೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸ್ವಾಮೀಜಿ ಆರೋಗ್ಯ ವಿಚಾರಿಸಲು ಬಿಜೆಪಿ ನಾಯಕರ ದಂಡೇ ಆಸ್ಪತ್ರೆಗೆ ಬರುತ್ತಿದೆ.

ಮಾಜಿ ಸಚಿವ ಸಿ.ಸಿ. ಪಾಟೀಲ ಆಸ್ಪತ್ರೆಗೆ ಆಗಮಿಸಿದ ಸ್ವಾಮೀಜಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಮಾಜಿ ಶಾಸಕ ವೀರಣ್ಣ ಚರಂತಿಮಠ, ಸಂಸದ ಪಿ.ಸಿ. ಗದ್ದಿಗೌಡರ ಸಹ ಪ್ರತ್ಯೇಕವಾಗಿ ಆಸ್ಪತ್ರೆಗೆ ಭೇಟಿ ನೀಡಿ ಪಂಚಮಸಾಲಿ ಶ್ರೀಗಳ ಆರೋಗ್ಯ ಕ್ಷೇಮ ವಿಚಾರಿಸಿದರು.

ಆರೋಗ್ಯದಲ್ಲಿ ಏರುಪೇರಾಗಿ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿ ಅವರಿಗೆ ಲೋ ಬಿಪಿ, ಎದೆ ನೋವು, ತಲೆ ನೋವಿನಿಂದ ಬಳಲುತ್ತಿದ್ದರು. ಸದ್ಯ ಚಿಕಿತ್ಸೆ ಬಳಿಕ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಸ್ವಾಮೀಜಿ ಆರೋಗ್ಯ ಪರಿಶೀಲಿಸಿದ ವೈದ್ಯರು;

ಬಸವಜಯ ಮೃತ್ಯುಂಜಯ ಸ್ವಾಮೀಜಿ ಅನಾರೋಗ್ಯ ಹಿನ್ನೆಲೆಯಲ್ಲಿ ಮತ್ತೆ ಸ್ವಾಮೀಜಿ ಆರೋಗ್ಯ ಪರಿಶೀಲಿಸಿದ ವೈದ್ಯರು ಬಿಪಿ ಶುಗರ್ ಸೇರಿ ಹಲವು ತಪಾಸಣೆ ನಡೆಸಿದರು. ಸ್ವಾಮೀಜಿ ಆರೋಗ್ಯ ಪರಿಶೀಲಿಸಿದ ಡಾ.ಕ್ಷಮತಾ ಕೆರೂಡಿ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ತಿಳಿಸಿದ್ದಾರೆ.

ಸಿ.ಸಿ. ಪಾಟೀಲ ಸುದೀರ್ಘ ಚರ್ಚೆ: ಆಸ್ಪತ್ರೆಗೆ ಆಗಮಿಸಿದ ಮಾಜಿ ಸಚಿವ ಸಿ.ಸಿ. ಪಾಟೀಲ ಅವರು ಸ್ವಾಮೀಜಿಗಳನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ ನಂತರ ಶ್ರೀಗಳ ಜೊತೆಗೆ ಸಿ.ಸಿ. ಪಾಟೀಲ ಮಾತುಕತೆ ನಡೆಸಿದರು. ಶ್ರೀಗಳ ಕೊಠಡಿಯಲ್ಲಿ ಸಿ.ಸಿ. ಪಾಟೀಲ ಒಬ್ಬರೇ ಸುದೀರ್ಘ ಗೌಪ್ಯ ಚರ್ಚೆ ನಡೆಸಿದರು. ಎಲ್ಲರನ್ನೂ ಹೊರ ಕಳಿಸಿ ಸ್ವಾಮೀಜಿ ಹಾಗೂ ಸಿ.ಸಿ. ಪಾಟೀಲ ಅವರ ನಡುವಿನ ಮಾತುಕತೆ ನಡೆಸಿರುವುದು ಮಹತ್ವ ಪಡೆದಿದೆ.

ಹುಬ್ಬಳ್ಳಿಯಲ್ಲಿ ಕಾಶಪ್ಪನವರ ನೇತೃತ್ವದಲ್ಲಿ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಸಭೆ ಬೆನ್ನಲ್ಲೇ ಇತ್ತ ಮಾಜಿ ಸಚಿವ ಸಿ.ಸಿ. ಪಾಟೀಲ ಹಾಗೂ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಡುವಿನ ಚರ್ಚೆ ಕುತೂಹಲ ಮೂಡಿಸಿದೆ.