ಸಾರಾಂಶ
ರಾಮನಗರ: ಇಬ್ಬರು ರೌಡಿಗಳ ಸಹಚರರ ಗುಂಪುಗಳು ಹಾಡಹಗಲೇ ನಗರದ ಜಿಲ್ಲಾ ನ್ಯಾಯಾಲಯದ ಹೊರ ಭಾಗದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಪರಸ್ಪರ ಹಲ್ಲೆಗೆ ಮುಂದಾಗಿದ್ದು, ಪೊಲೀಸರು ಸಕಾಲಕ್ಕೆ ಮಧ್ಯ ಪ್ರವೇಶಿಸಿ ಸಂಭವಿಸಬಹುದಾದ ಅನಾಹುತ ತಪ್ಪಿಸಿದ್ದಾರೆ.
ರೌಡಿಗಳಾದ ಮತಿನ್ ಮತ್ತು ಸಯಾನ್ ಖಾನ್ ಸಹಚರರ ಗುಂಪು ಲಾಂಗು, ಮಚ್ಚು ಹಿಡಿದು ಪರಸ್ಪರ ಘರ್ಷಣೆಗೆ ಮುಂದಾಗಿದ್ದವು. ನ್ಯಾಯಾಲಯದ ಬಳಿಯೇ ಮಧ್ಯಾಹ್ನ ಇಂತಹದೊಂದು ಘಟನೆ ಜರುಗಿದ್ದು ಜನರನ್ನು ಆತಂಕಕ್ಕೀಡು ಮಾಡಿದೆ. ಘಟನೆ ಸಂಬಂಧ ಐಜೂರು ಠಾಣೆ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ನಾಲ್ವರು ಬಾಲಕರು ಸೇರಿದಂತೆ 10 ಮಂದಿಯನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ನಾಲಬಂದವಾಡಿ ಬಡಾವಣೆ ವಾಸಿ ಮತಿನ್, ಯಾರಬ್ ನಗರ ಬಡಾವಣೆ ವಾಸಿ ಸಯಾನ್ ಖಾನ್, ಸಮೀರ್, ಮುಹಿಬ್, ಸೈಯದ್ ನದೀಂ, ಮಹಮ್ಮದ್ ಫಾರೂಕ್ ಬಂಧಿತರು.ಘಟನೆ ವಿವರ:
ಮತಿನ್ ಮತ್ತು ಸಯಾನ್ ಖಾನ್ ನಡುವೆ ವೈಯಕ್ತಿಕ ದ್ವೇಷದ ಕಾರಣ ಹಲವು ವರ್ಷಗಳಿಂದ ಗಲಾಟೆ ನಡೆಯುತ್ತಲೇ ಇತ್ತು. 2023ರಲ್ಲಿ ಸಯಾನ್ ತನ್ನ ಸ್ನೇಹಿತ ಅದ್ನಾನ್ ಪಾಷನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ರೈಲ್ವೆ ನಿಲ್ದಾಣ ವೃತ್ತದಲ್ಲಿ ಮತಿನ್ ತನ್ನ 8 ಸ್ನೇಹಿತರೊಂದಿಗೆ ಲಾಂಗ್ ನಿಂದ ಹಲ್ಲೆ ನಡೆಸಿದ್ದನು. ಈ ಸಂಬಂಧ ಅದ್ನಾನ್ ಪಾಷ 9 ಮಂದಿ ವಿರುದ್ಧ ರಾಮನಗರ ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದನು.ಪ್ರಕರಣಕ್ಕೆ ಸಂಬಂಧಿಸಿದಂತೆ ಸಯಾನ್, ನದೀಂ, ಫಾರೂಕ್, ಫಜಲ್, ಅಕ್ಬರ್ ಖಾನ್ ನ್ಯಾಯಾಲಯಕ್ಕೆ ಹಾಜರಾದರೆ, ಅವರ ಜೊತೆಯಲ್ಲಿ ಬಂದಿದ್ದ ಶಾಹುಲ್, ಮಹಮ್ಮದ್ ನವಾಜ್ ಪಾಷ, ಸುಹೇಬ್ ಪಾಷ, ಮಹಮ್ಮದ್ ಜುನೇದ್ ಪಾಷ ಕೋರ್ಟ್ ರಸ್ತೆಯಲ್ಲಿ ನಿಂತಿದ್ದರು. ಇದೇ ಸಮಯಕ್ಕೆ ರೌಡಿ ಮತೀನ್ ತನ್ನ ಸಹಚರರಾದ ಸಮೀರ್, ಮುಹಿಬ್, ಮಹಮ್ಮದ್ ಫಾರೂಕ್ ರೊಂದಿಗೆ ಬಂದಿದ್ದಾನೆ. ಮತೀನ್ ಮತ್ತು ಸಯಾನ್ ಖಾನ್ ಮಧ್ಯಾಹ್ನ 12 ಗಂಟೆಯಲ್ಲಿ ಪ್ರಕರಣದ ವಿಚಾರಣೆ ಮುಗಿಸಿಕೊಂಡು ಹೊರಗಡೆ ಬಂದಿದ್ದಾರೆ.
ಮತೀನ್, ಸಮೀರ್, ಮುಹಿಬ್, ಮಹಮ್ಮದ್ ಫಾರೂಕ್ ಕೋರ್ಟ್ ರಸ್ತೆಯಲ್ಲಿ ನಿಂತಿದ್ದ ಸಯಾನ್ ಸಹಚರರಾದ ಶಾಹುಲ್, ಮಹಮ್ಮದ್ ನವಾಜ್ ಪಾಷ, ಸುಹೇಬ್ ಪಾಷ, ಮಹಮ್ಮದ್ ಜುನೇದ್ ಪಾಷ ಬಳಿ ಹೋಗಿ ಮಚ್ಚುಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಯಾನ್ ಸಹಚರರು ಕೂಡ ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾರೆ.ಉಭಯ ಗುಂಪುಗಳು ನ್ಯಾಯಾಲಯದ ಹೊರ ಭಾಗದಿಂದ ನಾಲಬಂದವಾಡಿ ಸೇರುವ ಸೇತುವೆವರೆಗೂ ಮಾರಕಾಸ್ತ್ರಗಳಿಂದ ಹಿಡಿದು ಪರಸ್ಪರ ಹಲ್ಲೆಗೆ ಬೆನ್ನಟ್ಟಿ ಓಡಾಡಿದ್ದಾರೆ. ತಕ್ಷಣ ಎಚ್ಚೆತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ, ವೃತ್ತ ನಿರೀಕ್ಷಕ ಹಾಗೂ ಸಬ್ ಇನ್ಸ್‌ಪೆಕ್ಟರ್ ಗಳು ಸ್ಥಳಕ್ಕೆ ಧಾವಿಸಿ ಅನಾಹುತ ತಪ್ಪಿಸಿದರು. ಐಜೂರು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಬಾಕ್ಸ್ ...............ರೌಡಿ ಮತೀನ್ ಕಾಲಿಗೆ ಗುಂಡೇಟು
ರಾಮನಗರ: 2023ರ ಆಗಸ್ಟ್ 11ರಂದು ಪ್ರಕರಣವೊಂದರ ಮಹಜರು ನಡೆಸುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿ ಮತಿನ್ ಕಾಲಿಗೆ ರಾಮನಗರ ಪೊಲೀಸರು ಗುಂಡು ಹೊಡೆದಿದ್ದರು.ರಾಮನಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ವಡೇರಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಆ ಪ್ರಕರಣದ ಮೊದಲ ಆರೋಪಿ ಮತಿನ್ ಘಟನೆ ಬಳಿಕ ನಾಪತ್ತೆಯಾಗಿದ್ದ. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ಬಂಧಿಸಿ ಕರೆತರಲಾಗಿತ್ತು.
ಘರ್ಷಣೆ ನಡೆದ ಸ್ಥಳಕ್ಕೆ ಮತೀನ್ ನನ್ನು ಕರೆದೊಯ್ದು ಮಹಜರು ಮಾಡುತ್ತಿದ್ದಾಗ, ಆರೋಪಿ ಇಬ್ಬರು ಪೊಲೀಸರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಸಮವಸ್ತ್ರ ಹರಿದು ತಪ್ಪಿಸಿಕೊಳ್ಳಲು ಯತ್ನಿಸಿದ. ಎಚ್ಚರಿಕೆಯನ್ನೂ ಲೆಕ್ಕಿಸದೆ ಹಲ್ಲೆಗೆ ಮುಂದಾದ ಆತನ ಎಡಗಾಲಿಗೆ ಡಿವೈಎಸ್ಪಿ ದಿನಕರ್ ಶೆಟ್ಟಿ ಗುಂಡು ಹಾರಿಸಿದ್ದರು.ಕೋಟ್ ................
ಆರೋಪಿಗಳಾದ ಮತೀನ್ ಮತ್ತು ಸಯಾನ್ ಖಾನ್ ಪ್ರಕರಣವೊಂದರ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಅವರಿಬ್ಬರ ಸಹಚರರ ನಡುವಿನ ಗುಂಪು ಘರ್ಷಣೆಯನ್ನು ಪೊಲೀಸರು ತಪ್ಪಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ತಿರುಗಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.- ಶ್ರೀನಿವಾಸ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ
10ಕೆಆರ್ ಎಂಎನ್ 8,9.ಜೆಪಿಜಿ8.ಆರೋಪಿಗಳಾದ ಮತೀನ್ ಮತ್ತು ಸಯಾನ್ ಖಾನ್.
9.ಪೊಲೀಸರು ಬಂಧಿಸಿರುವ ಮತೀನ್ ಮತ್ತು ಸಯಾನ್ ಖಾನ್ ಸಹಚರರು.