ಪ್ರತಿಯೊಬ್ಬ ರೈತನ ಬದುಕು ಸರಳ ಸುಖದ ಸುಪ್ಪತ್ತಿಗೆಯಲ್ಲ. ಕಷ್ಟ ಎಷ್ಟೇ ಇದ್ದರೂ ಅದನ್ನು ಮೆಟ್ಟಿನಿಂತು ಬೆಳೆ ಬೆಳೆಯುವವನೇ ನಿಜವಾದ ರೈತ.
ಯಲ್ಲಾಪುರ: ಇಂದು ಕೃಷಿಕರ ಬದುಕು ಬಹಳ ಕಷ್ಟ. ಆದ್ದರಿಂದ ಕೃಷಿ ಮಾಡುವುದು ಕಷ್ಟ. ೨೦೦೭ರಿಂದ ಸಾವಯವ ಕೃಷಿ ಮಾಡುತ್ತ ಬಂದ ಲಾಲಗುಳಿ ಊರಿನಲ್ಲಿ ಒಂದು ಆದರ್ಶಪ್ರಾಯವಾದ ಕೃಷಿ ಪರಂಪರೆ ಉಳಿದಿರುವುದು ಸಂತಸ ತಂದಿದೆ ಎಂದು ಸೋದೆ ವಾದಿರಾಜ ಮಠದ ವಿಶ್ವವಲ್ಲಭತೀರ್ಥ ಶ್ರೀಪಾದ ಸ್ವಾಮೀಜಿ ನುಡಿದರು.
ಅವರು ತಾಲೂಕಿನ ಕಣ್ಣಿಗೇರಿ ಗ್ರಾಪಂನ ಲಾಲಗುಳಿ ಗ್ರಾಮದ ಶ್ರೀಧರ ಭಟ್ಟರ ಮನೆಯಲ್ಲಿ ಕೃಷಿ ಪ್ರಯೋಗ ಪರಿವಾರ ಸಂಘಟಿಸಿದ್ದ ಗದ್ದೆಯಿಂದ ಗರ್ಭಗುಡಿಯವರೆಗೆ ಶುದ್ಧ ನೈವೇದ್ಯ ಸಮರ್ಪಣಂ ಪಾರಂಪರಿಕ ದೇಶಿ ಭತ್ತದ ತಳಿಗಳ ಸಂರಕ್ಷಣಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು.ಇದಕ್ಕೆ ತೀರ್ಥಹಳ್ಳಿ ಕೃಷಿ ಪರಿವಾರ ಮಾರ್ಗದರ್ಶನ ಮಾಡುತ್ತಿರುವುದು ಸಂತಸ ತಂದಿದೆ. ಪ್ರತಿಯೊಬ್ಬ ರೈತನ ಬದುಕು ಸರಳ ಸುಖದ ಸುಪ್ಪತ್ತಿಗೆಯಲ್ಲ. ಕಷ್ಟ ಎಷ್ಟೇ ಇದ್ದರೂ ಅದನ್ನು ಮೆಟ್ಟಿನಿಂತು ಬೆಳೆ ಬೆಳೆಯುವವನೇ ನಿಜವಾದ ರೈತ. ಈ ವರ್ಷ ಬರಗಾಲ ತಾಂಡವವಾಡುತ್ತಿದೆ. ಇವತ್ತು ನಿಮ್ಮ ಕೃಷಿ ಜಮೀನನ್ನು ನೋಡಿ ತುಂಬಾ ಖುಷಿಯಾಯಿತು. ಬರಗಾಲದಲ್ಲೂ ಶ್ರದ್ಧೆಯಿಂದ ಭತ್ತ ಬೆಳೆಯುತ್ತಿರುವುದು ಕೃಷಿಯ ಮೇಲೆ ನಿಮಗಿರುವ ಆಸಕ್ತಿ, ಶ್ರದ್ಧೆಯನ್ನು ಎತ್ತಿ ತೋರಿಸುತ್ತದೆ ಎಂದರು.
ಕೃಷಿ ಪರಿವಾರದ ಮುಖ್ಯಸ್ಥ ಶ್ರೀವತ್ಸ ಮಾತನಾಡಿ, ಕೃಷಿಯು ಒಂದು ಧರ್ಮ. ಲಾಲಗುಳಿಗೆ ಕೃಷಿ ಪರಿವಾರ ಹೊಸತಲ್ಲ. ಸಾವಯವ ಕೃಷಿಯನ್ನು ಎಲ್ಲೆಡೆ ಪಸರಿಸಬೇಕು ಎಂಬ ಉದ್ದೇಶದಿಂದ ಹುಟ್ಟಿದ್ದು ಈ ಪರಿವಾರ. ಈಗಾಗಲೇ ೭೨ ತಳಿ ಸಿಕ್ಕಿದ್ದವು. ಬೀಜ ಹುಡುಕುತ್ತಿರುವಾಗ ಕೇವಲ ೬೦ ತಳಿ ಬೀಜ ಸಿಕ್ಕವು. ಆದರೆ ಪುನಃ ಸರ್ವೇ ಮಾಡಿದರೆ ಕೇವಲ ಹತ್ತು ತಳಿ ಸಿಗಬಹುದು. ಆದ್ದರಿಂದ ಈಗ ಪುನಃ ತಳಿ ರಕ್ಷಣೆಗಾಗಿ ಶುದ್ಧ ನೈವೇದ್ಯ ಸಮರ್ಪಣಂ ಕಾರ್ಯಕ್ರಮದ ಮೂಲಕ ಸಾವಯವ ಕೃಷಿಯೊಂದಿಗೆ ನಶಿಸುತ್ತಿರುವ ಭತ್ತದ ತಳಿ ರಕ್ಷಣೆಗೆ ಶ್ರಮಿಸಬೇಕಿದೆ ಎಂದರು.ವೇದಿಕೆಯಲ್ಲಿ ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಕೃಷಿ ಪ್ರಯೋಗ ಪರಿವಾರದ ತೀರ್ಥಹಳ್ಳಿಯ ಮಧುಸೂದನ ಜಿ., ಇಂದ್ರೇಶ, ದಿನೇಶ, ಅರುಣಕುಮಾರ ವಿ.ಕೆ., ಉಮಾಶಂಕರ ಜಡ್ಡಿಗದ್ದೆ ಉಪಸ್ಥಿತರಿದ್ದರು.
ಶ್ರೀರಾಮ ಶ್ರೀಧರ ಭಟ್ಟ ಸ್ವಾಗತಿಸಿದರು. ಗಣಪತಿ ಮೆಣಸುಮನೆ ನಿರ್ವಹಿಸಿದರು. ದತ್ತಾತ್ರೆಯ ಭಟ್ಟ ವಂದಿಸಿದರು. ಮಾತೆಯರು ಭಗವದ್ಗೀತೆ ಪಠಿಸಿದರು. ಗಂಗಾಬಾಯಿ ಮತ್ತು ಶ್ರೀಧರ ಭಟ್ಟ ದಂಪತಿ ಗುರುಗಳ ಪಾದ ತೊಳೆದು ಬರಮಾಡಿಕೊಂಡು. ಫಲಪುಷ್ಪ ಸಮರ್ಪಿಸಿದರು. ಸ್ವರ್ಣವಲ್ಲಿ ಶ್ರೀಗಳ ಸಂದೇಶವನ್ನು ವಾಚಿಸಲಾಯಿತು. ಸ್ವಾಮೀಜಿಯವರು ಬೆಳಗಿನ ಹೊತ್ತು ಕಳಸೂರ ಭಾಗದಲ್ಲಿ ಪಾದಯಾತ್ರೆ ಕೈಗೊಂಡಿದ್ದರು.