ಬೀದಿಯಲ್ಲಿ ತರಕಾರಿ ಮಾರಾಟ ಮಾಡಿದ ಅತಿಥಿ ಉಪನ್ಯಾಸಕರು

| Published : Dec 12 2023, 12:45 AM IST

ಬೀದಿಯಲ್ಲಿ ತರಕಾರಿ ಮಾರಾಟ ಮಾಡಿದ ಅತಿಥಿ ಉಪನ್ಯಾಸಕರು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಬಳಿ ಅತಿಥಿ ಉಪನ್ಯಾಸಕರು ಏರುದನಿಯಲ್ಲಿ ಕೂಗುತ್ತಾ ಹಣ್ಣು, ತರಕಾರಿ ವ್ಯಾಪಾರ ಮಾಡಿದ ಪರಿ ಇದು. ಮಹಿಳಾ ಉಪನ್ಯಾಸಕರು ಕೂಗುತ್ತಿದ್ದಾಗ ದಾರಿ ಹೋಕರು ಅತ್ತ ಕಣ್ಣು ಹಾಯಿಸಿ ಅಚ್ಚರಿ ವ್ಯಕ್ತಪಡಿಸಿದರು. ಸುಲಿದ ಅವರೆಕಾಳನ್ನು ಕೆಲವರು ಕೊಂಡೊಯ್ದರು.

ಸೇವೆ ಕಾಯಂಗೆ ಆಗ್ರಹಿಸಿ ವಿನೂತನ ಪ್ರತಿಭಟನೆ । ಕಳೆದ 19 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ತಾಜಾ ಅವರೇಕಾಯಿ ನೂರು ರುಪಾಯಿಗೆ ಎರಡು ಕೆಜಿ, ಸೀತಾಫಲ ಹಣ್ಣು ತಗಳ್ಳಿ ನೂರು ರು.ಗೆ ಕಿಲೋ, ಟೊಮ್ಯಾಟೋ, ಚಕ್ಕುಲಿ ತಗೊಳ್ಳಿ..

ಜಿಲ್ಲಾಧಿಕಾರಿ ಕಚೇರಿ ಬಳಿ ಅತಿಥಿ ಉಪನ್ಯಾಸಕರು ಏರುದನಿಯಲ್ಲಿ ಕೂಗುತ್ತಾ ಹಣ್ಣು, ತರಕಾರಿ ವ್ಯಾಪಾರ ಮಾಡಿದ ಪರಿ ಇದು. ಮಹಿಳಾ ಉಪನ್ಯಾಸಕರು ಕೂಗುತ್ತಿದ್ದಾಗ ದಾರಿ ಹೋಕರು ಅತ್ತ ಕಣ್ಣು ಹಾಯಿಸಿ ಅಚ್ಚರಿ ವ್ಯಕ್ತಪಡಿಸಿದರು. ಸುಲಿದ ಅವರೆಕಾಳನ್ನು ಕೆಲವರು ಕೊಂಡೊಯ್ದರು.

ಸೇವೆ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ 19 ನೇ ಧರಣಿ ಕಾಲಿಟ್ಟಿದ್ದು, ಸರ್ಕಾರದ ಗಮನ ಸೆಳೆಯುವ ಸಂಬಂಧ ಧರಣಿ ಸ್ಥಳದಲ್ಲಿ ತರಕಾರಿ, ಹಣ್ಣು ಮಾರಾಟ ಮಾಡಿ ಆಕ್ರೋಶ ಹೊರ ಹಾಕಿದರು. ನಗರದ ಒನಕೆ ಓಬವ್ವ ವೃತ್ತದಲ್ಲಿ ಬೆಳಗ್ಗೆ 10ಗಂಟೆಗೆ ಕೈಯಲ್ಲಿ ತಕ್ಕಡಿ ಹಿಡಿದು ತರಕಾರಿ ಮಾರಾಟ ಪ್ರಾರಂಭಿ ಸಿದರು. ಪೇಪರ್ ಬ್ಯಾಗ್ ನಲ್ಲಿ ತರಕಾರಿ ತುಂಬಿ ನೀಡಿದರು.

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡದ ಕಾರಣ ನಮ್ಮ ಬದುಕು ಅತಂತ್ರವಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ತರಕಾರಿ ಮಾರಾಟ ಮಾಡಿ ಹೊಟ್ಟೆ ಪೊರೆಯುವ ಪರಿಸ್ಥಿತಿ ಬಂದಿದೆ. ಸರ್ಕಾರ ಉದಾಸೀನ ಮನೋಭಾವ ತಳೆದಿದೆ ಎಂದು ಪ್ರತಿಭಟನಾನಿರತರು ಗೋಳು ತೋಡಿಕೊಂಡರು.

ಸೇವೆ ಕಾಯಂಗೊಳಿಸುವಾಗ 2009ರ ಜುಲೈ 11ರೊಳಗೆ ಎಂಫಿಲ್‌ ಪದವಿ ಪಡೆದವರನ್ನು ಪರಿಗಣಿಸಬೇಕು. 10ರಿಂದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ವಾರ್ಷಿಕ ಪರೀಕ್ಷಾ ಪದ್ಧತಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದವರಿದ್ದಾರೆ. ಇವರ ಅಂಕಗಳಿಗೂ ಈಗಿನ ಸೆಮಿಸ್ಟರ್‌ ಪದ್ಧತಿಗೂ ತುಂಬಾ ವ್ಯತ್ಯಾಸವಿದೆ. ಈ ಸಮಸ್ಯೆಯನ್ನು ನ್ಯಾಯಯುತವಾಗಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಕಾಲೇಜು, ಸರ್ಕಾರ ಹಾಗೂ ವಿಶ್ವವಿದ್ಯಾಲಯದ ಮಟ್ಟದಲ್ಲಿ ಅತಿಥಿ ಉಪನ್ಯಾಸಕರಿಗೆ ಮನ್ನಣೆ ಸಿಗುತ್ತಿಲ್ಲ. ಅಲ್ಲದೇ, ಸರಿಯಾದ ರೀತಿಯಲ್ಲಿ ವೇತನವೂ ಪಾವತಿಯಾಗುತ್ತಿಲ್ಲ. 26ವರ್ಷದವರೆಗೂ ಸೇವೆ ಮಾಡಿದವರು ಇದ್ದಾರೆ. ಯಾವುದೇ ಸೇವಾ ಭದ್ರತೆ ಇಲ್ಲದೇ ಸಮಸ್ಯೆ ಎದುರಿಸುವಂತಾಗಿದೆ ಎಂದರು.ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಬೇಡಿಕೆ ಈಡೇರಿಕೆಗೆ ಮುಂದಾಗುತ್ತಿಲ್ಲ .‌ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಜಿಲ್ಲಾ ಘಟಕ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಆದರೂ ಸರ್ಕಾರ ದಿವ್ಯ ನಿರ್ಲಕ್ಷ್ಯ ತಾಳಿದೆ ಎಂದು ಧರಣಿ ನಿರತರು ದೂರಿದರು. ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ಎನ್‌.ಯೋಶೋಧರ, ಉಪಾಧ್ಯಕ್ಷೆ ಡಿ.ಎಂ.ಚಂದನ,ಕಾರ್ಯದರ್ಶಿ ವಿ.ಎಸ್‌.ಮಂಜುನಾಥ್‌, ಖಜಾಂಚಿ ಡಾ.ಜಗದೀಶ್ ಕರೆನಲ್ಲಿ, ಪದಾಧಿಕಾರಿಗಳಾದ ಡಾ.ನಂದಿನಿ, ಫಿರ್ದೋಸ್‌, ಸುವರ್ಣಮ್ಮ ,ಮಹಾಂತೇಶ್ ಧರಣಿ ನೇತೃತ್ವ ವಹಿಸಿದ್ದರು.

ಬಾಕ್ಸ್‌.....

ತರಕಾರಿ ಮಾರಾಟ ಪ್ರತಿಭಟನೆಯಲ್ಲ, ನಮ್ಮ ಪರಿಸ್ಥಿತಿ ಹಾಗಿದೆ!

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಶೇ.80 ರಷ್ಟು ಅತಿಥಿ ಉಪನ್ಯಾಸಕರೇ ಕೆಲಸ ಮಾಡುತ್ತಿದ್ದಾರೆ. ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಅತಿಥಿ ಉಪನ್ಯಾಸಕರ ಸೇವೆಯನ್ನು ಅವಲಂಬಿಸಿವೆ. ಒಂದೆಡೆ ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿ ದ್ದರೆ, ಮತ್ತೊಂದೆ ಸಕಾಲಕ್ಕೆ ವೇತನ ನೀಡಲಾಗುತ್ತಿಲ್ಲ. ಅತ್ಯಂತ ನಿಕೃಷ್ಟವಾಗಿ ಕಾಣಲಾಗುತ್ತಿದೆ. ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಕೆಲವು ಉಪನ್ಯಾಸಕರು ಮಕ್ಕಳ ಫೀ ಕಟ್ಟಲು ಪೇಚಾಡುತ್ತಿದ್ದಾರೆ. ಪ್ರತಿಭಟನೆಗೆಗಾಗಿ ನಾವು ಹಣ್ಣು ತರಕಾರಿ ಮಾರುತ್ತಿಲ್ಲ. ಪರಿಸ್ಥಿತಿ ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಕೆಲಸವಿಲ್ಲದೆ ಕೆಲವರು ತರಕಾರಿ, ಹಣ್ಣು ಮಾರಾಟ, ತೋಟ ಕಾರ್ವಿುಕರು, ಗಾರೆ, ಪೈಂಟ್ ಕೆಲಸ ಮಾಡುತ್ತಿದ್ದಾರೆ. 20 ವರ್ಷಗಳಿಂದ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ. ಈ ಅನಿಷ್ಟ ಪದ್ಧತಿ ಮುಕ್ತಾಯಗೊಳಿಸಿ ಸೇವೆಯನ್ನು ಕಾಯಂಗೊಳಿಸಬೇಕು ಎಂದರು.-----------------

ಪೋಟೋ ಕ್ಯಾಪ್ಸನ ್

ಸೇವೆ ಕಾಯಂ ಮಾಡುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಸೋಮವಾರ ಚಿತ್ರದುರ್ಗದಲ್ಲಿ ತರಕಾರಿ ವ್ಯಾಪಾರ ಮಾಡಿದರು.

----ಫೋಟೋ ಫೈಲ್ ನೇಮ್ 11 ಸಿಟಿಡಿ 3----