ಸಾರಾಂಶ
ಕೊಪ್ಪಳ: ಸೇವಾ ಕಾಯಮಾತಿಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಕಳೆದ 28 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ನಿರ್ಲಕ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ರಕ್ತದಲ್ಲಿ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಧರಣಿ ನಡೆಸುತ್ತಿರುವ ಸ್ಥಳದಲ್ಲಿಯೇ ಬುಧವಾರ ರಕ್ತದಲ್ಲಿ ಸರ್ಕಾರಕ್ಕೆ ಪುಟಗಟ್ಟಲೇ ಪತ್ರ ಬರೆದು ಕಿಡಿಕಾರಿದರು.ಈಗಾಗಲೇ ಪಾದಯಾತ್ರೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪತ್ರ ಚಳವಳಿ ನಡೆಸಲಾಗಿದೆ. ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾಗಿದೆ. ಇಷ್ಟಾದರೂ ಸರ್ಕಾರದ ಮೌನ ಅತಿಥಿ ಉಪನ್ಯಾಸಕರ ಹೋರಾಟವನ್ನು ತೀವ್ರಗೊಳ್ಳುವಂತೆ ಮಾಡಿದೆ. ಇದೀಗ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರು ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ರಕ್ತದಲ್ಲಿ ಸರ್ಕಾರಕ್ಕೆ ಪತ್ರ ಬರೆದು ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.ವಿಜಯಕುಮಾರ್ ಕುಲಕರ್ಣಿ, ಲತಾ, ಡಾ.ವೀರಣ್ಣ ಸಜ್ಜನರ್, ಬಸವರಾಜ ಕರುಗಲ್ ರಕ್ತದಲ್ಲಿ ಪತ್ರ ಬರೆದರು.ಈ ವೇಳೆ ಡಾ.ಸಣ್ಣದೇವೇಂದ್ರಸ್ವಾಮಿ, ಡಾ.ಪ್ರಕಾಶ ಬಳ್ಳಾರಿ, ಡಾ.ತುಕಾರಾಂ ನಾಯಕ, ಶಿವಮೂರ್ತಿಸ್ವಾಮಿ, ಕಲ್ಲಯ್ಯ, ಗೀತಾ ಬನ್ನಿಕೊಪ್ಪ, ಅಕ್ಕಮಹಾದೇವಿ, ಸಾವಿತ್ರಿ, ಗಿರಿಜಾ ತುರಮುರಿ, ಎಂ.ಶಿವಣ್ಣ, ಮಹಾಂತೇಶ ನೆಲಾಗಣಿ, ಶಿವಬಸಪ್ಪ ಮಸ್ಕಿ, ರಾಮಪ್ರಸಾದ, ಸಿ.ಬಸವರಾಜ, ವಿಜಯಕುಮಾರ ತೋಟದ, ಬಸವರಾಜ ಹುಳಕಣ್ಣವರ್, ಪ್ರಕಾಶ ಜಡಿಯವರ್, ಈಶಪ್ಪ ಮೇಟಿ ಸೇರಿದಂತೆ ಹಲವರಿದ್ದರು.ರಕ್ತದಲ್ಲಿರುವ ಬರೆದ ಪತ್ರ: ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಿ ಎಂದು 28 ದಿನಗಳಿಂದ ಗೋಗರೆಯುತ್ತಿದ್ದೇವೆ. ಸರ್ಕಾರ ಸ್ಪಂದಿಸುತ್ತದೆ ಎಂಬ ಆಶಾವಾದ ಇನ್ನೂ ಇದೆ. ಆದರೆ ಸರ್ಕಾರದಿಂದ ಅಧಿಕೃತ ಮಾಹಿತಿ ಇನ್ನುವರೆಗೆ ಬಂದಿಲ್ಲ. ನೀವು ಹೇಳಿಲ್ಲ, ನಾವು ಕೇಳಿಲ್ಲ. ಹಾಗಾಗಿ ಪ್ರೀತಿ ಪಾತ್ರರಿಗೆ ಬರೆಯುವಂತೆ ನಾವು ಸಹ ಸರ್ಕಾರಕ್ಕೆ ರಕ್ತದಿಂದ ಈ ಪತ್ರ ಬರೆಯುತ್ತಿದ್ದೇವೆ. ಇಚ್ಛಾಶಕ್ತಿ ಇದ್ದರೆ ಸರ್ಕಾರಕ್ಕೆ ಯಾವುದೂ ಸಮಸ್ಯೆಯಲ್ಲ, ಹೊರೆಯೂ ಅಲ್ಲ. ವಯೋಮಿತಿಯ ಅಂತ್ಯದಲ್ಲಿದ್ದೇವೆ. ಅಭದ್ರತೆಯಿಂದ ಎಷ್ಟೋ ಜೀವಗಳು ಕೊನೆಯುಸಿರೆಳೆದಿವೆ. ಇಂಥ ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದೇವೆ. ಇನ್ನಾದರೂ ಕಾಯಂ ಮಾಡಿ ಎಂದು ಕಿಡಿಕಾರಿದ್ದಾರೆ.