ಮಾರ್ಗಸೂಚಿ ಆಧರಿಸಿ ತೆರಿಗೆ ಹೆಚ್ಚಳಕ್ಕೆ ಜನರ ತೀವ್ರ ವಿರೋಧ

| Published : Mar 06 2024, 02:16 AM IST

ಸಾರಾಂಶ

ಮಾರ್ಗಸೂಚಿ ದರ ಆಧರಿಸಿ ಆಸ್ತಿ ತೆರಿಗೆ ವಿಧಿಸುವುದು ವೈಜ್ಞಾನಿಕ ಮಾರ್ಗವಲ್ಲ. ಇದರಿಂದ ಆಸ್ತಿ ತೆರಿಗೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿಯು ಏಪ್ರಿಲ್‌ನಿಂದ ಮಾರ್ಗಸೂಚಿ ದರ ಆಧಾರಿಸಿ ಆಸ್ತಿ ತೆರಿಗೆ ಸಂಗ್ರಹಿಸುವ ಕುರಿತು ಹೊರಡಿಸಿರುವ ಕರಡು ರಾಜ್ಯ ಪತ್ರದ ಬಗ್ಗೆ ಸಾರ್ವಜನಿಕರಿಂದ ಭಾರೀ ಆಕ್ಷೇಪ ವ್ಯಕ್ತವಾಗುತ್ತಿದೆ.ಕಂದಾಯ ಇಲಾಖೆಯು ಆಸ್ತಿ ಮಾರಾಟ ಮತ್ತು ಖರೀದಿ ಆಧಾರಿಸಿ ಮಾರ್ಗಸೂಚಿ ದರ ನಿಗದಿ ಪಡಿಸಿದೆ. ಆದರೆ, ಈ ಮಾರ್ಗಸೂಚಿ ದರ ಆಧಾರಿಸಿ ಆಸ್ತಿ ತೆರಿಗೆ ವಿಧಿಸುವುದು ವೈಜ್ಞಾನಿಕ ಮಾರ್ಗವಲ್ಲ. ಇದರಿಂದ ಆಸ್ತಿ ತೆರಿಗೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಬಿಬಿಎಂಪಿ ಸರಿಯಾದ ರೀತಿಯಲ್ಲಿ ಆಸ್ತಿ ತೆರಿಗೆಯ ಬಗ್ಗೆ ಅಧ್ಯಯನ ಮಾಡದೆ ಅಥವಾ ತಪಾಸಣೆ ಮಾಡದೆ ಈ ರೀತಿ ಏಕಾಏಕಿ ಕ್ರಮ ಕೈಗೊಂಡಿರುವುದು ಆಸ್ತಿ ಮಾಲೀಕರಿಗೆ ಭಾರೀ ಹೊರೆ ಉಂಟಾಗಲಿದೆ. ಹಾಗಾಗಿ, ಈ ಹಿಂದಿನ ಪದ್ಧತಿಯನ್ನು ಮುಂದುವರೆಸುವಂತೆ ಬಿಬಿಎಂಪಿಗೆ ಸಾವಿರಾರು ಸಂಖ್ಯೆಯ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.ವಾಣಿಜ್ಯ ಬಳಕೆಯ ಆಸ್ತಿಗಳ ಮೇಲೆ ಹೆಚ್ಚಿನ ಪ್ರಮಾಣದ ತೆರಿಗೆ ವಿಧಿಸಲಾಗಿದೆ. ಇದು ಉದ್ಯಮಗಳ ಮೇಲೆ ಪರಿಣಾಮ ಉಂಟು ಮಾಡಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆಕ್ಷೇಪಣೆ ಸಲ್ಲಿಕೆಗೆ ಇಂದು ಕೊನೆಯ ದಿನ ಮಾರ್ಗಸೂಚಿ ಆಧಾರಿಸಿ ಆಸ್ತಿ ತೆರಿಗೆ ವಿಧಿಸುವ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರು ಫೆ.20 ರಂದು ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಕೆಗೆ 15 ದಿನ ಅವಕಾಶ ನೀಡಿದ್ದರು. ಮಾ.6ರ ಸಂಜೆಗೆ ಆಕ್ಷೇಪಣೆ ಸಲ್ಲಿಕೆ ಅವಧಿ ಮುಕ್ತಾಯಗೊಳ್ಳಲಿದೆ. ಅಧಿಕಾರಿಗಳು ಸಲ್ಲಿಕೆಯಾಗಿರುವ ಆಕ್ಷೇಪಣೆಗಳನ್ನು ಯಾವ ರೀತಿ ಪರಿಗಣಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.