ಕನ್ನಡಪ್ರಭ ವಾರ್ತೆ ಸಕಲೇಶಪುರ
ರೋಗಗಳು ಬರುವ ಮುನ್ನವೇ ಎಚ್ಚರ ವಹಿಸಿದರೆ ಆಸ್ಪತ್ರೆ ಹಾಗೂ ಔಷಧಿಗಳ ಅವಲಂಬನೆ ಕಡಿಮೆ ಮಾಡಬಹುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ತಾಲೂಕಿನ ಬಾಳ್ಳುಪೇಟೆಯ ಶ್ರೀ ಕೆಂಚಮ್ಮ ಮಲ್ಲೇಗೌಡ ಸಮುದಾಯ ಭವನದಲ್ಲಿ ಶುಕ್ರವಾರ ಬಿಜೆಪಿ ಮುಖಂಡ ಜಯಪ್ರಕಾಶ್ ದೊಡ್ಡದಿಣ್ಣೆ ಅವರ ನೇತೃತ್ವದಲ್ಲಿ, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಹಾಗೂ ಯುವ ವೈದ್ಯ ಡಾ. ಲಕ್ಷ್ಮಣ್ ಗಂಗಾ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಾಗಿದ್ದರೆ ಮಾತ್ರ ಸುಖ ಜೀವನ ನಡೆಸಲು ಸಾಧ್ಯ. ಇಲ್ಲದಿದ್ದರೆ ದುಡಿದ ಹಣವನ್ನೆಲ್ಲಾ ಆಸ್ಪತ್ರೆಗಳಿಗೆ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣಗಳು ಕಾಣಿಸುವುದಕ್ಕೂ ಮುನ್ನವೇ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು.ಆರೋಗ್ಯ ಶಿಬಿರಗಳು ಬಡವರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತವೆ, ಇಂತಹ ಶಿಬಿರಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸುವ ಅಗತ್ಯವಿದೆ. ಇಂದಿನ ಒತ್ತಡಪೂರ್ಣ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಾಗಿದ್ದು, ಇಂತಹ ಶಿಬಿರಗಳು ಗ್ರಾಮೀಣ ಜನತೆಗೆ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಶಿಬಿರದಲ್ಲಿ ವಿವಿಧ ವಿಭಾಗಗಳ ವೈದ್ಯರಿಂದ ಸುಮಾರು 500ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂಚಲ ಕುಮಾರಸ್ವಾಮಿ, ಶಾಸಕ ಸಿಮೆಂಟ್ ಮಂಜು ಅವರ ಧರ್ಮಪತ್ನಿ ಪ್ರತಿಭಾ ಮಂಜುನಾಥ್, ಹಿಂದೂಪರ ಸಂಘಟನೆಗಳ ಮುಖಂಡ ರಘು ಸಕಲೇಶಪುರ, ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಯಡೇಹಳ್ಳಿ ಮಂಜುನಾಥ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.