ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಭಾರತ ವಿಶ್ವದಲ್ಲೇ ಯಶಸ್ವಿ ಪ್ರಜಾಪ್ರಭುತ್ವ ದೇಶ. ೭೫ ವರ್ಷಗಳಿಂದ ಸಂವಿಧಾನಾತ್ಮಕಾಗಿ ಸಾಮಾಜಿಕ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಇದಕ್ಕೆ ಬಸವಾದಿ ಶಿವಶರಣರು ನೀಡಿರುವ ಸಮಾನತೆ, ಭಾತೃತ್ವ, ಐಕ್ಯತೆಯ ಸಂದೇಶವೇ ಕಾರಣ. ಮೊಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾಡುತ್ತಿರುವ ಸಾಮರಸ್ಯದ ಸಮಾಜೋತ್ಸವ ಕಾರ್ಯಕ್ರಮ ಬಸವ ಪರಂಪರೆ ಮುನ್ನಡೆಸುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ ಹೇಳಿದರು.ಪಟ್ಟಣದ ಗಚ್ಚಿನಮಠದ ವಿದ್ಯಾಪೀಠ ಶಾಲಾ ಆವರಣದಲ್ಲಿ ಮೋಟಗಿಮಠದ ಚನ್ನಬಸವ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ, ಸಂವಾದ, ಸಮಾನತೆ, ಸಹಾನೂಭೂತಿ ಇವು ನಮ್ಮ ಬದುಕಿನ ಜೀವಾಳವಾಗಿವೆ. ಶಿಕ್ಷಣದಿಂದ ಜ್ಞಾನ, ತಿಳುವಳಿಕೆ, ಅರಿವು ಮೂಡುತ್ತದೆ. ಸಂವಾದದಿಂದ ನಮ್ಮ ತಪ್ಪು ತಿದ್ದಿಕೊಳ್ಳಬಹುದು. ಎಲ್ಲರಲ್ಲೂ ಸಮಾನತೆ ಕಾಣಲು ಎಲ್ಲರಿಗೂ ಸಹಾನುಭೂತಿ ತೋರಬೇಕು ಎಂಬುದಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಗದುಗಿನ ಜಗದ್ಗುರು ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ವಿಶ್ವಕ್ಕೆ ಸಮಾನತೆ, ಪ್ರೀತಿ, ವಿಶ್ವಾಸ, ಮಾನವೀಯ ಮೌಲ್ಯ ತಿಳಿಸಿಕೊಟ್ಟ ವಿಶ್ವದ ೨೧೬ ಮಹಾತ್ಮರ ಚರಿತ್ರೆಗಳನ್ನ ಒಂದೇ ಗ್ರಂಥದ ಮೂಲಕ ನಾಡಿಗೆ ಪ್ರಭುಚನ್ನಬಸವ ಸ್ವಾಮೀಜಿ ಕಾರ್ಯ ಶ್ಲಾಘನೀಯವಾಗಿದೆ. ನಿತ್ಯ ಕಾಯಕದಲ್ಲಿರುವವರೇ ನಿಜವಾದ ಭಕ್ತರು ಎಂಬಂತೆ ಬಸವಣ್ಣನವ ಕಾಯಕ, ದಾಸೋಹ, ಜ್ಞಾನಪ್ರಸಾರವನ್ನು ಮೋಟಗಿಮಠ ನಿರಂತರವಾಗಿ ಮಾಡುತ್ತಿರುವುದು ಎಲ್ಲ ಮಠಾಧೀಶರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.ಶಿವಮೊಗ್ಗ ಆನಂದಪುರಮಠದ ಮುರುಘಾಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಉತ್ತರಳ್ಳಿಯ ಅವಧೂತ ಪೀಠದ ವಿನಯ ಗುರೂಜಿ ಮಾತನಾಡಿ, ಅಥಣಿ ಮಣ್ಣು ಪವಿತ್ರವಾದದ್ದು, ಇದು ಶಿವಯೋಗಿಗಳ ಸ್ಥಾನ ನಿಜವಾದ ಜ್ಞಾನವೈರಾಗ್ಯದ ಭಕ್ತಿ ಇಲ್ಲಿದೆ ಎಂದರು.
ಮುಖ್ಯ ಅತಿಥಿಯಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ ಸೋಮಶೇಖರ, ಸಂಸದೆ ಪ್ರಿಯಂಕಾ ಜಾರಕಿಹೊಳಿ ಪಾಲ್ಗೊಂಡಿದ್ದರು.ಇದೇ ವೇಳೆ ಭುವನ ಭಾಗ್ಯ ಕೃತಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಬೆಳಗಾವಿ ಡಾ.ಅಲ್ಲಮಪ್ರಭು ಸ್ವಾಮೀಜಿ, ವಿಜಯಪುರದ ಅಭಿನವ ಸಿದ್ಧಾರೂಢ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುದಗಲ್ಲದ ಮಹಾಂತ ಸ್ವಾಮೀಜಿ, ಗಣ್ಯರಾದ ಡಾ.ಸಂತೋಷ ಹಾನಗಲ್ಲ, ಕೆ.ಎ. ವನಜೋಳ, ಎಸ್.ಕೆ. ಬುಟಾಳಿ, ರಾವಸಾಬ ಐಹೊಳೆ, ಶಿವಾನಂದ ದಿವಾನಮಳ, ರಾಜು ಟೊಪಗಿ, ರಮೇಶ ಸಿಂದಗಿ ಇತರರು ಇದ್ದರು.
ಬಸವಭೂಷಣ ಪ್ರಶಸ್ತಿ ಪ್ರದಾನ: ಶ್ರೀಮಠದಿಂದ ಕೊಡಮಾಡುವ ರಾಜ್ಯಮಟ್ಟದ ಬಸವಭೂಷಣ ಪ್ರಶಸ್ತಿಯನ್ನು ಬಸವ ಪ್ರತಿಷ್ಠಾನ ಅಧ್ಯಕ್ಷ ಲಂಡನ್ನಿನ ಮಹಾದೇವಯ್ಯಾ ಅವರಿಗೆ ಪ್ರದಾನ ಮಾಡಲಾಯಿತು. ವಿದೇಶದಲ್ಲಿ ಬಸವತತ್ವ ಪ್ರಸಾರ ಮಾಡುತ್ತಿರುವ ಹೆಮ್ಮೆಯ ಕನ್ನಡಿಗರಾದ ಮಹಾದೇವಯ್ಯನವರು ನಿರಂತರವಾಗಿ ಇಂಗ್ಲೆಂಡ್ ದೇಶದಲ್ಲಿ ಬಸವ ಸಂದೇಶವನ್ನು ಮನೆ ಮನಗಳಿಗೆ ತಲುಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರ ಸೇವಾಕಾರ್ಯ ಗುರುತಿಸಿ ರಾಜ್ಯಮಟ್ಟದ ಬಸವಭೂಷಣ ಪ್ರಶಸ್ತಿ ನೀಡಲಾಯಿತು.ಸಮಾಜಸೇವಾ ಭೂಷಣ ಪ್ರಶಸ್ತಿ: ಜಮಖಂಡಿಯ ಶಾಸಕ ಜಗದೀಶ ಗುಡಗುಂಟಿಮಠ, ಧಾರವಾಡದ ಜೆ.ಎಸ್.ಎಸ್. ಮಹಾವಿದ್ಯಾಲಯದ ಡಾ.ಅಜೀತ ಪ್ರಸಾದ, ಗದುಗಿನ ತೋಂಟದಾರ್ಯಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಮೈಸೂರಿನ ಡಾ.ಚಂದ್ರಶೇಖರಯ್ಯಾ, ಬೆಂಗಳೂರಿನ ಕೆ.ವಿ. ನಾಗರಾಜಮೂರ್ತಿ, ಆನಂದ ತಾಳಿಕೊಟಿಯವರಿಗೆ ನೀಡಲಾಯಿತು.