ಧರ್ಮದ ಹಾದಿಯಲ್ಲಿ ನಡೆಯುವವರಿಗೆ ಒಳ್ಳೆಯ ಫಲ ದೊರೆಯಲಿದ್ದು, ಕೆಟ್ಟ ಕರ್ಮಗಳಲ್ಲಿ ತೊಡಗುವವರು ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಅರ್ಥದಲ್ಲಿ ಭಕ್ತರು ಈ ಹೇಳಿಕೆ ವಿಶ್ಲೇಷಿಸುತ್ತಿದ್ದಾರೆ
ಕಂಪ್ಲಿ: ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದ ಆರಾಧ್ಯದೈವ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿ ಬುಧವಾರ ತಡರಾತ್ರಿ ನಡೆದ ಗಂಗೆಸ್ಥಳ ಉತ್ಸವ, ಅಗ್ನಿಕೊಂಡ ಹಾಯುವ ಧಾರ್ಮಿಕ ಆಚರಣೆ, ತನುಗೊಡ ತರುವ ಹಾಗೂ ಪಾಸೇವು (ಹೇಳಿಕೆ) ನೀಡುವ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಈ ಸಂದರ್ಭದಲ್ಲಿ ದೇವಿಯ ಹೆಸರಿನಲ್ಲಿ ನುಡಿಯಲಾದ ಕಾರಣೀಕದ ವಿವಿಧ ಹೇಳಿಕೆಗಳು ಗ್ರಾಮಸ್ಥರು ಹಾಗೂ ಕೃಷಿಕರಲ್ಲಿ ಸಂಚಲನ ಮೂಡಿಸಿದ್ದು, ಅವುಗಳ ಅರ್ಥದ ಕುರಿತು ಗ್ರಾಮದಲ್ಲಿ ಚರ್ಚೆ ನಡೆಯುತ್ತಿದೆ.ಗುರುವಾರ ನಸುಕಿನಲ್ಲಿ ದೇವಸ್ಥಾನದ ಅರ್ಚಕ ಎಚ್.ಪಿ. ವಿರುಪಾಕ್ಷಿ ಅವರು ಪಾಸೇವು ಪಡಗದಲ್ಲಿ ಕುದಿಯುತ್ತಿದ್ದ ಅನ್ನವನ್ನು ಹೊರತೆಗೆಯುವ ಸಂದರ್ಭದಲ್ಲಿ ''''ಧರ್ಮದ ಬೆಳೆ, ಕರ್ಮದ ಮಳೆ ಎಂಬ ಪಾಸೇವು ನುಡಿದರು. ಧರ್ಮದ ಹಾದಿಯಲ್ಲಿ ನಡೆಯುವವರಿಗೆ ಒಳ್ಳೆಯ ಫಲ ದೊರೆಯಲಿದ್ದು, ಕೆಟ್ಟ ಕರ್ಮಗಳಲ್ಲಿ ತೊಡಗುವವರು ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಅರ್ಥದಲ್ಲಿ ಭಕ್ತರು ಈ ಹೇಳಿಕೆ ವಿಶ್ಲೇಷಿಸುತ್ತಿದ್ದಾರೆ.
ಅಗ್ನಿಕೊಂಡ ಹಾಯುವ ಸಂದರ್ಭದಲ್ಲಿ ಬಹುಪರಾಕ್, ಎಚ್ಚರ ಎಂಬ ಪಾಸೇವು ನುಡಿಯಲಾಗಿದೆ. ಮುಂಬರುವ ದಿನಗಳಲ್ಲಿ ಯಾವುದಾದರೂ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂಬ ಅರ್ಥದಲ್ಲಿ ಗ್ರಾಮಸ್ಥರು ಚರ್ಚಿಸುತ್ತಿದ್ದಾರೆ.ಮಳೆ ಕೊರತೆಯ ಆತಂಕ:
ಭೂಮಿತಾಯಿ ಬಾಯಿ ತೆಗೆದು ಪರಮಾತ್ಮನ ಜಪ ಮಾಡಿದಳು ಎಂಬ ಕಾರಣೀಕದ ನುಡಿ ಕೃಷಿಕರ ಗಮನ ಸೆಳೆದಿದೆ. ಈ ಹೇಳಿಕೆ ಮಳೆ ಕೊರತೆಯೊಂದಿಗೆ ತಳುಕು ಹಾಕುತ್ತಿರುವ ಗ್ರಾಮಸ್ಥರು, ಮಳೆಗಾಗಿ ಭೂಮಿ ಹಾಗೂ ಜನರು ಪರಿತಪಿಸುವ ಪರಿಸ್ಥಿತಿ ಮುಂದುವರಿಯಬಹುದೇ ಎಂಬ ಕುರಿತು ಚರ್ಚಿಸುತ್ತಿದ್ದಾರೆ. ಕೃಷಿಯನ್ನೇ ಅವಲಂಬಿಸಿರುವ ರೈತರಿಗೆ ಮಳೆಯ ಅನಿಶ್ಚಿತತೆ ಪ್ರಮುಖ ಕಳವಳವಾಗಿರುವುದರಿಂದ ಈ ನುಡಿ ಕುತೂಹಲ ಮೂಡಿಸಿದೆ.ಮೆಣಸಿನಕಾಯಿ, ಧಾನ್ಯಗಳ ಬೆಲೆ ಏರಿಕೆ ಚರ್ಚೆ: ಕೆಂಪುಕುದುರೆ ಗೆಜ್ಜೆ ಕಟ್ಟಿ ನಸುನಗುತ ಗಗನಕ್ಕೆ ಹಾರಿ ಕೈಲಾಸ ಸೇರಿತು ಎಂಬ ಕಾರಣೀಕದ ನುಡಿ ಕೆಂಪು ಮೆಣಸಿನಕಾಯಿ ಹಾಗೂ ಕೆಂಪು ಬಣ್ಣದ ಧಾನ್ಯಗಳ ಬೆಲೆ ಏರಿಕೆಯಾಗುವ ಸೂಚನೆ ಎಂದು ಕೆಲವರು ಅರ್ಥೈಸುತ್ತಿದ್ದಾರೆ. ಕೃಷಿ ಉತ್ಪನ್ನಗಳ ಬೆಲೆ ಏರಿಳಿತದ ಬಗ್ಗೆ ಈಗಾಗಲೇ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಈ ನುಡಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದೇ ರೀತಿ ''''ಮೂರಕ್ಕೆ ಆರು, ಮೂರಕ್ಕೆ ಆರು ಎಂಬ ಪಾಸೇವು ನುಡಿಯನ್ನು ಕಾಳುಕಡಿ ಹಾಗೂ ದಿನಸಿ ಸಾಮಗ್ರಿಗಳ ಬೆಲೆ ಏರಿಳಿತದೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ದಿನಸಿ ವಸ್ತುಗಳ ಬೆಲೆ ಏರಿಳಿತಗೊಂಡು ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಅರ್ಥದಲ್ಲಿ ಕೆಲ ಗ್ರಾಮಸ್ಥರು ವಿಶ್ಲೇಷಿಸುತ್ತಿದ್ದಾರೆ.ಪ್ರತಿ ವರ್ಷ ನಡೆಯುವ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ದೇವಿಯ ಹೆಸರಿನಲ್ಲಿ ನುಡಿಯುವ ಕಾರಣೀಕದ ಮಾತುಗಳು ಭಕ್ತರಲ್ಲಿ ವಿಶೇಷ ಮಹತ್ವ ಪಡೆದಿವೆ. ಈ ಬಾರಿಯೂ ದುರ್ಗಾದೇವಿಯ ಪಾಸೇವು ನುಡಿಗಳು ಕೃಷಿ, ಮಳೆ ಹಾಗೂ ಮಾರುಕಟ್ಟೆ ಬೆಲೆಗಳ ವಿಚಾರವಾಗಿ ಗ್ರಾಮಸ್ಥರ ನಡುವೆ ಚರ್ಚೆಗೆ ಗ್ರಾಸವಾಗಿವೆ. ಇವು ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ನಡೆಯುತ್ತಿರುವ ವ್ಯಾಖ್ಯಾನಗಳಾಗಿವೆ.
ಗಂಗೆಸ್ಥಳ ಉತ್ಸವದ ನಿಮಿತ್ತ ಶ್ರೀ ದುರ್ಗಾದೇವಿಯನ್ನು ಎಲೆತೋರಣ ಹಾಗೂ ವಿವಿಧ ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವಿಯ ದರ್ಶನ ಪಡೆದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.ಗ್ರಾಪಂ ಮಾಜಿ ಅಧ್ಯಕ್ಷ ಎ.ಕೆ.ಲೋಕೇಶ್,ಸದ್ಭಕ್ತ ರಫಿಕ್, ರಾಮನಗೌಡ, ಬಿ.ರಾಮಾಂಜನೇಯಲು, ಜಿ.ಶ್ರೀನಿವಾಸ, ಎಚ್.ನಾಗರಾಜ, ಮೌಲಸಾಬ್, ಎನ್.ತಿಪ್ಪಯ್ಯ, ಮಂಜುನಾಥ, ಅಂಜಿನಪ್ಪ, ತಿಮ್ಮಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.