ಸಾರಾಂಶ
ಆಲೂರುಸಿದ್ದಾಪುರ ಸಾರ್ವಜನಿಕ ಸಮುದಾಯ ಭವನದಲ್ಲಿ ಆಯುಷ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಕೊಡಗು ಜಿಲ್ಲಾ ಆಯುಷ್ ಇಲಾಖೆ, ಸೋಮವಾರಪೇಟೆ ಆಯುಷ್ ಆಸ್ಪತ್ರೆ ಮತ್ತು ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಲೂರುಸಿದ್ದಾಪುರ ಸಾರ್ವಜನಿಕ ಸಮುದಾಯ ಭವನದಲ್ಲಿ ಆಯುಷ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಯಿತು. ಆರೋಗ್ಯ ಶಿಬಿರವನ್ನು ಆಲೂರುಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಉದ್ಘಾಟಿಸಿ ಶುಭ ಹಾರೈಸಿದರು. ಸೋಮವಾರಪೇಟೆ ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ವೇತಾ ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಮತ್ತು ಆಯುಷ್ ಇಲಾಖೆ ಪ್ರತಿಯೊಂದು ಗ್ರಾ.ಪಂ. ಕೇಂದ್ರದ ವ್ಯಾಪ್ತಿಯಲ್ಲಿ ಆಯುಷ್ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುತ್ತಿದೆ. ಶಿಬಿರದಲ್ಲಿ ಆಯುಷ್ ಪದ್ಧತಿಯಂತೆ ರೋಗಿಗಳನ್ನು ಪರೀಕ್ಷಿಸಲಾಗುತ್ತಿದ್ದು ರೋಗಿಗಳಿಗೆ ಉಚಿತವಾಗಿ ಆಯುರ್ವೇದಿಕ್ ಔಷಧಿ ಮತ್ತು ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಎಂದರು.ತಾಲೂಕು ಕೇಂದ್ರದ ಆಯುಷ್ ಆಸ್ಪತ್ರೆಯಲ್ಲಿ ಎಲ್ಲಾ ತರಹದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ರೋಗಿಗಳು ಸೋಮವಾರಪೇಟೆ ತಾಲೂಕು ಆಯುಷ್ ಆಸ್ಪತ್ರೆಗೆ ಬಂದು ವೈದ್ಯರಿಂದ ಚಿಕಿತ್ಸೆ ಸೇರಿದಂತೆ ಇನ್ನಿತ್ತರ ಸೇವೆಯನ್ನು ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು. ಗ್ರಾ.ಪಂ. ಸದಸ್ಯೆ ದಮಯಂತಿ ಕರುಂಬಯ್ಯ, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಹರೀಶ್ ಮುಂತಾದವರು ಹಾಜರಿದ್ದರು. ಆರೋಗ್ಯ ಶಿಬಿರದಲ್ಲಿ ವಿವಿಧ ಕಾಯಿಲೆ, ಆರೋಗ್ಯ ಸಮಸ್ಯೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಿ ಉಚಿತ ಔಷಧಿ ಮಾತ್ರೆಗಳನ್ನು ವಿತರಿಸಲಾಯಿತು. ಆರೋಗ್ಯ ಶಿಬಿರದಲ್ಲಿ ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ. ಸೌಪರ್ಣಿಕಾ, ಸಿಬ್ಬಂದಿ ರಾಜ್‍ಕುಮಾರ್, ಅಶೋಕ್, ರೂಪಾ, ಜ್ಯೋತಿ ಪಾಲ್ಗೊಂಡಿದ್ದರು.